ನಾಗಲಕ್ಷ್ಮೀ ಚೌಧರಿ ಮೆಗ್ಗಾನ್ ಅಧಿಕಾರಿಗಳಿಗೆ ತೀವ್ರ ತರಾಟೆ- Nagalakshmi Chaudhary gives a strong taunt to the Meggan officials

 SUDDILIVE || SHIVAMOGGA

ನಾಗಲಕ್ಷ್ಮೀ ಚೌಧರಿ ಮೆಗ್ಗಾನ್ ಅಧಿಕಾರಿಗಳಿಗೆ ತೀವ್ರ ತರಾಟೆ- Nagalakshmi Chaudhary gives a strong taunt to the Meggan officials  

Nagalaksmi, visit




ಶಿವಮೊಗ್ಗ: ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಇಂದು ಭೇಟಿ ನೀಡಿ, ಮಹಿಳಾ ವಾರ್ಡ್‌ಗಳಲ್ಲಿನ ರೋಗಿಗಳ ಆರೋಗ್ಯ ವಿಚಾರಿಸುವುದರ ಜೊತೆಗೆ ಆಸ್ಪತ್ರೆಯಲ್ಲಿನ ಮೂಲಸೌಕರ್ಯ ಹಾಗೂ ವೈದ್ಯಕೀಯ ಸೇವೆಗಳ ವ್ಯವಸ್ಥೆಯನ್ನು ಪರಿಶೀಲಿಸಿದರು.


ಮಹಿಳಾ ಜನರಲ್ ವಾರ್ಡ್‌ಗೆ ತೆರಳಿದ ನಾಗಲಕ್ಷ್ಮಿ ಚೌಧರಿ ಅವರು, ರೋಗಿಗಳೊಂದಿಗೆ ನೇರವಾಗಿ ಮಾತನಾಡಿ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಔಷಧಿಗಳ ಲಭ್ಯತೆ, ಶೌಚಾಲಯದ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಈ ವೇಳೆ ಹಲವು ರೋಗಿಗಳು ಹಾಗೂ ಅವರ ಸಂಬಂಧಿಕರು ಆಸ್ಪತ್ರೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಕ್ಷರ ಗಮನಕ್ಕೆ ತಂದರು.


ಔಷಧಿ ಹೊರಗಡೆಯಿಂದ ತರುವ ದೂರು


ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳು ಲಭ್ಯವಾಗದೆ ಕೆಲವು ಔಷಧಿಗಳನ್ನು ಹೊರಗಡೆಯಿಂದ ಖರೀದಿಸಿ ತರಬೇಕಾಗಿದೆ ಎಂಬ ದೂರುಗಳು ಕೇಳಿಬಂದವು. ಮಹಿಳಾ ವಾರ್ಡ್‌ನಲ್ಲಿ ಸುಮಾರು 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಹಾಲಕೊಳ್ಳಿಯ ಸುನಿತಾ, ಗೋಂದಿ ಚಟ್ನಹಳ್ಳಿಯ ಗಾಯಿತ್ರಿ ಹಾಗೂ ಮೀನಾಕ್ಷಿ ಅವರು ಚಳಿ, ಜ್ವರ ಸೇರಿದಂತೆ ಆರೋಗ್ಯ ಸಮಸ್ಯೆಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಕೆಲವು ಔಷಧಿಗಳನ್ನು ಹೊರಗಡೆಯಿಂದ ತಂದು ನೀಡಲಾಗಿದೆ ಎಂಬ ಮಾಹಿತಿ ಅಧ್ಯಕ್ಷರ ಗಮನಕ್ಕೆ ಬಂದಿದೆ.


ಔಷಧಿಗಳನ್ನು ಹೊರಗಡೆಯಿಂದ ತರುವ ವ್ಯವಸ್ಥೆ ಇರಬಾರದು ಎಂದು ಸ್ಪಷ್ಟಪಡಿಸಿದ ನಾಗಲಕ್ಷ್ಮಿ ಚೌಧರಿ, ಆಸ್ಪತ್ರೆಯಲ್ಲಿ ಈ-ಫಾರ್ಮಸಿ ಹಾಗೂ ಡಿಜಿಟಲ್ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಔಷಧಿಗಳ ವಿತರಣೆ ಮತ್ತು ಅದರ ದಾಖಲಾತಿಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು ಎಂದು ಹೇಳಿದರು.


ಯಾವ ಔಷಧಿ ಬರೆದಿದ್ದಾರೆ, ಆಸ್ಪತ್ರೆಯಲ್ಲಿ ಅದು ಲಭ್ಯವಿದೆಯೇ, ರೋಗಿಗೆ ನೀಡಲಾಗಿದೆಯೇ ಎಂಬುದೆಲ್ಲವೂ ಡಿಜಿಟಲ್ ವ್ಯವಸ್ಥೆಯಲ್ಲಿ ದಾಖಲಾಗಬೇಕು. ಹೀಗಾಗಿ ರೋಗಿಗಳು ಹೊರಗಡೆ ಔಷಧಿ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗದಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಿದರು.


ಡಯಾಲಿಸಿಸ್‌ಗಾಗಿ ಹಣದ ಸಮಸ್ಯೆ


ಡಯಾಲಿಸಿಸ್ ಚಿಕಿತ್ಸೆಗೆ ಆಗಮಿಸಿರುವ ರೇಣುಕಾ ಎಂಬ ಮಹಿಳಾ ರೋಗಿಯ ಸಮಸ್ಯೆಯೂ ಅಧ್ಯಕ್ಷರ ಗಮನಕ್ಕೆ ಬಂದಿದೆ. ಎಪಿಎಲ್ ಕಾರ್ಡ್ ಇರುವ ಕಾರಣದಿಂದ ಡಯಾಲಿಸಿಸ್ ಚಿಕಿತ್ಸೆಗೆ ಸಂಬಂಧಿಸಿದ ಸೌಲಭ್ಯ ಪಡೆಯುವಲ್ಲಿ ತೊಂದರೆ ಎದುರಾಗಿದೆ ಎಂದು ರೋಗಿಯ ಕಡೆಯಿಂದ ಮಾಹಿತಿ ನೀಡಲಾಗಿದೆ.


ಬಡ ಕುಟುಂಬದ ಮಹಿಳೆಗೆ ಡಯಾಲಿಸಿಸ್‌ಗಾಗಿ ಹಣ ಕೇಳಲಾಗಿದೆ ಎಂಬ ವಿಚಾರವೂ ಪ್ರಸ್ತಾಪವಾಗಿದ್ದು, ಈ ಬಗ್ಗೆ ರೋಗಿಗಳಿಗೆ ಸಾಧ್ಯವಾದಷ್ಟು ನೆರವು ನೀಡುವಂತೆ ಆಸ್ಪತ್ರೆ ಸಿಬ್ಬಂದಿಗೆ ನಾಗಲಕ್ಷ್ಮಿ ಚೌಧರಿ ಸೂಚಿಸಿದರು.


ಆದರೆ, ಯಾವುದೇ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕಾದರೆ ಸೂಕ್ತ ದಾಖಲೆ ಹಾಗೂ ಸಾಕ್ಷ್ಯ ಅಗತ್ಯವಿದೆ. ದೂರು ಬಂದ ತಕ್ಷಣ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸರಿಯಲ್ಲ. ಆದರೆ ಇಂತಹ ದೂರುಗಳು ಮರುಕಳಿಸದಂತೆ ಆಸ್ಪತ್ರೆಯ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.


ಶೌಚಾಲಯ, ನೀರು ಮತ್ತು ಸ್ವಚ್ಛತೆ ಬಗ್ಗೆ ಗಂಭೀರ ಅಸಮಾಧಾನ


ಆಸ್ಪತ್ರೆಯ ಮಹಿಳಾ ವಾರ್ಡ್‌ಗಳಲ್ಲಿನ ಶೌಚಾಲಯದ ಸ್ವಚ್ಛತೆ ಕುರಿತು ರೋಗಿಗಳು ಗಂಭೀರ ದೂರುಗಳನ್ನು ನೀಡಿದರು. ಕೆಲ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಯೂ ಎದುರಾಗುತ್ತಿದೆ ಎಂದು ಮಾಧ್ಯಮದವರು ಅಧ್ಯಕ್ಷರ ಗಮನಕ್ಕೆ ತಂದರು.


ಇದಕ್ಕೆ ಪ್ರತಿಕ್ರಿಯಿಸಿದ ನಾಗಲಕ್ಷ್ಮಿ ಚೌಧರಿ, ಆಸ್ಪತ್ರೆಯಲ್ಲಿ ಒಂದು ದಿನವಾದರೂ ನೀರಿಲ್ಲದ ಪರಿಸ್ಥಿತಿ ಉಂಟಾಗಬಾರದು. ನೀರಿನ ಸಮಸ್ಯೆ ಎದುರಾದರೆ ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.


ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುತ್ತಾರೆ. ಅವರಿಗೆ ಕುಡಿಯುವ ನೀರು, ಸ್ವಚ್ಛ ಶೌಚಾಲಯ ಹಾಗೂ ಸ್ವಚ್ಛ ವಾತಾವರಣ ಕಲ್ಪಿಸುವುದು ಆಸ್ಪತ್ರೆಯ ಮೂಲಭೂತ ಜವಾಬ್ದಾರಿ. ಸಿಬ್ಬಂದಿಯ ಕಚೇರಿ ಅಥವಾ ಚೇಂಬರ್‌ನಲ್ಲಿ ಇಂತಹ ಸಮಸ್ಯೆ ಎದುರಾದರೆ ಸುಮ್ಮನೆ ಇರುತ್ತೀರಾ ಎಂದು ಪ್ರಶ್ನಿಸಿದ ಅವರು, ರೋಗಿಗಳು ಪದೇಪದೇ ದೂರು ನೀಡುವ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ ಎಂಬುದನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.


ಮುರಿದ ಕಿಟಕಿಗಳು, ಧೂಳು ಮತ್ತು ಜೇಡರ ಬಲೆ


ವಾರ್ಡ್‌ಗಳಲ್ಲಿನ ಮೂಲಸೌಕರ್ಯದ ಸ್ಥಿತಿಯ ಬಗ್ಗೆಯೂ ನಾಗಲಕ್ಷ್ಮಿ ಚೌಧರಿ ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ಕಡೆ ಕಿಟಕಿಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದು, ಕಿಟಕಿಗಳ ಸುತ್ತ ಧೂಳು ಹಾಗೂ ಜೇಡರ ಬಲೆ ಕಟ್ಟಿಕೊಂಡಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.


ಚಳಿ, ಜ್ವರ, ಕೆಮ್ಮಿನಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ವಾರ್ಡ್‌ನಲ್ಲೇ ಕಿಟಕಿಗಳು ಸರಿಯಾಗಿ ಮುಚ್ಚಲು ಸಾಧ್ಯವಾಗದಿರುವುದು ಹಾಗೂ ಸ್ವಚ್ಛತೆ ಕೊರತೆಯಾಗಿರುವುದು ಸರಿಯಲ್ಲ. ವಾರ್ಡ್‌ಗಳಿಗೆ ನಿಯಮಿತವಾಗಿ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸುವ ಜವಾಬ್ದಾರಿ ಅಧಿಕಾರಿಗಳದ್ದು ಎಂದು ಅವರು ಸೂಚಿಸಿದರು.


ಆಸ್ಪತ್ರೆಯ ಪ್ರತಿಯೊಂದು ವಾರ್ಡ್‌ನಲ್ಲೂ ಸ್ವಚ್ಛತೆ ಕಾಪಾಡಬೇಕು, ಮುರಿದ ಕಿಟಕಿಗಳು ಹಾಗೂ ಇತರ ಮೂಲಸೌಕರ್ಯಗಳನ್ನು ದುರಸ್ತಿ ಮಾಡಬೇಕು. ರೋಗಿಗಳು ಆರೋಗ್ಯವಾಗಲು ಆಸ್ಪತ್ರೆಗೆ ಬಂದಾಗ ಮತ್ತಷ್ಟು ತೊಂದರೆ ಅನುಭವಿಸುವಂತಾಗಬಾರದು ಎಂದು ಹೇಳಿದರು.


ದೂರುಗಳಿಗೆ ಕೇವಲ ತೇಪೆ ಹಚ್ಚಬಾರದು


ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ ಸಂದರ್ಭದಲ್ಲಿ ಹಲವು ಸಮಸ್ಯೆಗಳು ರೋಗಿಗಳಿಂದಲೇ ನೇರವಾಗಿ ಹೊರಬಂದಿವೆ. ಈ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ನೀಡುವುದಕ್ಕಿಂತ ಮೂಲ ಕಾರಣಗಳನ್ನು ಗುರುತಿಸಿ ಶಾಶ್ವತ ಕ್ರಮ ಕೈಗೊಳ್ಳಬೇಕಿದೆ ಎಂಬ ಮಾತುಗಳು ಕೇಳಿಬಂದವು.


ಈ ಹಿಂದೆ ಕೂಡ ಅಧಿಕಾರಿಗಳು ಹಾಗೂ ಸಚಿವರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೊರಗಡೆಯಿಂದ ಔಷಧಿ ತರಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸೂಚನೆ ನೀಡಲಾಗಿತ್ತು. ಆದರೂ ಅದೇ ರೀತಿಯ ದೂರುಗಳು ಮತ್ತೆ ಕೇಳಿಬರುತ್ತಿರುವುದು ಆಸ್ಪತ್ರೆಯ ವ್ಯವಸ್ಥೆಯ ಮೇಲ್ವಿಚಾರಣೆಯ ಬಗ್ಗೆ ಪ್ರಶ್ನೆ ಮೂಡಿಸಿದೆ.


ಈ ಬಗ್ಗೆ ಪ್ರತಿಕ್ರಿಯಿಸಿದ ನಾಗಲಕ್ಷ್ಮಿ ಚೌಧರಿ, ಸೂಕ್ತ ಸಾಕ್ಷ್ಯವಿಲ್ಲದೆ ಯಾರ ಮೇಲೂ ಆರೋಪ ಹೊರಿಸಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ವ್ಯವಸ್ಥೆಯಲ್ಲಿ ಲೋಪವಿದ್ದರೆ ಅದನ್ನು ಸರಿಪಡಿಸಬೇಕು. ಈ-ಫಾರ್ಮಸಿ ಸೇರಿದಂತೆ ಡಿಜಿಟಲ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಔಷಧಿಗಳ ವಿತರಣೆಯಲ್ಲಿ ಪಾರದರ್ಶಕತೆ ತರಲು ಸಾಧ್ಯ ಎಂದು ಹೇಳಿದರು.


ತಾಯಿ-ಮಗು ಆಸ್ಪತ್ರೆಯಲ್ಲೂ ಪರಿಶೀಲನೆ


ಮೆಗ್ಗಾನ್ ಆಸ್ಪತ್ರೆಯ ಪರಿಶೀಲನೆಯ ಬಳಿಕ ತಾಯಿ ಮತ್ತು ಮಗುವಿನ ಆಸ್ಪತ್ರೆಗೆ ತೆರಳಿ ಅಲ್ಲಿನ ವ್ಯವಸ್ಥೆಯನ್ನೂ ಪರಿಶೀಲಿಸುವುದಾಗಿ ನಾಗಲಕ್ಷ್ಮಿ ಚೌಧರಿ ತಿಳಿಸಿದರು.

ಈ ಹಿಂದೆ ತಾಯಿ-ಮಗು ಆಸ್ಪತ್ರೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗರ್ಭಿಣಿಯರು ರಸೀದಿ ಹಾಗೂ ಇತರ ಪ್ರಕ್ರಿಯೆಗಳಿಗಾಗಿ ಎರಡು–ಮೂರು ಗಂಟೆಗಳ ಕಾಲ ಸಾಲಿನಲ್ಲಿ ನಿಂತುಕೊಳ್ಳುವ ಪರಿಸ್ಥಿತಿ ಕಂಡುಬಂದಿತ್ತು. ಗರ್ಭಿಣಿಯರಿಗೆ ಇಂತಹ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯುವಂತೆ ಅಂದು ಸೂಚಿಸಲಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿದೆಯೇ ಎಂಬುದನ್ನು ರೋಗಿಗಳಿಂದಲೇ ಮಾಹಿತಿ ಪಡೆದು ಪರಿಶೀಲಿಸುವುದಾಗಿ ಅವರು ಹೇಳಿದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳು ಪ್ರಸ್ತಾಪಿಸಿರುವ ಔಷಧಿ, ನೀರು, ಶೌಚಾಲಯ, ಸ್ವಚ್ಛತೆ ಹಾಗೂ ಮೂಲಸೌಕರ್ಯ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಮುಂದಿನ ದಿನಗಳಲ್ಲಿ ಇಂತಹ ದೂರುಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕಿದೆ.

Nagalakshmi Chaudhary gives a strong taunt to the Meggan officials  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close