SUDDILIVE
ರಾಹುಲ್ ಗಾಂಧಿ ವಿರುದ್ಧದ ಪೋಸ್ಟ್ ಪ್ರಕರಣ: ಆರಗ ಜ್ಞಾನೇಂದ್ರ ಆಪ್ತನಿಗೆ ಹೈಕೋರ್ಟ್ ಮಧ್ಯಂತರ ರಿಲೀಫ್- Case regarding post against Rahul Gandhi: High Court grants interim relief to Araga Jnanendra's close associate
ಶಿವಮೊಗ್ಗ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕ ರಾಜೇಶ್ ಹಿರಿಮನೆ ಅವರಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ರಿಲೀಫ್ ನೀಡಿದೆ.
ಹೊಸನಗರ ತಾಲೂಕಿನ ಮಳಲಿ ಗ್ರಾಮದ ನಿವಾಸಿ ರಾಜೇಶ್ ಹಿರಿಮನೆ ವಿರುದ್ಧ ದಾಖಲಾಗಿದ್ದ ಪ್ರಕರಣದ ಮುಂದಿನ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ. ಹೊಸನಗರದ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದ ಪ್ರಕ್ರಿಯೆಗಳನ್ನು ಮುಂದಿನ ವಿಚಾರಣೆವರೆಗೆ ಸ್ಥಗಿತಗೊಳಿಸುವಂತೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ.
ರಾಹುಲ್ ಗಾಂಧಿ ಅವರ ಮುಖದ ಅರ್ಧ ಭಾಗಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಫೋಟೋವನ್ನು ಎಡಿಟ್ ಮಾಡಿ, “ONE AGENDA” ಎಂಬ ಶೀರ್ಷಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು ಎಂಬ ಆರೋಪ ರಾಜೇಶ್ ಹಿರಿಮನೆ ವಿರುದ್ಧ ಕೇಳಿಬಂದಿತ್ತು.
ಈ ಸಂಬಂಧ ಹೊಸನಗರ-ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 353(2) ಅಡಿಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಲಾಗಿತ್ತು. ಪ್ರಕರಣದ ಮುಂದಿನ ವಿಚಾರಣಾ ಪ್ರಕ್ರಿಯೆಯನ್ನು ಪ್ರಶ್ನಿಸಿ ರಾಜೇಶ್ ಹಿರಿಮನೆ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು, ಹೊಸನಗರ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದ ಪ್ರಕ್ರಿಯೆಗಳಿಗೆ ಮುಂದಿನ ವಿಚಾರಣೆವರೆಗೆ ತಡೆ ನೀಡಿದೆ. ಇದರಿಂದ ಅರ್ಜಿದಾರರಿಗೆ ಮಧ್ಯಂತರ ರಿಲೀಫ್ ದೊರೆತಂತಾಗಿದೆ.
ಅರ್ಜಿದಾರರ ಪರವಾಗಿ ಖ್ಯಾತ ವಕೀಲ ಅರುಣ್ ಶ್ಯಾಮ್ ಅವರ ಮಾರ್ಗದರ್ಶನದಲ್ಲಿ ವಕೀಲ ಸುಯೋಗ್ ವಾದ ಮಂಡಿಸಿದ್ದರು.
Case regarding post against Rahul Gandhi: High Court grants interim relief to Araga Jnanendra's close associate
