SUDDILIVE || SHIVAMOGGA
ಸೈನ್ಸ್ ಮೈದಾನದಲ್ಲಿ ಗಣೇಶ ಮೂರ್ತಿಗಳ ಭರ್ಜರಿ ಖರೀದಿ ಹಾಗೂ ಮಾರಾಟ: ಭಕ್ತರಿಂದ ಕಳೆಕಟ್ಟಿದ ಹಬ್ಬ-Huge buying and selling of Ganesh idols at Science Ground: Festival marred by devotees
ನಂಜಪ್ಪ ಲೇಔಟ್ ನ ಶ್ರೀ ವಿದ್ಯಾಗಣಪತಿ
ಶಿವಮೊಗ್ಗ: ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಶಿವಮೊಗ್ಗ ನಗರ ಸಜ್ಜಾಗಿದ್ದು, ನಗರದ ಸೈನ್ಸ್ ಮೈದಾನದಲ್ಲಿ ಗಣೇಶ ಮೂರ್ತಿಗಳ ಖರೀದಿ ಭರ್ಜರಿಯಾಗಿ ನಡೆಯುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಸಾವಿರಾರು ವಿವಿಧ ಆಕಾರ, ಅಳತೆ ಹಾಗೂ ವಿನ್ಯಾಸಗಳ ಗಣೇಶ ಮೂರ್ತಿಗಳನ್ನು ಸೈನ್ಸ್ ಮೈದಾನದಲ್ಲಿ ಮಾರಾಟಕ್ಕೆ ಇಡಲಾಗಿದ್ದು, ಭಕ್ತರು ಉತ್ಸಾಹದಿಂದ ಮೂರ್ತಿಗಳನ್ನು ಖರೀದಿಸಿ ಮನೆಗಳಿಗೆ ಕೊಂಡೊಯ್ಯುತ್ತಿದ್ದಾರೆ.
ಸೈನ್ಸ್ ಮೈದಾನಕ್ಕೆ ಬೆಳಗ್ಗೆಯಿಂದಲೇ ನಗರದ ವಿವಿಧ ಭಾಗಗಳಿಂದ ಭಕ್ತರು ಹಾಗೂ ಗಣೇಶನನ್ನು ಮನೆಗಳಲ್ಲಿ ಪ್ರತಿಷ್ಠಾಪಿಸುವ ಕುಟುಂಬಗಳು ಆಗಮಿಸುತ್ತಿದ್ದಾರೆ. ವಾಹನಗಳಲ್ಲಿ ಕುಟುಂಬ ಸಮೇತರಾಗಿ ಆಗಮಿಸುತ್ತಿರುವ ಭಕ್ತರು ತಮಗೆ ಇಷ್ಟವಾದ ಗಣೇಶ ಮೂರ್ತಿಯನ್ನು ಆಯ್ಕೆ ಮಾಡಿಕೊಂಡು ಖರೀದಿಸಿ ಮನೆಗೆ ಕೊಂಡೊಯ್ಯುತ್ತಿರುವ ದೃಶ್ಯ ಕಂಡುಬರುತ್ತಿದೆ.
ತಮಟೆ-ಬಾಜಾ, ಭಜಂತ್ರಿ, ಘೋಷಣೆಗಳೊಂದಿಗೆ ಸಂಭ್ರಮ
ಗಣೇಶ ಮೂರ್ತಿ ಖರೀದಿಸುವ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ತಮಟೆ, ಬಾಜಾ ಹಾಗೂ ಭಜಂತ್ರಿಗಳ ಸದ್ದು ಕೇಳಿಬರುತ್ತಿದ್ದು, ಗಣಪತಿ ಬಪ್ಪಾ ಮೋರಿಯಾ ಸೇರಿದಂತೆ ವಿವಿಧ ಘೋಷಣೆಗಳು ಮೊಳಗುತ್ತಿವೆ. ಇದರಿಂದ ಸೈನ್ಸ್ ಮೈದಾನ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬದ ವಾತಾವರಣ ಮತ್ತಷ್ಟು ಕಳೆಗಟ್ಟಿದೆ.
ಕೆಲವರು ಸರಳವಾದ ಗಣೇಶ ಮೂರ್ತಿಗಳನ್ನು ಆಯ್ಕೆ ಮಾಡುತ್ತಿದ್ದರೆ, ಇನ್ನು ಕೆಲವರು ವಿಶೇಷ ಅಲಂಕಾರ ಹಾಗೂ ವಿಭಿನ್ನ ವಿನ್ಯಾಸಗಳ ಮೂರ್ತಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಮನೆಗಳಲ್ಲಿ ಪ್ರತಿಷ್ಠಾಪಿಸಲು ಸೂಕ್ತವಾಗುವಂತೆ ವಿವಿಧ ಗಾತ್ರದ ಮೂರ್ತಿಗಳು ಲಭ್ಯವಿರುವುದರಿಂದ ಭಕ್ತರಿಗೆ ಆಯ್ಕೆಯ ಅವಕಾಶವೂ ಹೆಚ್ಚಾಗಿದೆ.
₹350ರಿಂದ ₹12,500ರವರೆಗೆ ಮೂರ್ತಿಗಳ ಮಾರಾಟ
ಸೈನ್ಸ್ ಮೈದಾನದಲ್ಲಿ ವಿವಿಧ ಅಳತೆಯ ಗಣೇಶ ಮೂರ್ತಿಗಳು ಮಾರಾಟಕ್ಕೆ ಲಭ್ಯವಿದ್ದು, ಸುಮಾರು ₹350ರಿಂದ ₹12,500ರವರೆಗೆ ವಿವಿಧ ದರಗಳಲ್ಲಿ ಹಾಗೂ ಅಡಿ ಲೆಕ್ಕಾಚಾರದದಲ್ಲಿ ಮೂರ್ತಿಗಳ ಮಾರಾಟ ನಡೆಯುತ್ತಿದೆ. ಗಾತ್ರ, ವಿನ್ಯಾಸ ಮತ್ತು ಅಲಂಕಾರಕ್ಕೆ ಅನುಗುಣವಾಗಿ ಮೂರ್ತಿಗಳ ಬೆಲೆಯಲ್ಲಿ ವ್ಯತ್ಯಾಸವಿದೆ. ಮನೆಗಳಲ್ಲಿ ಕೂರಿಸುವ ಮೂರ್ತಿಗಳು ಸಹ ಗಾತ್ರ ಅಲಂಕಾರ ನೋಡಿಕೊಂಡು ಮಾರಾಟ ಮಾಡಲಾಗುತ್ತಿದೆ.
ಬೆಳಗ್ಗೆಯಿಂದಲೇ ಗಣೇಶ ಮೂರ್ತಿಗಳ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಮಾರಾಟಗಾರರಲ್ಲಿಯೂ ಉತ್ಸಾಹ ಕಂಡುಬಂದಿದೆ. ಭಕ್ತರು ಮೂರ್ತಿಗಳನ್ನು ಎಚ್ಚರಿಕೆಯಿಂದ ವಾಹನಗಳಲ್ಲಿ ಇರಿಸಿಕೊಂಡು ಮನೆಗಳತ್ತ ತೆರಳುತ್ತಿದ್ದಾರೆ.
ಸರದಿ ಸಾಲಿನಲ್ಲಿ ವಾಹನಗಳು; ಸಂಚಾರಕ್ಕೆ ವ್ಯವಸ್ಥೆ
ಗಣೇಶ ಮೂರ್ತಿಗಳ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸೈನ್ಸ್ ಮೈದಾನದ ಸುತ್ತಮುತ್ತ ಕೆಲ ಸಮಯಗಳಲ್ಲಿ ವಾಹನ ದಟ್ಟಣೆ ಕಂಡುಬರುತ್ತಿದೆ. ಭಕ್ತರು ಸರದಿ ಸಾಲಿನಲ್ಲಿ ವಾಹನಗಳನ್ನು ನಿಲ್ಲಿಸಿ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ.
ಸಂಚಾರ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಂಬಂಧಪಟ್ಟವರು ಸಂಚಾರ ವ್ಯವಸ್ಥೆ ಕಲ್ಪಿಸಿದ್ದಾರೆ. ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಗಣೇಶ ಮೂರ್ತಿ ಖರೀದಿ ಹಾಗೂ ಸಾಗಾಟದ ವೇಳೆ ಯಾವುದೇ ಗೊಂದಲ ಉಂಟಾಗದಂತೆ ವ್ಯವಸ್ಥೆ ಮಾಡಲಾಗಿದೆ.
ಒಟ್ಟಾರೆ, ಗೌರಿ-ಗಣೇಶ ಹಬ್ಬದ ಮುನ್ನಾದಿನವೇ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಗಣೇಶ ಮೂರ್ತಿಗಳ ಖರೀದಿ ಜೋರಾಗಿದ್ದು, ತಮಟೆ-ಬಾಜಾ, ಭಜಂತ್ರಿ ಹಾಗೂ ಭಕ್ತರ ಘೋಷಣೆಗಳಿಂದ ಮೈದಾನ ಹಬ್ಬದ ಸಂಭ್ರಮದಲ್ಲಿ ಮುಳುಗಿದೆ.
Huge buying and selling of Ganesh idols at Science Ground: Festival marred by devotees

