SUDDILIVE || SHIVAMOGGA
ಕೆನೆಡಾಕ್ಕೆ ಕುವೆಂಪು ವಿವಿ ಉಪ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಪ್ರವಾಸ-ಶೋಕಾಸ್ ನೋಟೀಸ್-Vice Chancellor of Kuvempu University Sarath Ananthamurthy Tour for Canada-Showcase Notice
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿರುವ ಕರ್ನಾಟಕ ರಾಜ್ಯಪಾಲರ ಪೂರ್ವಾನುಮತಿ ಪಡೆಯದೆ ವೈಯಕ್ತಿಕ ಕಾರಣಗಳಿಗಾಗಿ ಹಲವು ಬಾರಿ ಕೆನಡಾಕ್ಕೆ ವಿದೇಶ ಪ್ರವಾಸ ಕೈಗೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯಪಾಲರ ಸಚಿವಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ಮಾಧ್ಯಮಗಳು ಸುದ್ದಿ ಮಾಡಿವೆ.
ಕರ್ನಾಟಕ ರಾಜ್ಯಪಾಲರ ಸಚಿವಾಲಯವು 2026ರ ಸೆಪ್ಟೆಂಬರ್ 2ರಂದು ಜಿಎಸ್ 07 ಕೆಪಿಎಂ 2024 (ಪಿ-1) ಸಂಖ್ಯೆಯ ನೋಟಿಸ್ ಹೊರಡಿಸಿದ್ದು, ಉಪ ಕುಲಪತಿ ಹುದ್ದೆಯಲ್ಲಿದ್ದ ಸಂದರ್ಭದಲ್ಲಿ ಪೂರ್ವಾನುಮತಿ ಪಡೆಯದೆ ಕೈಗೊಂಡಿರುವ ವಿದೇಶ ಪ್ರವಾಸಗಳ ಕುರಿತು ಸಮಗ್ರ ವಿವರಣೆ ನೀಡುವಂತೆ ಸೂಚಿಸಿದೆ ಎಂದು ಪ್ರಕಟಿಸಿದೆ.
ನಾಲ್ಕು ಬಾರಿ ಕೆನಡಾ ಪ್ರವಾಸ
ನೋಟಿಸ್‌ನಲ್ಲಿ ಪ್ರೊ. ಶರತ್ ಅನಂತಮೂರ್ತಿ ಅವರು ನಾಲ್ಕು ಸಂದರ್ಭಗಳಲ್ಲಿ ಕೆನಡಾಕ್ಕೆ ಪ್ರವಾಸ ಕೈಗೊಂಡಿರುವುದನ್ನು ಉಲ್ಲೇಖಿಸಲಾಗಿದೆ.
ಮೊದಲ ಪ್ರವಾಸ:
2024ರ ಜೂನ್ 19ರಿಂದ ಜುಲೈ 11ರವರೆಗೆ ಸುಮಾರು 23 ದಿನಗಳ ಕಾಲ ಕೆನಡಾಕ್ಕೆ ತೆರಳಿದ್ದರು. ಈ ಪ್ರವಾಸವನ್ನು ವೈಯಕ್ತಿಕ ಕಾರಣಕ್ಕಾಗಿ ಕೈಗೊಂಡಿದ್ದು, ರಾಜ್ಯಪಾಲರ ಕಚೇರಿಯಿಂದ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಎರಡನೇ ಪ್ರವಾಸ:
2024ರ ಡಿಸೆಂಬರ್ 16ರಿಂದ 2025ರ ಜನವರಿ 6ರವರೆಗೆ ಸುಮಾರು 24 ದಿನಗಳ ಕಾಲ ಕೆನಡಾಕ್ಕೆ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿಯೂ ವೈಯಕ್ತಿಕ ಕಾರಣವನ್ನು ನೀಡಲಾಗಿದ್ದು, ರಾಜ್ಯಪಾಲರ ಪೂರ್ವಾನುಮತಿ ಪಡೆಯಲಾಗಿರಲಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಮೂರನೇ ಪ್ರವಾಸ:
2025ರ ಜುಲೈ 14ರಿಂದ ಜುಲೈ 25ರವರೆಗೆ ಸುಮಾರು 12 ದಿನಗಳ ಕಾಲ ಕೆನಡಾಕ್ಕೆ ತೆರಳಿದ್ದರು. ಈ ಪ್ರವಾಸಕ್ಕೂ ವೈಯಕ್ತಿಕ ಕಾರಣವನ್ನು ನೀಡಲಾಗಿತ್ತು. ಆದರೆ, ರಾಜ್ಯಪಾಲರ ಕಚೇರಿಯಿಂದ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ಸಚಿವಾಲಯದ ನೋಟಿಸ್‌ನಲ್ಲಿ ಹೇಳಲಾಗಿದೆ.
ನಾಲ್ಕನೇ ಪ್ರವಾಸ:
2026ರ ಆಗಸ್ಟ್ 17ರಿಂದ ಸೆಪ್ಟೆಂಬರ್ 9ರವರೆಗೆ ಸುಮಾರು 20 ದಿನಗಳ ಕಾಲ ಕೆನಡಾಕ್ಕೆ ತೆರಳಿದ್ದರು. ಈ ಪ್ರವಾಸವನ್ನೂ ವೈಯಕ್ತಿಕ ಕಾರಣಕ್ಕಾಗಿ ಕೈಗೊಂಡಿದ್ದು, ಈ ಸಂದರ್ಭದಲ್ಲಿಯೂ ರಾಜ್ಯಪಾಲರ ಪೂರ್ವಾನುಮತಿ ಪಡೆಯಲಾಗಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಸೂಕ್ತ ಕ್ರಮ ಏಕೆ ಕೈಗೊಳ್ಳಬಾರದು?
ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಾಧಿಪತಿಯಾಗಿರುವ ರಾಜ್ಯಪಾಲರ ಪೂರ್ವಾನುಮತಿ ಪಡೆಯದೆ ಮೇಲ್ಕಂಡ ವಿದೇಶ ಪ್ರವಾಸಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ, ತಮ್ಮ ವಿರುದ್ಧ ಸೂಕ್ತ ಕ್ರಮ ಏಕೆ ಕೈಗೊಳ್ಳಬಾರದು ಎಂಬುದಕ್ಕೆ ಕಾರಣ ತಿಳಿಸುವಂತೆ ಪ್ರೊ. ಶರತ್ ಅನಂತಮೂರ್ತಿ ಅವರಿಗೆ ರಾಜ್ಯಪಾಲರ ಸಚಿವಾಲಯ ಸೂಚಿಸಿದೆ.
ಪ್ರತಿ ವಿದೇಶ ಪ್ರವಾಸದ ಸಂದರ್ಭದಲ್ಲಿನ ಪರಿಸ್ಥಿತಿಗಳು, ಪ್ರವಾಸ ಕೈಗೊಳ್ಳಲು ಕಾರಣಗಳು ಹಾಗೂ ಪ್ರವಾಸಕ್ಕೂ ಮುನ್ನ ರಾಜ್ಯಪಾಲರ ಕಚೇರಿಯಿಂದ ಪೂರ್ವಾನುಮತಿ ಪಡೆಯದಿರುವುದಕ್ಕೆ ಕಾರಣವೇನು ಎಂಬುದನ್ನು ವಿವರವಾಗಿ ತಿಳಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಏಳು ದಿನಗಳೊಳಗೆ ಲಿಖಿತ ಉತ್ತರ
ನೋಟಿಸ್‌ಗೆ ಬೆಂಬಲವಾಗಿ ಅವಲಂಬಿಸಿರುವ ಎಲ್ಲ ಸಂಬಂಧಿತ ದಾಖಲೆಗಳು ಹಾಗೂ ಪೂರಕ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಲಿಖಿತ ಉತ್ತರವನ್ನು ನೋಟಿಸ್ ಸ್ವೀಕರಿಸಿದ ದಿನದಿಂದ ಏಳು ದಿನಗಳೊಳಗೆ ರಾಜ್ಯಪಾಲರ ಸಚಿವಾಲಯಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.
ನಿಗದಿತ ಅವಧಿಯೊಳಗೆ ಉತ್ತರ ಸಲ್ಲಿಸದಿದ್ದಲ್ಲಿ, ತಮ್ಮ ಬಳಿ ಯಾವುದೇ ವಿವರಣೆ ಇಲ್ಲ ಎಂದು ಪರಿಗಣಿಸಲಾಗುವುದು. ಬಳಿಕ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಹಾಗೂ ಕಾನೂನುಬದ್ಧವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯಪಾಲರ ಸಚಿವಾಲಯ ಎಚ್ಚರಿಕೆ ನೀಡಿದೆ.
ಪ್ರೊ. ಶರತ್ ಅನಂತಮೂರ್ತಿ ಅವರು ರಾಜ್ಯಪಾಲರ ಸಚಿವಾಲಯಕ್ಕೆ ನೀಡುವ ವಿವರಣೆಯ ಆಧಾರದ ಮೇಲೆ ಮುಂದಿನ ಕ್ರಮದ ಸ್ವರೂಪ ನಿರ್ಧಾರವಾಗುವ ಸಾಧ್ಯತೆ ಇದೆ.
ಸಮಸ್ಯೆ ಬಗೆಹರಿದಿದೆ’
ಇದು ತೀರಾ ವೈಯಕ್ತಿಕ ವಿಚಾರ. ನನ್ನ ಕುಟುಂಬ ಕೆನಡಾದಲ್ಲಿ ಇರುವುದರಿಂದ ಎರಡು ಬಾರಿ ಅನುಮತಿ ಪಡೆದೇ ಹೋಗಿದ್ದೇನೆ. ಇನ್ನೂ ಎರಡು ಬಾರಿ ಅನುಮತಿ ಸಿಗುವುದು ವಿಳಂಬವಾಗಿದೆ. ರಾಜ್ಯಪಾಲರ ಕಚೇರಿಗೆ ಯಾರೋ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಅದಕ್ಕೆ (ನೋಟಿಸ್) ಉತ್ತರ ಕೊಟ್ಟಿದ್ದೇನೆ. ಈಗ ಸಮಸ್ಯೆ ಬಗೆಹರಿದಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
Vice Chancellor of Kuvempu University for Canada. Sarath Ananthamurthy Tour-Showcase Notice
