SUDDILIVE || SHIVAMOGGA
ಶಿವಮೊಗ್ಗ ದಸರಾ ವಿಜೃಂಭಣೆಯಿಂದ ಆಚರಣೆಗೆ ಆಗ್ರಹ; ಪೂರ್ವಸಿದ್ಧತೆ ತಕ್ಷಣ ಆರಂಭಿಸಲು ಎಚ್.ಸಿ. ಯೋಗೇಶ್ ಮನವಿ-Demand for grand celebration of Shivamogga Dasara; H.C. Yogesh urges immediate commencement of preparations
ಶಿವಮೊಗ್ಗ: ಪ್ರತಿವರ್ಷದಂತೆ 2026ನೇ ಸಾಲಿನ ನಾಡಹಬ್ಬ ದಸರಾ ಮಹೋತ್ಸವವನ್ನು ಶಿವಮೊಗ್ಗ ನಗರದಲ್ಲಿ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ವಿಜೃಂಭಣೆಯಿಂದ ಆಚರಿಸಲು ಅಗತ್ಯ ಪೂರ್ವಸಿದ್ಧತಾ ಕಾರ್ಯಗಳನ್ನು ತಕ್ಷಣ ಆರಂಭಿಸಬೇಕು ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ 2023ರ ಅಭ್ಯರ್ಥಿ ಎಚ್.ಸಿ. ಯೋಗೇಶ್ ಆಗ್ರಹಿಸಿದ್ದಾರೆ.
ಈ ಸಂಬಂಧ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ ಅವರು, ದಸರಾ ಮಹೋತ್ಸವದ ಕಾರ್ಯಕ್ರಮಗಳ ವ್ಯಾಪ್ತಿ ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದಿಂದ ಹೆಚ್ಚುವರಿ ಅನುದಾನ ಪಡೆಯಲು ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಶಿವಮೊಗ್ಗ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿಗೆ ಅಗತ್ಯವಿರುವ ಆನೆಗಳ ಲಭ್ಯತೆ ಹಾಗೂ ಅನುಮತಿಗಳ ಕುರಿತು ಅರಣ್ಯ ಸಚಿವರಿಗೆ ಮುಂಚಿತವಾಗಿ ಪತ್ರ ಬರೆದು, ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಒಂಬತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಒತ್ತು
ದಸರಾ ಅಂಗವಾಗಿ ಒಂಬತ್ತು ದಿನಗಳ ಕಾಲ ಸಂಗೀತ, ನೃತ್ಯ, ನಾಟಕ, ಜನಪದ ಕಲೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಿಯಾ ಯೋಜನೆ ರೂಪಿಸಬೇಕು. ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಕಲಾವಿದರು, ಕಲಾ ತಂಡಗಳು ಹಾಗೂ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮಕ್ಕಳು, ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರನ್ನು ಒಳಗೊಂಡಂತೆ ವಿವಿಧ ಸಾಂಸ್ಕೃತಿಕ ಮತ್ತು ಸಾರ್ವಜನಿಕ ಸ್ಪರ್ಧೆಗಳನ್ನು ಆಯೋಜಿಸಿ, ಹೆಚ್ಚಿನ ಸಂಖ್ಯೆಯ ನಾಗರಿಕರು ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
8ರಿಂದ 15 ಉಪಸಮಿತಿಗಳ ರಚನೆಗೆ ಸಲಹೆ
ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳ ಪರಿಣಾಮಕಾರಿ ನಿರ್ವಹಣೆಗಾಗಿ ಅಗತ್ಯತೆಗೆ ಅನುಗುಣವಾಗಿ 8ರಿಂದ 15 ಉಪಸಮಿತಿಗಳನ್ನು ರಚಿಸಿ, ಪ್ರತಿ ಸಮಿತಿಗೆ ಮುಖ್ಯಸ್ಥರನ್ನು ನೇಮಿಸಿ ನಿರ್ದಿಷ್ಟ ಜವಾಬ್ದಾರಿ ವಹಿಸಬೇಕು ಎಂದು ಎಚ್.ಸಿ. ಯೋಗೇಶ್ ಸಲಹೆ ನೀಡಿದ್ದಾರೆ.
ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಪೊಲೀಸ್, ಅರಣ್ಯ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಆರೋಗ್ಯ ಇಲಾಖೆ, ಮೆಸ್ಕಾಂ ಸೇರಿದಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಪ್ರತಿಯೊಂದು ಇಲಾಖೆಯ ಜವಾಬ್ದಾರಿಗಳನ್ನು ನಿಗದಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಮೂಲಸೌಕರ್ಯಕ್ಕೆ ಮುಂಚಿತ ಸಿದ್ಧತೆ
ದಸರಾ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ವೇದಿಕೆ, ವಿದ್ಯುತ್, ಧ್ವನಿ, ಬೆಳಕಿನ ಅಲಂಕಾರ, ಸ್ವಚ್ಛತೆ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ, ಪಾರ್ಕಿಂಗ್, ಸಂಚಾರ ನಿಯಂತ್ರಣ, ವೈದ್ಯಕೀಯ ಸೌಲಭ್ಯ ಹಾಗೂ ಸಾರ್ವಜನಿಕರ ಭದ್ರತೆಗೆ ಅಗತ್ಯ ವ್ಯವಸ್ಥೆಗಳನ್ನು ಮುಂಚಿತವಾಗಿ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾರ್ಯಕ್ರಮಗಳ ದಿನಾಂಕವಾರು ವೇಳಾಪಟ್ಟಿ, ಜವಾಬ್ದಾರಿಗಳು ಮತ್ತು ಅಗತ್ಯ ಬಜೆಟ್‌ಗಳನ್ನು ಒಳಗೊಂಡ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ, ದಸರಾ ಪೂರ್ವಸಿದ್ಧತಾ ಕಾರ್ಯಗಳನ್ನು ತಕ್ಷಣ ಆರಂಭಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಶಿವಮೊಗ್ಗ ದಸರಾ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಪ್ರಮುಖ ಸಾರ್ವಜನಿಕ ಉತ್ಸವವಾಗಿದ್ದು, ಸ್ಥಳೀಯ ಕಲಾವಿದರು ಹಾಗೂ ಜಿಲ್ಲೆಯ ಜನತೆಯ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಈ ಬಾರಿಯ ದಸರಾವನ್ನು ಇನ್ನಷ್ಟು ವ್ಯವಸ್ಥಿತವಾಗಿ ಹಾಗೂ ಪರಿಣಾಮಕಾರಿಯಾಗಿ ಆಯೋಜಿಸಬೇಕು ಎಂದು ಎಚ್.ಸಿ. ಯೋಗೇಶ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಶಿವಕುಮಾರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಪಾಷಾ, ಆಶ್ರಯ ಸಮಿತಿ ಸದಸ್ಯರಾದ ಮುನ್ನ ಹಾಗೂ ಯಮುನಾ ರಂಗೇಗೌಡ, ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಚ್. ಪಾಲಾಕ್ಷಿ, ರೇಖಾ ರಂಗನಾಥ್, ಆರ್.ಸಿ. ನಾಯಕ್, ಶಿವಮೊಗ್ಗ-ಭದ್ರಾವತಿ ನಗರ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಶಶಾಂಕ್ ಸಜ್ಜನ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಚಿನ್ನಪ್ಪ, ರಂಗೇಗೌಡ, ಜ್ಯೋತಿ ಹರಳಪ್ಪ, ಲಕ್ಷ್ಮಣ್, ಅಗ್ನಿ ಶಿವು ಹಾಗೂ ಶರತ್ ಎಸ್.ಕೆ. ಉಪಸ್ಥಿತರಿದ್ದರು.
