SUDDILIVE || SHIVAMOGGA
ಶಿವಮೊಗ್ಗ ದಸರಾ: ‘ಕಾರ್ಮಿಕರ ದಸರಾ’ ಆಯೋಜಿಸಲು ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ-Shivamogga Dasara: State Unorganized Workers' Union urges organization of 'Workers' Dasara'
ಶಿವಮೊಗ್ಗ: 2026ನೇ ಸಾಲಿನ ಶಿವಮೊಗ್ಗ ದಸರಾ ಉತ್ಸವದಲ್ಲಿ ವಿವಿಧ ವಿಭಾಗಗಳ ದಸರಾ ಕಾರ್ಯಕ್ರಮಗಳ ಜೊತೆಗೆ ‘ಕಾರ್ಮಿಕರ ದಸರಾ’ ಕಾರ್ಯಕ್ರಮವನ್ನೂ ಆಯೋಜಿಸಬೇಕು ಎಂದು ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಆಗ್ರಹಿಸಿದೆ.
ಈ ಸಂಬಂಧ ಸಂಘದ ವತಿಯಿಂದ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದ್ದು, ದಸರಾ ಉತ್ಸವದಲ್ಲಿ ಕಾರ್ಮಿಕ ಸಮುದಾಯಕ್ಕೂ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಜನಜೀವನದೊಂದಿಗೆ ಹಾಸುಹೊಕ್ಕಾಗಿರುವ ಪೌರ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಸಾರಿಗೆ ಕ್ಷೇತ್ರದ ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳ ಕಾರ್ಮಿಕರು ಪ್ರತಿನಿತ್ಯ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇಂತಹ ಕಾರ್ಮಿಕರನ್ನು ದಸರಾ ಉತ್ಸವದ ಭಾಗವನ್ನಾಗಿ ಮಾಡುವ ಉದ್ದೇಶದಿಂದ ಪ್ರತ್ಯೇಕ ‘ಕಾರ್ಮಿಕರ ದಸರಾ’ ಕಾರ್ಯಕ್ರಮ ನಡೆಸಬೇಕು ಎಂದು ಸಂಘ ಮನವಿಯಲ್ಲಿ ತಿಳಿಸಿದೆ.
ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ಬರುವ ವಿವಿಧ ವಲಯಗಳ ಕಾರ್ಮಿಕರು ಸೇರಿದಂತೆ ಕಾರ್ಮಿಕ ಸಮುದಾಯದವರನ್ನು ಕಾರ್ಯಕ್ರಮದಲ್ಲಿ ಒಳಗೊಳ್ಳಬೇಕು. ಕಾರ್ಮಿಕರ ಸೇವೆಯನ್ನು ಗುರುತಿಸಿ, ಅವರಿಗಾಗಿ ಸಾಂಸ್ಕೃತಿಕ ಹಾಗೂ ಗೌರವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದಸರಾ ಉತ್ಸವವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.
ಕಾರ್ಮಿಕರ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಕೊಡುಗೆಯನ್ನು ಗುರುತಿಸುವ ನಿಟ್ಟಿನಲ್ಲಿ ‘ಕಾರ್ಮಿಕರ ದಸರಾ’ ಕಾರ್ಯಕ್ರಮ ಮಹತ್ವದ್ದಾಗಲಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘದ ರಾಜ್ಯ ಹಾಗೂ ಶಿವಮೊಗ್ಗ ಮಹಾನಗರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Shivamogga Dasara: State Unorganized Workers' Union urges organization of 'Workers' Dasara'
