‘ನಮ್ಮವರು ಜನಪ್ರತಿನಿಧಿಗಳೋ, ದನ ಪ್ರತಿನಿಧಿಗಳೋ ತಿಳಿಯುತ್ತಿಲ್ಲ’ ಎಂದು ವಾಗ್ದಾಳಿ- "It is unclear whether our representatives are representatives of the people or representatives of cattle," came the scathing remark

 SUDDILIVE || SHIVAMOGGA

‘ನಮ್ಮವರು ಜನಪ್ರತಿನಿಧಿಗಳೋ, ದನ ಪ್ರತಿನಿಧಿಗಳೋ ತಿಳಿಯುತ್ತಿಲ್ಲ’ ಎಂದು ವಾಗ್ದಾಳಿ- "It is unclear whether our representatives are representatives of the people or representatives of cattle," came the scathing remark  
Kasturi, rangan

ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಯಾವುದೇ ಕಾರಣಕ್ಕೂ ಅದನ್ನು ಜಾರಿಗೆ ತರಬಾರದು ಎಂದು ಮಲೆನಾಡು ರೈತ ಹೋರಾಟ ಸಂಘದ ಸಂಚಾಲಕ ತೀನಾ ಶ್ರೀನಿವಾಸ್ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರು, ರೈತರು ಹಾಗೂ ಗ್ರಾಮ ಪಂಚಾಯಿತಿಗಳೊಂದಿಗೆ ಸಮರ್ಪಕವಾಗಿ ಚರ್ಚಿಸದೆ ವರದಿಯನ್ನು ಜಾರಿಗೆ ತರಲು ಮುಂದಾಗಿರುವುದು ಸರಿಯಲ್ಲ. ಉಪಗ್ರಹದ ಮೂಲಕ ಮೇಲಿನಿಂದ ಪಶ್ಚಿಮ ಘಟ್ಟ ಪ್ರದೇಶವನ್ನು ನೋಡಿದಾಗ ಹಸಿರು ಕಾಣಿಸುವ ಕಾರಣ ಇಡೀ ಪ್ರದೇಶವನ್ನೇ ಅರಣ್ಯವೆಂದು ಪರಿಗಣಿಸುವ ರೀತಿಯಲ್ಲಿ ವರದಿ ರೂಪಿಸಲಾಗಿದೆ ಎಂದು ಅವರು ಟೀಕಿಸಿದರು.

ಈಗಾಗಲೇ ರಾಜ್ಯ ಸರ್ಕಾರ ಹಲವು ಬಾರಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿದೆ. ಇದೀಗ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಇದು ಸಂಪೂರ್ಣ ಅವೈಜ್ಞಾನಿಕ ಹಾಗೂ ಕಸದ ಬುಟ್ಟಿಗೆ ಎಸೆಯಬೇಕಾದಂತಹ ಯೋಜನೆಯಾಗಿದೆ ಎಂದು ತೀನಾ ಶ್ರೀನಿವಾಸ್ ಹೇಳಿದರು.

ಮಲೆನಾಡು ಭಾಗದ ಜನರ ಸಮಸ್ಯೆಗಳ ಬಗ್ಗೆ ಜಿಲ್ಲೆಯ ಸಂಸದರು ಹಾಗೂ ಶಾಸಕರು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಧ್ವನಿ ಎತ್ತಬೇಕು. ಜನರೊಂದಿಗೆ ಪ್ರತಿಭಟನೆ ನಡೆಸುವುದರ ಜತೆಗೆ ಅಧಿವೇಶನದಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಬೇಕು. ಆದರೆ ಈ ವಿಚಾರದಲ್ಲಿ ಜನಪ್ರತಿನಿಧಿಗಳ ನಡೆ ನೋಡಿದರೆ, ಅವರು ‘ಜನಪ್ರತಿನಿಧಿಗಳೋ ಅಥವಾ ದನ ಪ್ರತಿನಿಧಿಗಳೋ’ ಎಂಬುದು ಅರ್ಥವಾಗುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಕಸ್ತೂರಿ ರಂಗನ್ ವರದಿಯಲ್ಲಿ ಜಂಟಿ ಸರ್ವೆ ನಡೆಸಿ ಕೇರಳ ಮಾದರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಕರ್ನಾಟಕದ ಪರಿಸ್ಥಿತಿ ವಿಭಿನ್ನವಾಗಿದೆ. ಈಗಾಗಲೇ ಹಲವು ಗ್ರಾಮಠಾಣಾ ಪ್ರದೇಶಗಳನ್ನೂ ಅರಣ್ಯ ಪ್ರದೇಶವೆಂದು ಗುರುತಿಸಿರುವ ಸಮಸ್ಯೆ ಇದೆ. ಹೀಗಾಗಿ ಕೇರಳ ಮಾದರಿಯ ಬದಲಾವಣೆ ಮಾಡುವ ಬದಲು ರೈತರು ಉಳುಮೆ ಮಾಡುತ್ತಿರುವ ಪ್ರದೇಶಗಳು ಹಾಗೂ ಗ್ರಾಮಠಾಣಾ ಪ್ರದೇಶಗಳನ್ನು ವರದಿ ವ್ಯಾಪ್ತಿಯಿಂದ ಸಂಪೂರ್ಣವಾಗಿ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

ಪಶ್ಚಿಮ ಘಟ್ಟ ಪ್ರದೇಶದ ಜನರ ಬದುಕು, ಕೃಷಿ ಮತ್ತು ಭವಿಷ್ಯಕ್ಕೆ ತೊಂದರೆಯಾಗುವ ಯಾವುದೇ ಯೋಜನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ಕೈಬಿಡುವ ನಿಟ್ಟಿನಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ತೀನಾ ಶ್ರೀನಿವಾಸ್ ಆಗ್ರಹಿಸಿದರು.

"It is unclear whether our representatives are representatives of the people or representatives of cattle," came the scathing remark  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close