ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ, ಕಲರ್ ಪೇಪರ್ ಬ್ಲಾಸ್ಟಿಂಗ್, ಬೈಕ್ ರ‍್ಯಾಲಿಗೆ ನಿಷೇಧ- Strict rules for Ganeshotsav: DJ, color paper blasting, bike rally banned

 SUDDILIVE || SHIVAMOGGA

ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ, ಕಲರ್ ಪೇಪರ್ ಬ್ಲಾಸ್ಟಿಂಗ್, ಬೈಕ್ ರ‍್ಯಾಲಿಗೆ ನಿಷೇಧ- Strict rules for Ganeshotsav: DJ, color paper blasting, bike rally banned  
Rally, ban
ಸಾಂಧರ್ಭಿಕ ಚಿತ್ರ


ಶಿವಮೊಗ್ಗ: ಗಣೇಶ ಹಬ್ಬದ ಆಚರಣೆ ಹಾಗೂ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾಡಳಿತ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ.

ಸೆಪ್ಟೆಂಬರ್ 14ರಂದು ಜಿಲ್ಲಾದ್ಯಂತ ಗಣೇಶ ಚತುರ್ಥಿ ಆಚರಣೆ ನಡೆಯಲಿದ್ದು, ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ವಯಸ್ಕರು ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಪೊಲೀಸ್ ಅಧೀಕ್ಷಕರ ಶಿಫಾರಸಿನ ಮೇರೆಗೆ ಕರ್ನಾಟಕ ಪೊಲೀಸ್ ಕಾಯ್ದೆ–1963ರ ಕಲಂ 35 ಮತ್ತು 36ರ ಅಡಿಯಲ್ಲಿ ಈ ಆದೇಶಗಳನ್ನು ಹೊರಡಿಸಿದ್ದಾರೆ.

ಡಿಜೆ, ಸಿಡಿಮದ್ದು, ಕಲರ್ ಪೇಪರ್ ಬ್ಲಾಸ್ಟಿಂಗ್‌ಗೆ ನಿಷೇಧ

ಸೆಪ್ಟೆಂಬರ್ 14ರಿಂದ ಅಕ್ಟೋಬರ್ 13ರವರೆಗೆ 30 ದಿನಗಳ ಕಾಲ ಜಿಲ್ಲಾದ್ಯಂತ ಡಿಜೆ ಸಿಸ್ಟಂ ಬಳಕೆ, ಕಲರ್ ಪೇಪರ್ ಬ್ಲಾಸ್ಟಿಂಗ್, ಸಿಡಿಮದ್ದು ಸಿಡಿಸುವುದು ಹಾಗೂ ಬೈಕ್ ರ‍್ಯಾಲಿಗಳನ್ನು ನಿಷೇಧಿಸಲಾಗಿದೆ.

ಗಣೇಶೋತ್ಸವದ ಸಂದರ್ಭದಲ್ಲಿ ಹೆಚ್ಚಿನ ಶಬ್ದ, ಸಿಡಿಮದ್ದು ಹಾಗೂ ಮೆರವಣಿಗೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಲ್ಲದೆ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಗಣೇಶ ವಿಸರ್ಜನೆ ವೇಳೆ ತೆಪ್ಪ ಬಳಕೆಗೆ ಕಟ್ಟುನಿಟ್ಟಿನ ಸುರಕ್ಷತಾ ನಿಯಮ

ಇದೇ ವೇಳೆ, ಹೊಳೆ, ನದಿ, ಕೆರೆ ಹಾಗೂ ಹಿನ್ನೀರು ಪ್ರದೇಶಗಳಲ್ಲಿ ತೆಪ್ಪದ ಮೂಲಕ ಗಣೇಶ ಮೂರ್ತಿ ವಿಸರ್ಜನೆ ಮಾಡುವ ಸಂದರ್ಭದಲ್ಲಿಯೂ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳನ್ನು ವಿಧಿಸಲಾಗಿದೆ.

ತೆಪ್ಪದಲ್ಲಿ ಮೂರ್ತಿ ವಿಸರ್ಜನೆಗೆ ತೆರಳುವಾಗ ಕೇವಲ 2ರಿಂದ 3 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ತೆಪ್ಪದಲ್ಲಿ ತೆರಳುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಬೇಕು. ಅಲ್ಲದೆ, ನುರಿತ ಈಜುಗಾರರ ಸಮಕ್ಷಮದಲ್ಲಿಯೇ ಗಣೇಶ ಮೂರ್ತಿ ವಿಸರ್ಜನೆ ಪ್ರಕ್ರಿಯೆ ನಡೆಸಬೇಕು ಎಂದು ಆದೇಶಿಸಲಾಗಿದೆ.

ಹಾಡೋನಹಳ್ಳಿ ದುರಂತ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ

ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಈ ಹಿಂದೆ ತೆಪ್ಪ ಮುಳುಗಿ 12 ಮಂದಿ ಮೃತಪಟ್ಟಿದ್ದ ದುರಂತವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗಳು ಸಂಪೂರ್ಣವಾಗಿ ಮುಕ್ತಾಯಗೊಳ್ಳುವವರೆಗೆ ತೆಪ್ಪ ಬಳಕೆಗೆ ಸಂಬಂಧಿಸಿದ ಈ ಸುರಕ್ಷತಾ ಆದೇಶ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರು ಗಣೇಶೋತ್ಸವವನ್ನು ಶಾಂತಿ, ಸೌಹಾರ್ದತೆ ಹಾಗೂ ಸುರಕ್ಷಿತವಾಗಿ ಆಚರಿಸುವ ಮೂಲಕ ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.

Strict rules for Ganeshotsav: DJ, color paper blasting, bike rally banned  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close