ಜಮೀನು ಗಡಿ ವಿಚಾರಕ್ಕೆ ಗಲಾಟೆ: ಚಿಕ್ಕಪ್ಪನಿಗೆ ಹಲವು ಬಾರಿ ಚಾಕು ಇರಿತ- Uncle stabbed multiple times in land boundary dispute

 SUDDILIVE || SHIVAMOGGA

ಜಮೀನು ಗಡಿ ವಿಚಾರಕ್ಕೆ ಗಲಾಟೆ: ಚಿಕ್ಕಪ್ಪನಿಗೆ ಹಲವು ಬಾರಿ ಚಾಕು ಇರಿತ- Uncle stabbed multiple times in land boundary dispute   
Purudal, land

ಶಿವಮೊಗ್ಗ, ಸೆ.14: ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ಸಹೋದರರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಯುವಕನೊಬ್ಬ ತನ್ನ ಚಿಕ್ಕಪ್ಪನಿಗೆ ಹಲವು ಬಾರಿ ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಭಾನುವಾರ ನಡೆದಿದೆ.

ಪುರದಾಳು ಗ್ರಾಮದ ನಿವಾಸಿ ಶ್ರೀನಿವಾಸ್ (52) ಚಾಕು ಇರಿತಕ್ಕೊಳಗಾದವರು. ರಾಜಪ್ಪ ಅವರ ಪುತ್ರ ಮಂಜುನಾಥ್ ಚಾಕು ಇರಿದ ಆರೋಪ ಎದುರಿಸುತ್ತಿರುವ ಯುವಕ.

ಮೂಲಗಳ ಪ್ರಕಾರ, ರಾಜಪ್ಪ ಹಾಗೂ ಶ್ರೀನಿವಾಸ್ ಸಹೋದರರಾಗಿದ್ದು, ಇವರ ನಡುವೆ ಜಮೀನಿನ ಗಡಿ ಮತ್ತು ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರವಾಗಿ ಕೆಲಕಾಲದಿಂದ ವಿವಾದವಿತ್ತು. ಭಾನುವಾರ ಶ್ರೀನಿವಾಸ್ ಹಾಗೂ ಅವರ ಪತ್ನಿ ಶಶಿಕಲಾ ಅಡಿಕೆ ತೋಟಕ್ಕೆ ನೀರು ಹಾಯಿಸುತ್ತಿದ್ದಾಗ, ರಾಜಪ್ಪ ಹಾಗೂ ಅವರ ಪತ್ನಿ ಶಾಂತಮ್ಮ ಅವರು ನೀರು ಹಾಯಿಸುವುದನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದು, ರಾಜಪ್ಪ ಹಾಗೂ ಅವರ ಪತ್ನಿ ಶ್ರೀನಿವಾಸ್ ದಂಪತಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆಯ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ರಾಜಪ್ಪ ಅವರ ಪುತ್ರ ಮಂಜುನಾಥ್ ಕಾರಿನಿಂದ ಇಳಿದು ಚಾಕು ತೆಗೆದುಕೊಂಡು ಶ್ರೀನಿವಾಸ್ ಅವರ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ದಾಳಿಯಲ್ಲಿ ಶ್ರೀನಿವಾಸ್ ಅವರ ಎದೆ, ಪಕ್ಕೆಲುಬು ಹಾಗೂ ತೊಡೆಯ ಭಾಗಕ್ಕೆ ಚಾಕು ಇರಿತದ ಗಾಯಗಳಾಗಿವೆ. ಗಲಾಟೆ ಬಿಡಿಸಲು ಮುಂದಾದ ಶ್ರೀನಿವಾಸ್ ಅವರ ಪತ್ನಿ ಶಶಿಕಲಾ ಅವರ ಮೇಲೂ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.

ಗಾಯಗೊಂಡ ಶ್ರೀನಿವಾಸ್ ಹಾಗೂ ಶಶಿಕಲಾ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಗಂಭೀರವಾಗಿ ಗಾಯಗೊಂಡ ಶ್ರೀನಿವಾಸ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಘಟನೆ ಸಂಬಂಧ ರಾಜಪ್ಪ ಹಾಗೂ ಅವರ ಪುತ್ರ ಮಂಜುನಾಥ್ ಅವರನ್ನು ತುಂಗಾನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್, ರಾಜಪ್ಪ, ಶಾಂತಮ್ಮ ಹಾಗೂ ಅರ್ಪಿತಾ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Uncle stabbed multiple times in land boundary dispute  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close