ಮಾಜಿ ಜಿಲ್ಲಾಧ್ಯಕ್ಷ ಸುಂದರೇಶ್ ವಿರುದ್ಧ ಹೊಸನಗರ ಕಾಂಗ್ರೆಸ್ ಮುಖಂಡರ ಆಕ್ರೋಶ: ಪಕ್ಷದಿಂದ ಉಚ್ಚಾಟನೆಗೆ ಆಗ್ರಹ-Hosanagar Congress leaders express anger against former district president Sundaresh: Demand for his expulsion from the party

 SUDDILIVE || SAGARA

ಮಾಜಿ ಜಿಲ್ಲಾಧ್ಯಕ್ಷ ಸುಂದರೇಶ್ ವಿರುದ್ಧ ಹೊಸನಗರ ಕಾಂಗ್ರೆಸ್ ಮುಖಂಡರ ಆಕ್ರೋಶ: ಪಕ್ಷದಿಂದ ಉಚ್ಚಾಟನೆಗೆ ಆಗ್ರಹ-Hosanagar Congress leaders express anger against former district president Sundaresh: Demand for his expulsion from the party    
Sundresh, against



ಸಾಗರ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವಿರುದ್ಧ ಮಾಜಿ ಜಿಲ್ಲಾಧ್ಯಕ್ಷ ಸುಂದರೇಶ್ ಅವರು ನೀಡಿರುವ ಹೇಳಿಕೆಗಳಿಗೆ ಹೊಸನಗರ ಭಾಗದ ಸ್ಥಳೀಯ ಕಾಂಗ್ರೆಸ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಕ್ಷದ ಹಿರಿಯ ನಾಯಕರಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಕಾಗೋಡು ತಿಮ್ಮಪ್ಪ ಸೇರಿದಂತೆ ಪ್ರಮುಖರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಪಕ್ಷದ ಶಿಸ್ತಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿರುವ ಮುಖಂಡರು, ಸುಂದರೇಶ್ ವಿರುದ್ಧ ಕೆಪಿಸಿಸಿ ಹಾಗೂ ಪಕ್ಷದ ಹೈಕಮಾಂಡ್ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಾಗರದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಜಿ. ಚಂದ್ರಮೂರ್ತಿ, ಕಿಮ್ಮನೆ ರತ್ನಾಕರ್ ಅವರನ್ನು ಸುಂದರೇಶ್ ಅವಹೇಳನಕಾರಿಯಾಗಿ ಸಂಬೋಧಿಸಿರುವುದು ಖಂಡನೀಯ ಎಂದರು. ಸ್ಥಳೀಯವಾಗಿ ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಗೆಲ್ಲಲಾಗದ ವ್ಯಕ್ತಿ, ಶಾಸಕರಿಗೆ ತಾನೇ ಟಿಕೆಟ್ ಕೊಡಿಸಿದ್ದಾಗಿ ಹೇಳಿಕೊಳ್ಳುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.

ತೀರ್ಥಹಳ್ಳಿ ಕ್ಷೇತ್ರದಲ್ಲಿ ತಮ್ಮದೇ ಸಮುದಾಯದ ಬೆಂಬಲವಿದೆ ಎಂದು ಹೇಳಿಕೊಳ್ಳುವ ಸುಂದರೇಶ್ ಅವರು ಜಿಲ್ಲಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಏಕೆ ಸೋಲು ಕಂಡಿತು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಚಂದ್ರಮೂರ್ತಿ ಪ್ರಶ್ನಿಸಿದರು. ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸಿ ಹಿರಿಯ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿರುವ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಹೊಸನಗರ ತಾಲೂಕು ಅಲ್ಪಸಂಖ್ಯಾತರ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಮಾತನಾಡಿ, ಕಿಮ್ಮನೆ ರತ್ನಾಕರ್ ಹಾಗೂ ಕಾಗೋಡು ತಿಮ್ಮಪ್ಪ ಅವರು ಜನರ ನಡುವೆ ಕೆಲಸ ಮಾಡುತ್ತಾ, ಬಡವರ ಪರ ಹೋರಾಟ ಹಾಗೂ ಪಾದಯಾತ್ರೆಗಳ ಮೂಲಕ ರಾಜಕೀಯವಾಗಿ ಬೆಳೆದು ಬಂದ ನಾಯಕರು ಎಂದು ಹೇಳಿದರು.

ಅಲ್ಪಸಂಖ್ಯಾತ ನಾಯಕಿ ಬಲ್ಕೀಸ್ ಬಾನು ಸೇರಿದಂತೆ ಪಕ್ಷದ ಮುಖಂಡರ ವಿರುದ್ಧ ಸುಂದರೇಶ್ ನೀಡಿರುವ ಹೇಳಿಕೆಗಳನ್ನು ಅವರು ಖಂಡಿಸಿದರು. ಪಕ್ಷದಲ್ಲಿ ಯಾರಿಗಾದರೂ ಆಕ್ಷೇಪಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು. ಪತ್ರಿಕಾಗೋಷ್ಠಿಗಳ ಮೂಲಕ ಆರೋಪ-ಪ್ರತ್ಯಾರೋಪ ನಡೆಸುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ ಎಂದು ಹೇಳಿದರು.

ರಾಮಚಂದ್ರಾಪುರ ಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಬುದ್ದೀನ್ (ಆದಿಲ್) ಮಾತನಾಡಿ, ಹಿರಿಯ ನಾಯಕರ ವಿರುದ್ಧ ಮಾಡಲಾಗಿರುವ ₹25 ಲಕ್ಷ ಅಕ್ರಮ ಹಾಗೂ ನಿವೇಶನ ಖರೀದಿಗೆ ಸಂಬಂಧಿಸಿದ ಆರೋಪಗಳನ್ನು ನಿರಾಕರಿಸಿದರು. ಆರೋಪಗಳಿಗೆ ಸಾಕ್ಷ್ಯಗಳಿದ್ದರೆ ಸಮಗ್ರ ತನಿಖೆ ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ಹಿರಿಯ ನಾಯಕ ಎಂಬ ಕಾರಣಕ್ಕೆ ಸುಂದರೇಶ್ ಅವರಿಗೆ ಗೌರವ ನೀಡಲಾಗುತ್ತಿದೆ. ಆದರೆ ಅದೇ ರೀತಿ ಕಾರ್ಯಕರ್ತರ ವಿರುದ್ಧ ನಿರಂತರವಾಗಿ ಹೇಳಿಕೆ ನೀಡಿದರೆ, ಕಾರ್ಯಕರ್ತರೂ ಪ್ರತಿಕ್ರಿಯಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಶಾಬುದ್ದೀನ್ ಎಚ್ಚರಿಸಿದರು.

ಕೆಪಿಸಿಸಿ ನಾಯಕರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಸುಂದರೇಶ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಹಾಗೂ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಅವರು ಆಗ್ರಹಿಸಿದರು. ಕ್ರಮ ಕೈಗೊಳ್ಳದಿದ್ದರೆ ಕ್ಷೇತ್ರದಾದ್ಯಂತ ಅವರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುಂದರೇಶ್ ವಿರುದ್ಧ ಪಕ್ಷದ ಶಿಸ್ತುಕ್ರಮಕ್ಕೆ ಆಗ್ರಹಿಸಿರುವ ಸ್ಥಳೀಯ ಕಾಂಗ್ರೆಸ್ ಮುಖಂಡರ ಹೇಳಿಕೆಗಳು ಇದೀಗ ಪಕ್ಷದೊಳಗಿನ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಬಹಿರಂಗಗೊಳಿಸಿವೆ.

Hosanagar Congress leaders express anger against former district president Sundaresh: Demand for his expulsion from the party    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close