ತ್ಯಾವರೆಕೊಪ್ಪ ಸಫಾರಿಯ ಪ್ರಮುಖ ಆಕರ್ಷಣೆ ‘ದಶಮಿ’ ಹುಲಿ ಸಾವು-Death of ‘Dashami’, the star attraction of Tyavarekoppa Safari

 SUDDILIVE || SHIVAMOGGA

ತ್ಯಾವರೆಕೊಪ್ಪ ಸಫಾರಿಯ ಪ್ರಮುಖ ಆಕರ್ಷಣೆ ‘ದಶಮಿ’ ಹುಲಿ ಸಾವು-Death of ‘Dashami’, the star attraction of Tyavarekoppa Safari   
Safari, dashami


ಶಿವಮೊಗ್ಗ: ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಪ್ರಮುಖ ಆಕರ್ಷಣೆಯಾಗಿದ್ದ 17 ವರ್ಷದ ಹೆಣ್ಣು ಹುಲಿ ‘ದಶಮಿ’ ವಯೋಸಹಜ ಬಹು ಅಂಗಾಂಗ ವೈಫಲ್ಯದಿಂದ ಇಂದು ಬೆಳಿಗ್ಗೆ ಮೃತಪಟ್ಟಿದೆ.

2009ರ ಅಕ್ಟೋಬರ್ 16ರಂದು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿಯೇ ಜನಿಸಿದ್ದ ‘ದಶಮಿ’, ಕಳೆದ 17 ವರ್ಷಗಳಿಂದ ಸಫಾರಿಯಲ್ಲಿದ್ದು, ದೇಶ-ವಿದೇಶಗಳಿಂದ ಆಗಮಿಸುತ್ತಿದ್ದ ಪ್ರವಾಸಿಗರ ಗಮನ ಸೆಳೆಯುತ್ತಿತ್ತು. ತನ್ನ ವಿಶಿಷ್ಟ ನಡವಳಿಕೆ ಹಾಗೂ ಭವ್ಯ ರೂಪದಿಂದ ಸಫಾರಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದಳು.

ಅರಣ್ಯ ಇಲಾಖೆ ಹಾಗೂ ಸಫಾರಿ ಪಶುವೈದ್ಯಾಧಿಕಾರಿಗಳ ಪ್ರಕಾರ, ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ದಶಮಿ, ಇಂದು ಬೆಳಿಗ್ಗೆ 11.25ರ ಸುಮಾರಿಗೆ ಕೊನೆಯುಸಿರೆಳೆದಿದೆ. ವಯಸ್ಸಾದ ಹುಲಿಯಾಗಿದ್ದ ದಶಮಿಗೆ ಬಹು ಅಂಗಾಂಗ ವೈಫಲ್ಯ ಉಂಟಾಗಿರುವುದು ಸಾವಿಗೆ ಕಾರಣವೆಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಕಾನೂನು ಪ್ರಕಾರ ಮರಣೋತ್ತರ ಪರೀಕ್ಷೆ

ಹುಲಿ ಸಾವಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಪ್ರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ದಶಮಿಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ತಜ್ಞ ಪಶುವೈದ್ಯರ ತಂಡದಿಂದ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಹುಲಿಯ ಸಾವಿಗೆ ನಿಖರ ಕಾರಣ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಲಾಗುತ್ತದೆ. ಪರೀಕ್ಷೆ ಪೂರ್ಣಗೊಂಡ ಬಳಿಕ ತಜ್ಞ ವೈದ್ಯರ ತಂಡವು ವರದಿ ಸಿದ್ಧಪಡಿಸಲಿದೆ.

ವರದಿ ಬಂದ ನಂತರ ಸರ್ಕಾರಿ ನಿಯಮಾವಳಿಗಳು ಹಾಗೂ ಅರಣ್ಯ ಇಲಾಖೆಯ ಮಾರ್ಗಸೂಚಿಗಳಂತೆ ದಶಮಿಯ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

17 ವರ್ಷಗಳ ಕಾಲ ತ್ಯಾವರೆಕೊಪ್ಪ ಸಫಾರಿಯ ಭಾಗವಾಗಿ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸಿದ್ದ ‘ದಶಮಿ’ ಹುಲಿಯ ನಿಧನ ಪ್ರವಾಸಿಗರು ಹಾಗೂ ಸಫಾರಿ ಸಿಬ್ಬಂದಿಯಲ್ಲಿ ವಿಷಾದ ಮೂಡಿಸಿದೆ.

Death of ‘Dashami’, the star attraction of Tyavarekoppa Safari

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close