SUDDILIVE || SHIVAMOGGA
ವಾಮಾಚಾರದ ಭಯ ಹುಟ್ಟಿಸಿ 193 ಗ್ರಾಂ ಚಿನ್ನ, ₹2 ಲಕ್ಷ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ-193g gold and ₹2 lakh swindled by instilling fear of black magic; accused arrested within hours.
ಶಿವಮೊಗ್ಗ: ವಾಮಾಚಾರ ಮಾಡಲಾಗಿದೆ ಎಂದು ಮಹಿಳೆಯನ್ನು ನಂಬಿಸಿ, ಅದನ್ನು ಪರಿಹರಿಸುವುದಾಗಿ ಹೇಳಿ ಪೂಜೆ ನಡೆಸಿ ಚಿನ್ನಾಭರಣ ಹಾಗೂ ಹಣ ಪಡೆದು ವಂಚಿಸಿದ ಪ್ರಕರಣವನ್ನು ಹೊಸಮನೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ದಾಖಲಾಗಿದ ಕೆಲವೇ ಗಂಟೆಗಳಲ್ಲಿ ಓರ್ವ ಆರೋಪಿಯನ್ನು ಬಂಧಿಸಿ, ಸುಮಾರು ₹22.50 ಲಕ್ಷ ಮೌಲ್ಯದ 161 ಗ್ರಾಂ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿ ವಶಪಡಿಸಿಕೊಂಡಿದ್ದಾರೆ.
ಭದ್ರಾವತಿ ಗಾಂಧಿನಗರದ ನಿವಾಸಿ ಹಾಗೂ ಕೆಎಸ್‌ಆರ್‌ಟಿಸಿ ಕಿರಿಯ ಸಹಾಯಕಿಯಾಗಿರುವ 36 ವರ್ಷದ ಮಂಗಳ ನಾಯಕ್ ಅವರು ಸೆ.7ರಂದು ಹೊಸಮನೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನನ್ವಯ, ಮಂಗಳ ನಾಯಕ್ ಅವರಿಗೆ ಪರಿಚಯವಿದ್ದ ಮುರಳಿ ಹಾಗೂ ಆತನ ಸಹೋದರ ರವಿ ಎಂಬುವರು, ನಿಮ್ಮ ಮೇಲೆ ವಾಮಾಚಾರ ಪ್ರಯೋಗವಾಗಿದೆ. ಅದನ್ನು ಪರಿಹರಿಸದಿದ್ದರೆ ನಿಮಗೆ ಹಾಗೂ ನಿಮ್ಮ ಮಕ್ಕಳಿಗೆ ದೊಡ್ಡ ಮಟ್ಟದ ಸಮಸ್ಯೆಯಾಗಬಹುದು ಎಂದು ಭಯ ಹುಟ್ಟಿಸಿ ನಂಬಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಳಿಕ ಆರೋಪಿಗಳು ಮಹಿಳೆಯ ಮನೆಗೆ ಬಂದು ಪೂಜೆ ನಡೆಸಿದ್ದಾರೆ. ಪೂಜೆ ಮುಗಿದ ನಂತರ ಬಂಗಾರದ ಒಡವೆಗಳನ್ನು ತಮ್ಮ ಬಳಿ ನೀಡುವಂತೆ ತಿಳಿಸಿ, ಅವುಗಳನ್ನು ಮನೆಗೆ ಕೊಂಡೊಯ್ದು ವಿಶೇಷ ಪೂಜೆ ಮಾಡಿ ವಾಪಸ್ ನೀಡುವುದಾಗಿ ನಂಬಿಸಿದ್ದಾರೆ ಎನ್ನಲಾಗಿದೆ.
ಇದನ್ನು ನಂಬಿದ ಮಂಗಳ ನಾಯಕ್ ಅವರು ಸುಮಾರು 193 ಗ್ರಾಂ ಚಿನ್ನಾಭರಣ ಹಾಗೂ ₹2 ಲಕ್ಷ ನಗದು ನೀಡಿದ್ದರು. ಆದರೆ ಚಿನ್ನಾಭರಣ ಮತ್ತು ಹಣವನ್ನು ಪಡೆದುಕೊಂಡ ಆರೋಪಿಗಳು ಅವುಗಳನ್ನು ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಭದ್ರಾವತಿ ತಿಪ್ಲಾಪುರ ಕ್ಯಾಂಪ್ ನಿವಾಸಿ ಮುರುಳಿ ಅಲಿಯಾಸ್ ಕರಿಯಾ (31) ಎಂಬಾತನನ್ನು ಬಂಧಿಸಲಾಗಿದೆ.
ತನಿಖೆ ವೇಳೆ ಆರೋಪಿಯು ಚಿನ್ನಾಭರಣದ ಕೆಲ ಭಾಗವನ್ನು ಗಿರವಿ ಅಂಗಡಿಯಲ್ಲಿ ಅಡವಿಟ್ಟಿರುವುದು ಹಾಗೂ ಮತ್ತಷ್ಟು ಚಿನ್ನವನ್ನು ಕರಗಿಸಿ ಚಿನ್ನದ ಗಟ್ಟಿಯಾಗಿ ಮಾಡಿಕೊಂಡು ಮನೆಯಲ್ಲಿ ಬಚ್ಚಿಟ್ಟಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯಿಂದ ಒಟ್ಟು ಸುಮಾರು 161 ಗ್ರಾಂ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿ, ಅಂದಾಜು ₹22.50 ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಹಾಗೂ ಮಾಲು ಪತ್ತೆ ಕಾರ್ಯಾಚರಣೆಯನ್ನು ಭದ್ರಾವತಿ ಉಪವಿಭಾಗದ ಡಿವೈಎಸ್‌ಪಿ ಪ್ರಕಾಶ್ ರಾಥೋಡ್ ಅವರ ಮೇಲ್ವಿಚಾರಣೆಯಲ್ಲಿ, ನಗರ ವೃತ್ತದ ಸಿಪಿಐ ನಾಗಮ್ಮ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ದಪ್ಪ ಎಂ.ಪಿ. ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಆದರ್ಶ ಶೆಟ್ಟಿ, ಮನ್ಸೂದ್ ಖಾನ್, ಆಸ್ಟೀನ್, ಕಾಂತರಾಜ ಬಿ.ಎನ್., ಹಣಮಂತ ಅವಟಿ, ಸುನೀತಾ ಹಾಗೂ ಶ್ರೀಧರ ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.
193g gold and ₹2 lakh swindled by instilling fear of black magic; accused arrested within hours.