ಕಳಪೆ ಕಾಮಗಾರಿಗೆ ಗುತ್ತಿಗೆದಾರರ ಬಿಲ್ ತಡೆಹಿಡಿಯಲು ಪಾಲಿಕೆ ಅಧಿಕಾರಿಗಳಿಗೆ ಶಾಸಕ ಚೆನ್ನಿ ಸೂಚನೆ- MLA Chenni instructs corporation officials to withhold contractor's bill for shoddy work

SUDDILIVE || SHIVAMOGGA

ಕಳಪೆ ಕಾಮಗಾರಿಗೆ ಗುತ್ತಿಗೆದಾರರ ಬಿಲ್ ತಡೆಹಿಡಿಯಲು ಪಾಲಿಕೆ ಅಧಿಕಾರಿಗಳಿಗೆ ಶಾಸಕ ಚೆನ್ನಿ ಸೂಚನೆ- MLA Chenni instructs corporation officials to withhold contractor's bill for shoddy work    

Mla, channi


ಕಳಪೆ ಕಾಮಗಾರಿಗೆ ಗುತ್ತಿಗೆದಾರರ ಬಿಲ್ ತಡೆಹಿಡಿಯಿರಿ, ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ: ಪಾಲಿಕೆ ಅಧಿಕಾರಿಗಳಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಖಡಕ್ ಸೂಚನೆ ನೀಡಿದ್ದಾರೆ. 

ನಗರೋತ್ಥಾನ ಯೋಜನೆ ಪ್ರಗತಿ ಪರಿಶೀಲನೆ ನಡೆಸಿ, ಸ್ಥಳದಲ್ಲೇ ಖುದ್ದು ಪರಿಶೀಲಿಸಿದ ಶಾಸಕರು ಹಾಗೂ ಆಯುಕ್ತರು

"ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ರೀತಿಯ ಕಳಪೆ ಗುಣಮಟ್ಟವನ್ನು ಸಹಿಸುವುದಿಲ್ಲ. ಗುಣಮಟ್ಟವಿಲ್ಲದ ಕಾಮಗಾರಿಗಳ ಗುತ್ತಿಗೆದಾರರ ಬಿಲ್ ತಡೆಹಿಡಿಯಬೇಕು ಹಾಗೂ ನಿರ್ಲಕ್ಷ್ಯ ತೋರಿದ ಎಂಜಿನಿಯರ್‌ಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕು," ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ನಗರದ ವಿವಿಧೆಡೆ ನಡೆಯುತ್ತಿರುವ ರಸ್ತೆ, ಒಳಚರಂಡಿ ಸೇರಿದಂತೆ ಮೂಲಸೌಕರ್ಯ ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟ ಕಾಣಿಸುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಹೆಚ್ಚಿದ ಹಿನ್ನೆಲೆಯಲ್ಲಿ, ಶಾಸಕರು ಇಂದು ಪಾಲಿಕೆ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆ ಸೇರಿದಂತೆ ವಿವಿಧ ಹಂತದ ಕಾಮಗಾರಿಗಳ ತುರ್ತು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಭೆಯ ನಂತರ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಎಂಜಿನಿಯರ್‌ಗಳ ತಂಡದೊಂದಿಗೆ ಖುದ್ದಾಗಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿದ ಶಾಸಕರು, ಕಾಮಗಾರಿಯ ಗುಣಮಟ್ಟ ಹಾಗೂ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, "ಕೇವಲ ಕಚೇರಿಯಲ್ಲೇ ಕುಳಿತು ಕಡತಗಳನ್ನು ವಿಲೇವಾರಿ ಮಾಡುವುದನ್ನು ಬಿಟ್ಟು ಎಂಜಿನಿಯರ್‌ಗಳು ಸ್ಥಳದಲ್ಲೇ ಹಾಜರಿದ್ದು ಕಾಮಗಾರಿಯ ಮೇಲ್ವಿಚಾರಣೆ ನಡೆಸಬೇಕು. ನಗರದ ಜನತೆಗೆ ದೀರ್ಘಕಾಲ ಬಾಳಿಕೆ ಬರುವ ರಸ್ತೆ ಹಾಗೂ ಮೂಲಸೌಕರ್ಯ ಒದಗಿಸುವುದು ನಮ್ಮ ಆದ್ಯತೆಯಾಗಿದ್ದು, ಕಾಲಮಿತಿಯೊಳಗೆ ಗುಣಮಟ್ಟದೊಂದಿಗೆ ಕಾಮಗಾರಿ ಮುಗಿಸಬೇಕು," ಎಂದು ಎಚ್ಚರಿಕೆ ನೀಡಿದರು.

ಪರಿಶೀಲನಾ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರು, ಭಾರತೀಯ ಜನತಾ ಪಾರ್ಟಿಯ ಮುಖಂಡರು, ಪಾಲಿಕೆಯ ಎಂಜಿನಿಯರ್‌ಗಳು, ಸ್ಥಳೀಯ ಮುಖಂಡರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

MLA Chenni instructs corporation officials to withhold contractor's bill for shoddy work


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close