SUDDILIVE || SORABA
ಬಡವರ ಪರ ಭಾಷಣ ಮಾಡುವ ಸಚಿವರೇ, ಇದೇನಾ ರೈತರ ಮೇಲಿನ ಕಾಳಜಿ? ಮಧು ಬಂಗಾರಪ್ಪ ವಿರುದ್ಧ ಹರತಾಳು ಹಾಲಪ್ಪ ಆಕ್ರೋಶ- Ministers who speak in favor of the poor, is this their concern for farmers? Halappa protests against Madhu Bangarappa
ಸೊರಬ: ಬಡವರು, ಹಿಂದುಳಿದವರು ಹಾಗೂ ದೀನದಲಿತರ ಪರವಾಗಿ ಸದಾ ಮಾತನಾಡುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೊರಬ ತಾಲೂಕು ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆವರ ತೆಪ್ಪ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತ ದೇವರಾಜ್ (ತಂದೆ ಮಂಜಪ್ಪ) ಅವರಿಗೆ ಸೇರಿದ ತಗಡಿನ ಮನೆಯ ತೋಟವನ್ನು ತೆರವುಗೊಳಿಸಿರುವ ವಿಚಾರವನ್ನು ಮುಂದಿಟ್ಟುಕೊಂಡು ಹರತಾಳು ಹಾಲಪ್ಪ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಸಚಿವರ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಶಿಕ್ಷಣ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದು ಸ್ಪಷ್ಟವಾಗಿದೆ.
"ಸದಾ ಬಡವರ ಪರ, ಹಿಂದುಳಿದವರ ಪರ, ದೀನದಲಿತರ ಪರ ಭಾಷಣ ಮಾಡುವ ಸಚಿವರೇ, ಇದೇನಾ ನಿಮ್ಮ ಬಡವರ ಕಾಳಜಿ? ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಮಾತನಾಡುವವರು, ಹೋರಾಟ ಮಾಡುವವರು ರೈತನ ಫಲ ಬಿಡುವ ಅಡಿಕೆ ತೋಟವನ್ನು ತೆರವುಗೊಳಿಸಿರುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದ್ದಾರೆ.
ಇಂತಹ ಘಟನೆಗಳು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ರೈತರೆಲ್ಲರೂ ಒಗ್ಗಟ್ಟಾಗಿ ನ್ಯಾಯಕ್ಕಾಗಿ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದ್ದಾರೆ. ನ್ಯಾಯಾಲಯದ ಮೂಲಕ ನ್ಯಾಯ ಕೇಳುವುದರ ಜತೆಗೆ, ಜನಪರವಾಗಿ ಹಾಗೂ ಮಾನವೀಯ ನೆಲೆಯಲ್ಲಿ ಪ್ರಕರಣವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಬೇಕು. ಅಂತಿಮವಾಗಿ ಕಾನೂನಿನ ಚೌಕಟ್ಟಿನಲ್ಲಿಯೇ ಹೋರಾಟ ಅನಿವಾರ್ಯ ಎಂದು ಹೇಳಿದ್ದಾರೆ.
30 ಸಾವಿರಕ್ಕೂ ಅಧಿಕ ವೀಕ್ಷಣೆ
ಹರತಾಳು ಹಾಲಪ್ಪ ಅವರು ವಿಡಿಯೋ ಹಂಚಿಕೊಂಡು ಸುಮಾರು 17 ಗಂಟೆಗಳಾಗಿದ್ದು, ಈಗಾಗಲೇ 30 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಈ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿರುವಾಗಲೇ ರೈತರ ಜಮೀನು ಮತ್ತು ಸಮಸ್ಯೆಗಳು ನೆನಪಾಗುತ್ತಿವೆಯೇ ಎಂದು ಕೆಲ ನೆಟ್ಟಿಗರು ಪ್ರಶ್ನಿಸಿದ್ದಾರೆ. ತೋಟ ತೆರವುಗೊಳಿಸಿರುವ ಕ್ರಮದ ಕುರಿತು ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ರೈತರ ಪರವಾಗಿ ಹೋರಾಟದ ಮಾತುಗಳನ್ನಾಡಿರುವ ಹರತಾಳು ಹಾಲಪ್ಪ ಅವರ ಈ ವಿಡಿಯೋ ಇದೀಗ ಸೊರಬ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.
