SUDDILIVE || SHIVAMOGGA
ಕಸಾಪದಲ್ಲಿ ಪಾರದರ್ಶಕ ಆಡಳಿತಕ್ಕೆ ಜಾಣಗೆರೆ ವೆಂಕಟರಾಮಯ್ಯ ಸ್ಪರ್ಧೆ: ಎಸ್.ಜಿ. ಸಿದ್ದರಾಮಯ್ಯ- Janagere Venkataramaiah contests for transparent governance in Kasapa: S.G. Siddaramaiah
ಕಳೆದ ಹತ್ತು ವರ್ಷಗಳಲ್ಲಿ ಬೈಲಾ ತಿದ್ದುಪಡಿಯಿಂದ ಪರಿಷತ್ತಿನ ಮೂಲ ಆಶಯಗಳಿಗೆ ಧಕ್ಕೆ ಆರೋಪ
ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆ ಮತ್ತು ಮೂಲ ಆಶಯಗಳನ್ನು ಉಳಿಸಿ, ಅದನ್ನು ಕನ್ನಡಿಗರ ಪರಿಷತ್ತಾಗಿ ಬೆಳೆಸುವ ಉದ್ದೇಶದಿಂದ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ ಎಂದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಇತ್ತೀಚಿನ ಆಡಳಿತ ವೈಖರಿ, ಬೈಲಾ ತಿದ್ದುಪಡಿಗಳು ಹಾಗೂ ಸಂಸ್ಥೆಯ ಸ್ವಾಯತ್ತತೆಯ ಕುರಿತು ಕಳವಳ ವ್ಯಕ್ತಪಡಿಸಿದರು.
ಕನ್ನಡ, ಕನ್ನಡಿಗರು ಮತ್ತು ಕರ್ನಾಟಕದ ಆಶಯಗಳೊಂದಿಗೆ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಶತಮಾನಕ್ಕೂ ಹೆಚ್ಚು ಕಾಲ ತನ್ನ ಮೂಲ ಉದ್ದೇಶವನ್ನು ಉಳಿಸಿಕೊಂಡು ಬಂದಿದೆ. ಆದರೆ, ಕಳೆದ ಹತ್ತು ವರ್ಷಗಳಲ್ಲಿ ಮೂಲ ಬೈಲಾಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ತಿದ್ದುಪಡಿಗಳನ್ನು ಮಾಡಲಾಗಿದೆ. ಸೇವಾ ಮನೋಭಾವದಿಂದ ನಿರ್ವಹಿಸಬೇಕಾದ ಅಧ್ಯಕ್ಷ ಸ್ಥಾನವನ್ನು ಅಧಿಕಾರದ ಕುರ್ಚಿಯಂತೆ ಪರಿಗಣಿಸಿರುವುದರಿಂದ ಸಂಸ್ಥೆಯ ಸ್ವಾಯತ್ತತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿದರು.
ಮಹೇಶ್ ಜೋಶಿ ಅವರ ಆಡಳಿತಾವಧಿಯಲ್ಲಿ ಪರಿಷತ್ತಿನ ಚುನಾವಣೆಯನ್ನು ಪಕ್ಷದ ರಾಜಕಾರಣದ ಮಾದರಿಯಲ್ಲಿ ನಡೆಸಲಾಗಿದೆ ಎಂದು ದೂರಿದ ಅವರು, ಅಧ್ಯಕ್ಷರ ಅಧಿಕಾರಾವಧಿಯನ್ನು ಐದು ವರ್ಷಗಳಿಂದ ಮೂರು ವರ್ಷಕ್ಕೆ ಇಳಿಸಬೇಕು ಎಂದು ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಜತೆಗೆ ಕೃಷಿ ಸೇರಿದಂತೆ ಕನ್ನಡಿಗರ ಬದುಕಿಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳ ಕುರಿತು ಚರ್ಚಿಸುವ ವಿಶಾಲ ವೇದಿಕೆಯಾಗಿ ಪರಿಷತ್ತು ಬೆಳೆಯಬೇಕು ಎಂಬುದು ತಮ್ಮ ಆಶಯ ಎಂದರು.
ಜಾಣಗೆರೆ ವೆಂಕಟರಾಮಯ್ಯ ಅವರು ಕನ್ನಡಪರ ಹೋರಾಟಗಾರ, ಪತ್ರಕರ್ತ, ಕವಿ, ಕಾದಂಬರಿಕಾರ ಹಾಗೂ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡಕ್ಕಾಗಿ ನಿರಂತರವಾಗಿ ದುಡಿಯುತ್ತಿರುವ ಅವರು ಕಳಂಕರಹಿತ ವ್ಯಕ್ತಿತ್ವ ಹೊಂದಿದ್ದಾರೆ. ಕನ್ನಡಪರ ಸಂಘಟನೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಅವು ದಾರಿ ತಪ್ಪಿದಾಗ ದೂರ ಸರಿಯುವ ನಿಲುವು ಹೊಂದಿದ್ದಾರೆ. ಈ ಎಲ್ಲ ಕಾರಣಗಳಿಂದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂಬ ಅಭಿಪ್ರಾಯದೊಂದಿಗೆ ಸಮಾನ ಮನಸ್ಕರು ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.
ಪರಿಷತ್ತಿನ ಪ್ರಸ್ತುತ ಅವಧಿ ನವೆಂಬರ್ 17ಕ್ಕೆ ಮುಕ್ತಾಯಗೊಳ್ಳಲಿದೆ. ಸರ್ಕಾರ ಚುನಾವಣಾಧಿಕಾರಿಯನ್ನು ನೇಮಕ ಮಾಡಿದ್ದು, ನವೆಂಬರ್ ನಂತರ ಚುನಾವಣಾ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ. ಡಿಸೆಂಬರ್ ಮೂರನೇ ವಾರ ಅಥವಾ ಜನವರಿ ಮೊದಲ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಜಾಣಗೆರೆ ವೆಂಕಟರಾಮಯ್ಯ ಅವರನ್ನು ಆಯ್ಕೆ ಮಾಡುವ ಮೂಲಕ ಸಂಸ್ಥೆಯ ಸ್ವಾಯತ್ತತೆ ಮತ್ತು ಮೂಲ ಆಶಯಗಳನ್ನು ಸಂರಕ್ಷಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪಾರದರ್ಶಕ ಆಡಳಿತ ಮತ್ತು ಸಾಹಿತ್ಯ ಚಟುವಟಿಕೆಗಳಿಗೆ ಆದ್ಯತೆ: ಜಾಣಗೆರೆ ವೆಂಕಟರಾಮಯ್ಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜಾಣಗೆರೆ ವೆಂಕಟರಾಮಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆ, ಪಾರದರ್ಶಕ ಆಡಳಿತ ಮತ್ತು ಸಾಹಿತ್ಯ ಚಟುವಟಿಕೆಗಳ ಪುನಶ್ಚೇತನಕ್ಕಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.
ಪರಿಷತ್ತಿನ ಹಿಂದಿನ ಆಡಳಿತದಲ್ಲಿ ನಡೆದಿವೆ ಎನ್ನಲಾದ ಅವ್ಯವಹಾರ ಮತ್ತು ದುರಾಡಳಿತದ ವಿರುದ್ಧ ಒಂದೂವರೆ ವರ್ಷಗಳಿಂದ ಹೋರಾಟ ನಡೆಸಲಾಗಿದೆ. ಸಂಸ್ಥೆಯ ಘನತೆ, ಗೌರವ ಹಾಗೂ ಸ್ವಾಯತ್ತತೆಯನ್ನು ಕಾಪಾಡಲು ಹೋರಾಟ ನಡೆಸುವುದರ ಜತೆಗೆ ಸರ್ಕಾರದ ಗಮನವನ್ನೂ ಸೆಳೆಯಲಾಗಿದೆ ಎಂದರು.
ಪರಿಷತ್ತಿನ ಸಂಪನ್ಮೂಲಗಳನ್ನು ಸಾಹಿತ್ಯ ಚಟುವಟಿಕೆಗಳಿಗೆ ಸಮರ್ಪಕವಾಗಿ ಬಳಸಬೇಕು. ನೃಪತುಂಗ ಪ್ರಶಸ್ತಿ ಸೇರಿದಂತೆ ಪ್ರಮುಖ ಪ್ರಶಸ್ತಿಗಳ ವಿತರಣೆಗೆ ಆದ್ಯತೆ ನೀಡಬೇಕು. ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ನಿಯಮಿತವಾಗಿ ನಡೆಯಲು ಅವಕಾಶ ಕಲ್ಪಿಸಿ, ಜಿಲ್ಲಾ ಘಟಕಗಳಿಗೆ ಅಗತ್ಯ ಅನುದಾನ ಮತ್ತು ಬೆಂಬಲ ನೀಡಬೇಕು ಎಂದು ಹೇಳಿದರು.
ಯುವ ಬರಹಗಾರರು, ಉದಯೋನ್ಮುಖ ಸಾಹಿತಿಗಳು ಹಾಗೂ ಹಿರಿಯ ಸಾಹಿತಿಗಳಿಗೆ ಸಮಾನ ಅವಕಾಶ ಕಲ್ಪಿಸುವ ಮೂಲಕ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವುದು ತಮ್ಮ ಉದ್ದೇಶವಾಗಿದೆ. ಪರಿಷತ್ತು ಕೇವಲ ಆಡಳಿತಾತ್ಮಕ ಸಂಸ್ಥೆಯಾಗದೆ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡಿಗರ ಅಭಿವ್ಯಕ್ತಿಗೆ ವೇದಿಕೆಯಾಗಬೇಕು ಎಂದರು.
ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತನಕ್ಕೆ ಆದ್ಯತೆ ನೀಡುವುದರ ಜತೆಗೆ ಜಿಲ್ಲಾ ಘಟಕಗಳನ್ನು ಕ್ರಿಯಾಶೀಲಗೊಳಿಸಿ, ಸಾಹಿತ್ಯ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯುವಂತೆ ಕ್ರಮ ಕೈಗೊಳ್ಳುವ ಆಶಯ ಹೊಂದಿರುವುದಾಗಿ ತಿಳಿಸಿದರು.
ಅಧಿಕಾರದ ಆಸೆಯಿಂದ ಕಸಾಪ ಪ್ರವೇಶಿಸುತ್ತಿರುವ ನಿವೃತ್ತರು: ಸಿದ್ದರಾಮಯ್ಯ ಆರೋಪ
ಕೆಲವು ನಿವೃತ್ತರು ಅಧಿಕಾರದ ಆಸೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರವೇಶಿಸಿ, ಅಧ್ಯಕ್ಷ ಸ್ಥಾನವನ್ನು ಸೇವೆಯ ಜವಾಬ್ದಾರಿಯಾಗಿ ಪರಿಗಣಿಸುವ ಬದಲು ಅಧಿಕಾರದ ಕುರ್ಚಿಯೆಂದು ಭಾವಿಸಿ ಆಡಳಿತ ನಡೆಸಿದ್ದಾರೆ ಎಂದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಆರೋಪಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸ್ವಾಯತ್ತ ಸಂಸ್ಥೆಯಾಗಿದ್ದು, ಅಧ್ಯಕ್ಷ ಸ್ಥಾನವು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸೇವೆಗೆ ಮೀಸಲಾಗಿರಬೇಕು. ಆದರೆ, ಅಧಿಕಾರದ ಮನೋಭಾವದಿಂದ ಆಡಳಿತ ನಡೆಸಿದ ಪರಿಣಾಮ ಪರಿಷತ್ತಿನ ಮೂಲ ಬೈಲಾಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ತಿದ್ದುಪಡಿಗಳು ನಡೆದಿವೆ ಎಂದರು.
ಕಳೆದ ಹತ್ತು ವರ್ಷಗಳಲ್ಲಿ ನಡೆದ ಬೈಲಾ ತಿದ್ದುಪಡಿಗಳಿಂದ ಪರಿಷತ್ತು ಸರ್ವಾಧಿಕಾರಿ ಧೋರಣೆಯ ಆಡಳಿತಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕನ್ನಡಿಗರ ಸಂಸ್ಥೆಯಾಗಿರುವ ಪರಿಷತ್ತು ಕನ್ನಡಿಗರಿಂದಲೇ ದೂರವಾಗುವ ಆತಂಕ ಎದುರಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ್, ಬಿ. ಚಂದ್ರೇಗೌಡ, ಕೆ.ಪಿ. ಶ್ರೀಪಾಲ್, ಜಿ.ವಿ. ಸಂಗಮೇಶ್ವರ್, ಕೆ.ಜಿ. ವೆಂಕಟೇಶ್, ದೇವೇಂದ್ರ, ಸೂರ್ಯಪ್ರಕಾಶ್, ಅಂಬಿಕಾ, ತಿಮ್ಮಪ್ಪ, ಮಂಜುಳಾ ರಾಜು, ಅಕ್ಷತಾ ಹುಂಚದಕಟ್ಟೆ, ಕೃಷ್ಣಮೂರ್ತಿ ಹಿಳ್ಳೋಡಿ, ಕೆ. ದೇವೇಂದ್ರಯ್ಯ, ಎಂ.ಎಂ. ಸ್ವಾಮಿ, ಮಹಾದೇವಿ ಹಾಗೂ ಅನಿಲ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
