SUDDILIVE || THIRTHAHALLI
ತೀರ್ಥಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಕಾಟಾಚಾರಕ್ಕೆ ಸೀಮಿತವೇ? ಕಾರ್ಯಕ್ರಮದಲ್ಲೇ ಕಾಂಗ್ರೆಸ್ ಮುಖಂಡ ಜೈಕರ ಶೆಟ್ಟಿ ಆಕ್ರೋಶ- Is Valmiki Jayanti celebration in Thirthahalli limited to sarcasm? Congress leader Jaikar Shetty expressed his anger at the event
ತೀರ್ಥಹಳ್ಳಿ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಆಚರಣೆ ಕಾಟಾಚಾರಕ್ಕೆ ಸೀಮಿತವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಜೈಕರ ಶೆಟ್ಟಿ ಅವರು ಕಾರ್ಯಕ್ರಮದ ನಡುವೆಯೇ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಗೈರುಹಾಜರಿ ಹಾಗೂ ಕಾರ್ಯಕ್ರಮದ ಆಯೋಜನೆಯ ಕುರಿತು ಅವರು ಅಸಮಾಧಾನ ಹೊರಹಾಕಿದರು. ವೇದಿಕೆಯ ಮೇಲಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ತಾಲೂಕು ಆಡಳಿತವು ಜಯಂತಿ ಆಚರಣೆಯನ್ನು ಗಂಭೀರವಾಗಿ ಪರಿಗಣಿಸಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ಗೈರುಹಾಜರಿಗೆ ಆಕ್ಷೇಪ
ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಜೈಕರ ಶೆಟ್ಟಿ, ತಾಲೂಕು ಪಂಚಾಯಿತಿ ಸಭಾಂಗಣದಲ್ಲೇ ಕಾರ್ಯಕ್ರಮ ನಡೆಯುತ್ತಿದ್ದರೂ ತಾಲೂಕು ಪಂಚಾಯಿತಿಯ ಒಬ್ಬ ಸಿಬ್ಬಂದಿಯೂ ಕಾರ್ಯಕ್ರಮದಲ್ಲಿ ಹಾಜರಿಲ್ಲ ಎಂದು ಆಕ್ಷೇಪಿಸಿದರು.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವವಿಲ್ಲವೇ?
ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುತ್ತಿದೆ. ಆದರೆ, ಜನರೇ ಇಲ್ಲದ ವೇದಿಕೆಯಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸುವುದರಿಂದ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದರು. ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕನಿಷ್ಠ ಗೌರವ ನೀಡುವ ಜವಾಬ್ದಾರಿ ಆಡಳಿತಕ್ಕೆ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳನ್ನು ಕಾಟಾಚಾರಕ್ಕೆ ಸನ್ಮಾನಿಸುವುದಾದರೆ ಅಂತಹ ಸನ್ಮಾನ ಮಾಡಬೇಡಿ ಎಂದು ವಿರೋಧ ವ್ಯಕ್ತಪಡಿಸಿದ ಅವರು, ವೇದಿಕೆಯ ಮೇಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತೀರ್ಥಹಳ್ಳಿ ತಾಲೂಕು ಆಡಳಿತದಿಂದ ಆಯೋಜಿಸಲಾದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲೇ ಕಾಂಗ್ರೆಸ್ ಮುಖಂಡರು ಆಕ್ರೋಶ ಹೊರಹಾಕಿರುವುದು ಗಮನ ಸೆಳೆಯಿತು.
