SUDDILIVE || KOPPA
ಬಾಲಕಿಯರ ಖೋ ಖೋ: ಮೈಸೂರು ವಿಭಾಗ ಮಟ್ಟಕ್ಕೆ ಕೊಪ್ಪ ತಾಲೂಕಿನ ನಾಲ್ವರು ವಿದ್ಯಾರ್ಥಿನಿಯರು ಆಯ್ಕೆ- Girls' Kho Kho: Four students from Koppa taluk selected for Mysore division level
ಕೊಪ್ಪ: 14 ವರ್ಷ ವಯೋಮಿತಿಯೊಳಗಿನ ಬಾಲಕಿಯರ ಖೋ ಖೋ ಪಂದ್ಯಾವಳಿಯಲ್ಲಿ ಕೊಪ್ಪ ತಾಲೂಕಿನ ನಾಲ್ವರು ವಿದ್ಯಾರ್ಥಿನಿಯರು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮೂಡಿಗೆರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಕೊಪ್ಪ ತಾಲೂಕಿನ ಭಂಡಿಗಡಿ ಪ್ರಾಥಮಿಕ ಶಾಲೆಯ ತಂಡವು ಕೊಳೂರು ಶಾಲೆಯ ಮೂವರು ವಿದ್ಯಾರ್ಥಿನಿಯರೊಂದಿಗೆ ಸ್ಪರ್ಧಿಸಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಜಿಲ್ಲಾ ಮಟ್ಟದಲ್ಲಿ ಕೊಪ್ಪ ತಾಲೂಕನ್ನು ಪ್ರತಿನಿಧಿಸಿದ ಈ ತಂಡ ದ್ವಿತೀಯ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿತ್ತು.
ತಂಡದ ಆಟಗಾರ್ತಿಯರಾದ ಕುಮಾರಿ ಸನ್ಮಿತ, ಕುಮಾರಿ ಮೇಘನ, ಕುಮಾರಿ ಮಾನಸ ಹಾಗೂ ಕುಮಾರಿ ಅನುಕ್ಷ ಅವರು ತಮ್ಮ ಅತ್ಯುತ್ತಮ ಆಟದ ಪ್ರದರ್ಶನದ ಮೂಲಕ ಮೈಸೂರು ವಿಭಾಗ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಮೈಸೂರಿನಲ್ಲಿ ನಡೆಯಲಿರುವ 14 ವರ್ಷ ವಯೋಮಿತಿಯೊಳಗಿನ ವಿಭಾಗ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಈ ನಾಲ್ವರು ವಿದ್ಯಾರ್ಥಿನಿಯರು ಚಿಕ್ಕಮಗಳೂರು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿಭಾಗ ಮಟ್ಟದಲ್ಲಿಯೂ ಈ ವಿದ್ಯಾರ್ಥಿನಿಯರು ಉತ್ತಮ ಪ್ರದರ್ಶನ ನೀಡಿ ಜಯಗಳಿಸುವ ಮೂಲಕ ತಮ್ಮ ಶಾಲೆ, ಊರು ಹಾಗೂ ಜಿಲ್ಲೆಗೆ ಕೀರ್ತಿ ತರಲಿ ಎಂದು ಕ್ರೀಡಾಭಿಮಾನಿಗಳು ಹಾರೈಸಿದ್ದಾರೆ.
