SUDDILIVE || SHIVAMOGGA
ಕೆಪಿಎಸ್ ಶಾಲೆಯ 308 ವಿದ್ಯಾರ್ಥಿಗಳಿಗೆ ಉಚಿತ ಟೈ-ಬೆಲ್ಟ್ ವಿತರಣೆ- Free tie-belt distribution to 308 students of KPS School
ಶಿವಮೊಗ್ಗ: ನಗರದ ಕೆ.ಆರ್.ಪುರಂನಲ್ಲಿರುವ ಕೆಪಿಎಸ್ ಶಾಲೆಯ 308 ವಿದ್ಯಾರ್ಥಿಗಳಿಗೆ ಉಚಿತವಾಗಿ ಟೈ-ಬೆಲ್ಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ದಾನೇಶ್ವರಿ, ಸರ್ಕಾರಿ ಶಾಲಾ ಮಕ್ಕಳ ವ್ಯಾಸಂಗ ಉತ್ತಮವಾಗಿ ಸಾಗಲು ಸಮಾಜಪರ ಸಂಘಟನೆಗಳು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಸಹಕಾರ ಅಗತ್ಯ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಉಚಿತ ಟೈ-ಬೆಲ್ಟ್ ನೀಡಿದ ಸಹೃದಯಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿ ದೀಪಕ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮನೆಯಲ್ಲಿ ಪೋಷಕರ ಮಾತು ಹಾಗೂ ಶಾಲೆಯಲ್ಲಿ ಶಿಕ್ಷಕರ ಸಲಹೆಗಳನ್ನು ಆಲಿಸಿ ಪಾಲಿಸಿದರೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ. ಶಿಸ್ತುಬದ್ಧವಾಗಿ ವ್ಯಾಸಂಗ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣದ ಶಿಲ್ಪಿಗಳಾಗಬೇಕು ಎಂದು ತಿಳಿಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಗಾರಾ ಶ್ರೀನಿವಾಸ್ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಭಯದ ವಾತಾವರಣ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಆದರೆ ಸರ್ಕಾರಿ ಶಾಲೆಗಳ ಮಕ್ಕಳು ಹೆಚ್ಚಿನ ಭಯವಿಲ್ಲದೆ ಶಿಕ್ಷಣದಲ್ಲಿ ಮುಂದುವರಿಯುತ್ತಿರುವುದು ಸಂತಸದ ಸಂಗತಿ ಎಂದರು.
ಕೆಪಿಎಸ್ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದರ ಹಿಂದೆ ಶಿಕ್ಷಕರ ಪರಿಶ್ರಮವಿದೆ. ಸರ್ಕಾರಿ ಶಾಲೆಯ ಮಕ್ಕಳು ಯಾವುದಕ್ಕೂ ಕಡಿಮೆಯಿಲ್ಲ ಎಂಬ ಆತ್ಮವಿಶ್ವಾಸದಿಂದ ಶಿಕ್ಷಣ ಪಡೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ನಂತರ ಶಾಲೆಯ 308 ವಿದ್ಯಾರ್ಥಿಗಳಿಗೆ ಉಚಿತ ಟೈ-ಬೆಲ್ಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಂಸ್ಥೆಯ ಕಟ್ಟೆ ಬಳಗದ ಮಂಜುನಾಥ್, ಹೈಟೆಕ್ ವೆಂಕಟೇಶ್, ವೆಲ್ಡಿಂಗ್ ರಾಘವೇಂದ್ರ, ಹಳೆಯ ವಿದ್ಯಾರ್ಥಿ ರಾಘವೇಂದ್ರ, ದಿವಾಕರ್ ಶೆಟ್ಟಿ ಹಾಗೂ ಮಸ್ತಾನ್ ಉಪಸ್ಥಿತರಿದ್ದರು.
ಶಿಕ್ಷಕ ಎಂ. ಮಾಲತೇಶ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Free tie-belt distribution to 308 students of KPS School

