SUDDILIVE || SHIVAMOGGA
ಶಿವಮೊಗ್ಗದಲ್ಲಿ ಅ.24ರಂದು ‘ಕ್ರೇಝಿ ಕುಟುಂಬ’ ಹಾಸ್ಯ ನಾಟಕ ಪ್ರದರ್ಶನ- Comedy drama 'Crazy Family' to be performed in Shivamogga on October 24
ಶಿವಮೊಗ್ಗ: ಬೆಂಗಳೂರು ಹಾಗೂ ಮೈಸೂರಿನಲ್ಲಿ ಹೌಸ್ಫುಲ್ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ‘ಕ್ರೇಝಿ ಕುಟುಂಬ’ ಹಾಸ್ಯ ನಾಟಕವು ಅಕ್ಟೋಬರ್ 24ರ ಶನಿವಾರ ಸಂಜೆ 6.30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ನೇಟೀವ್ ಥಿಯೇಟರ್ ಸಂಸ್ಥೆಯು ಈ ನಾಟಕವನ್ನು ಆಯೋಜಿಸಿದೆ.
ಬೆಂಗಳೂರಿನ ಅಂತರಂಗ-ಬಹಿರಂಗ ರಂಗತಂಡವು ನಾಟಕವನ್ನು ಪ್ರಸ್ತುತಪಡಿಸಲಿದ್ದು, ಸತೀಶ್ ಹುಳಿಯಾರ್ ರಚನೆ ಮಾಡಿದ್ದಾರೆ. ಸತೀಶ್ ಐತಾಳ್ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಯುವಜನತೆ ಮತ್ತು ಸಂಪ್ರದಾಯಬದ್ಧ ಪೋಷಕರ ನಡುವಿನ ತಾಕಲಾಟ
ಇಂದಿನ ಯುವಜನತೆಯ ಆಲೋಚನೆಗಳು ಹಾಗೂ ಸಂಪ್ರದಾಯಬದ್ಧ ತಂದೆ-ತಾಯಿಗಳ ನಿರೀಕ್ಷೆಗಳ ನಡುವಿನ ಸಂಘರ್ಷವನ್ನು ಹಾಸ್ಯದ ಮೂಲಕ ಕಟ್ಟಿಕೊಡುವುದು ನಾಟಕದ ಪ್ರಮುಖ ಆಶಯವಾಗಿದೆ. ‘ಇಷ್ಟು ಬೇಗ ಮದುವೆ ಬೇಡ, ಸ್ವಲ್ಪ ದಿನ ಒಟ್ಟಿಗೇ ಇರೋಣ’, ‘ಇಷ್ಟು ಬೇಗ ಮಕ್ಕಳು ಬೇಡ, ಸ್ವಲ್ಪ ದಿನ ಸ್ವತಂತ್ರವಾಗಿ ಇರೋಣ’ ಎಂಬ ಇಂದಿನ ಯುವಜನರ ಮನಸ್ಥಿತಿ ಹಾಗೂ ಅದಕ್ಕೆ ಭಿನ್ನವಾಗಿರುವ ಪೋಷಕರ ದೃಷ್ಟಿಕೋನದ ಸುತ್ತ ಕಥೆ ಸಾಗುತ್ತದೆ.
ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಹತ್ತಕ್ಕೂ ಹೆಚ್ಚು ಹೌಸ್ಫುಲ್ ಪ್ರದರ್ಶನಗಳನ್ನು ಕಂಡಿರುವ ನಾಟಕವು ಶಿವಮೊಗ್ಗದ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ.
ಎಂಟು ವರ್ಷಗಳಿಂದ ರಂಗಚಟುವಟಿಕೆಯಲ್ಲಿ ತಂಡ
ಬೆಂಗಳೂರಿನ ಅಂತರಂಗ-ಬಹಿರಂಗ ರಂಗತಂಡವು ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ‘ಸ್ನಿಗ್ಧ’, ‘ಬಾಯ್ಬಡ್ಕಿ’, ‘ಮಿಸ್ಟರ್ ರಾವ್ ಅಂಡ್ ಅಸೋಸಿಯೇಟ್ಸ್’, ‘ಹಿಂಗ್ ಮಾಡಿದ್ರೆ ಹೆಂಗೆ’, ‘ಅನುಗ್ರಹ’, ‘ಅನುಮಾನದ ಅವಾಂತರ’ ಹಾಗೂ ‘ಬಾಯಿ ತುಂಬ ನಗ್ಬಿಡಿ’ ಸೇರಿದಂತೆ ಹಲವು ನಾಟಕಗಳನ್ನು ತಂಡ ಪ್ರದರ್ಶಿಸಿದೆ.
ರಂಗಾಯಣ, ಚಂದನ (ದೂರದರ್ಶನ), ದಸರಾ ಮಹೋತ್ಸವ ಹಾಗೂ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮತ್ತು ಚಾರಿಟಿ ಪ್ರದರ್ಶನಗಳು ಸೇರಿದಂತೆ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಅನುಭವ ತಂಡಕ್ಕಿದೆ.
ಟಿಕೆಟ್ ದರ ₹100
ನಾಟಕದ ಟಿಕೆಟ್ಗಳು ಆನ್ಲೈನ್ನಲ್ಲಿ ಹಾಗೂ ಪ್ರದರ್ಶನದ ದಿನ ಕುವೆಂಪು ರಂಗಮಂದಿರದಲ್ಲಿ ಲಭ್ಯವಿರಲಿವೆ. ಟಿಕೆಟ್ ದರ ₹100 ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಂಕರ್ ಬೆಳಲಕಟ್ಟೆ ಅವರನ್ನು 9148192739 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.
