SUDDILIVE || SHIVAMOGGA
ಸೋಮಣ್ಣ ಆನೆ ಅವಾಂತರ: ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಧಾರ್ಮಿಕ ಪರಿಹಾರಕ್ಕೆ ಒತ್ತು ಎಂದ ಕೆ.ಎಸ್. ಈಶ್ವರಪ್ಪ-Somanna elephant tragedy: The reason is the negligence of forest officials, the guilty should be punished – Former MLA K.B. Prasannakumar, K.S. Eshwarappa demand Homa havana
ಶಿವಮೊಗ್ಗ: ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ಸಕ್ರೆಬೈಲು ಶಿಬಿರದ ಸೋಮಣ್ಣ ಆನೆ ಏಕಾಏಕಿ ನಿಯಂತ್ರಣ ತಪ್ಪಿ ಓಡಿದ ಪರಿಣಾಮ ಅಂಬಾರಿ ನುಚ್ಚುನೂರಾಗಿದ್ದು, ವಾಹನಗಳಿಗೆ ಹಾನಿಯಾಗಿದೆ. ಈ ಘಟನೆಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದ್ದಾರೆ. ಇದೇ ವಿಚಾರವಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಧಾರ್ಮಿಕ ಪರಿಹಾರಕ್ಕೆ ಒತ್ತು ನೀಡಬೇಕೆಂದಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ
ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ನಡೆದ ಅವಘಡದ ಕುರಿತು ನಗರದಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಈ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ನಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ವಿಚಾರವನ್ನು ತರಲಾಗಿದ್ದು, ಜಿಲ್ಲಾಧಿಕಾರಿಗಳು ಮರುದಿನ ಬೆಳಗ್ಗೆ 11 ಗಂಟೆಗೆ ಬಂದು ಚರ್ಚೆ ನಡೆಸುವಂತೆ ಆಹ್ವಾನಿಸಿದ್ದರು. ಅದರಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆದಿದೆ.
ಸಭೆಯಲ್ಲಿ ಕೆ.ಬಿ. ಪ್ರಸನ್ನಕುಮಾರ್ ಸೇರಿದಂತೆ ಹಲವು ಮುಖಂಡರು ಹಾಗೂ ಪಾಲಿಕೆ ಸದಸ್ಯರು ಭಾಗವಹಿಸಿ, ಇಂತಹ ಘಟನೆಗಳು ಮರುಕಳಿಸದಂತೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು ಮತ್ತು ಕಾನೂನಿನ ಚೌಕಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರತಿದಿನ ಜನರು ಓಡಾಡುವ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆಯದಂತೆ ಏನು ಮಾಡಬೇಕು, ಯಾವ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ ಮಾಜಿ ಡಿಸಿಎಂಈಶ್ವರಪ್ಪ ಧಾರ್ಮಿಕ ಪೂಜೆಯ ಮೊರೆಗೆ ಒತ್ತು ನೀಡುವಂತೆ ಸಭೆಯಲ್ಲಿ ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಘಟನೆಗೆ ಕಾರಣ: ಕೆ.ಬಿ. ಪ್ರಸನ್ನಕುಮಾರ್
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, “ನಾವು ಯಾವಾಗಲೂ ಅದ್ಧೂರಿ ದಸರಾ ಬಗ್ಗೆ ಮಾತನಾಡುತ್ತಾ ಬಂದಿದ್ದೇವೆ. 2016ರಲ್ಲಿ ನಾನು ಶಾಸಕನಾಗಿದ್ದಾಗ, ಎಚ್.ಕೆ. ಮರಿಯಪ್ಪನವರು ಮೇಯರ್ ಆಗಿದ್ದ ಸಂದರ್ಭದಲ್ಲಿ ಪಾಲಿಕೆಯ ಗೌರವಾನ್ವಿತ ಸದಸ್ಯರೆಲ್ಲರೂ ಸೇರಿ ತೀರ್ಮಾನ ಕೈಗೊಂಡು ಬೆಳ್ಳಿಯ ಆನೆಯ ಅಂಬಾರಿಯನ್ನು ಪ್ರಮುಖವಾಗಿ ಪರಿಚಯಿಸಿದೆವು. 2016ರಿಂದ ಈ ಬೆಳ್ಳಿಯ ಅಂಬಾರಿಯನ್ನು ಬಳಸಲಾಗುತ್ತಿದೆ. ಅದಕ್ಕೂ ಮೊದಲು ಮರದಿಂದ ತಯಾರಿಸಿದ ಅಂಬಾರಿ ಇತ್ತು. ಕಳೆದ ಹತ್ತು ವರ್ಷಗಳಿಂದ, ಅಂದರೆ 2026ರವರೆಗೂ ಇದನ್ನು ಬಳಸಿಕೊಂಡು ಬರಲಾಗಿತ್ತು. ಆದರೆ ನಿನ್ನೆ ಅದು ನುಚ್ಚುನೂರಾಗಿದೆ.
ಇದಕ್ಕೆಲ್ಲ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ನೇರ ಕಾರಣ ಎಂದು ನಾನು ಹೇಳಲು ಬಯಸುತ್ತೇನೆ. ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳಿಗೆ ಲಂಗುಲಗಾಮಿಲ್ಲದಂತಾಗಿದೆ. ಕಳೆದ ಆರು ತಿಂಗಳಿನಿಂದ ಸಕ್ರೆಬೈಲು ಆನೆ ಶಿಬಿರದಲ್ಲಿ ಏನೇನು ನಡೆಯುತ್ತಿದೆ, ಎಷ್ಟು ಆನೆಗಳು ಮೃತಪಟ್ಟಿವೆ ಎಂಬುದನ್ನು ಪತ್ರಿಕೆ ಮತ್ತು ಟಿವಿಗಳಲ್ಲಿ ನೋಡಿದ್ದೇವೆ. ಸಿಂಹಧಾಮದಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟಿರುವ ಘಟನೆ ಸೇರಿದಂತೆ ಹಲವು ವಿಚಾರಗಳು ನಡೆದಿವೆ. ಪ್ರಾಣಿಗಳ ಸಾವು ಸೇರಿದಂತೆ ಅನೇಕ ಘಟನೆಗಳು ನಡೆದ 10-15 ದಿನಗಳ ನಂತರವಷ್ಟೇ ಮಾಧ್ಯಮಗಳ ಗಮನಕ್ಕೆ ಬರುತ್ತಿವೆ.
ಇವೆಲ್ಲವನ್ನೂ ಅಂದಿನಿಂದಲೇ ನಿಯಂತ್ರಣಕ್ಕೆ ತಂದಿದ್ದರೆ ನಿನ್ನೆ ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲ ಎಂಬುದು ನನ್ನ ಅಭಿಪ್ರಾಯ. ಅಧಿಕಾರಿಗಳಿಗೆ ಹೇಳುವವರು, ಕೇಳುವವರು ಇಲ್ಲದಂತಾಗಿರುವುದು ಮತ್ತು ನಿರ್ಲಕ್ಷ್ಯತನವೇ ಇದಕ್ಕೆ ಕಾರಣ. ತಪ್ಪಿತಸ್ಥ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಅವರ ಮೂಲಕ ಸರ್ಕಾರಕ್ಕೂ ಮನವಿ ಮಾಡುತ್ತೇನೆ. ಸಣ್ಣ ಘಟನೆ ಎಂದು ನಿರ್ಲಕ್ಷಿಸಬಾರದು. ಈಗಲೇ ಕ್ರಮ ಕೈಗೊಳ್ಳದಿದ್ದರೆ ಮುಂದೊಂದು ದಿನ ಇನ್ನೂ ದೊಡ್ಡ ಅನಾಹುತ ಸಂಭವಿಸಬಹುದು” ಎಂದು ಎಚ್ಚರಿಸಿದರು.
ಜನರ ಆತಂಕ ನಿವಾರಣೆಗೆ ಧಾರ್ಮಿಕ ಪ್ರಾರ್ಥನೆ ಅಗತ್ಯ
“ನಿನ್ನೆ ನಡೆದ ಘಟನೆಯ ಬಳಿಕ ನಮ್ಮ ಊರಿಗೆ ಕಂಟಕ, ಅಪಶಕುನ ಎಂಬ ರೀತಿಯಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಜನರ ಮಾನಸಿಕ ನೆಮ್ಮದಿ ಮತ್ತು ಧೈರ್ಯಕ್ಕಾಗಿ ಧಾರ್ಮಿಕವಾಗಿಯೂ ಸೂಕ್ತ ಕ್ರಮ ಕೈಗೊಳ್ಳಬೇಕು. ಹಿಂದೂಗಳು ತಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ಗುರುಹಿರಿಯರ ಸಲಹೆಯಂತೆ ಪ್ರಾರ್ಥನೆ ಮಾಡಬೇಕು. ಕ್ರೈಸ್ತರು ತಮ್ಮ ರೀತಿಯಲ್ಲಿ ಪ್ರಾರ್ಥಿಸಬೇಕು. ಮುಸ್ಲಿಂ ಬಾಂಧವರೂ ತಮ್ಮ ಧಾರ್ಮಿಕ ಪದ್ಧತಿಯಂತೆ ದೇವರಲ್ಲಿ ಪ್ರಾರ್ಥಿಸಬೇಕು. ಯಾವುದೇ ರೀತಿಯ ಕಂಟಕ ಎದುರಾಗದಿರಲಿ ಎಂದು ಎಲ್ಲರೂ ಒಟ್ಟಾಗಿ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಬೇಕು.
ಇಲ್ಲಿ ಎರಡು ವಿಚಾರಗಳಿವೆ. ಮೊದಲನೆಯದು, ತಪ್ಪು ಮಾಡಿದ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಎರಡನೆಯದು, ಮುಂದೆ ಯಾವುದೇ ಅನಾಹುತ ಸಂಭವಿಸದಿರಲಿ ಎಂಬ ನಂಬಿಕೆ ಮತ್ತು ಧೈರ್ಯ ಜನರಲ್ಲಿ ಮೂಡಿಸಲು ಪ್ರಾರ್ಥನೆ ಮಾಡಬೇಕು” ಎಂದು ಕೆ.ಬಿ. ಪ್ರಸನ್ನಕುಮಾರ್ ಅಭಿಪ್ರಾಯಪಟ್ಟರು.
ಅಧಿಕಾರಿಗಳಿಗೆ ಬೆಂಬಲ ನೀಡುವವರ ವಿರುದ್ಧವೂ ಆಕ್ಷೇಪ
“ಪ್ರತಿವರ್ಷ ಇಂತಹ ವಿಚಾರಗಳು ಸುದ್ದಿಯಾಗುತ್ತವೆ. ಆದರೆ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಆಗುತ್ತಿಲ್ಲ. ಕೆಲವರು ಅಧಿಕಾರಿಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಈಗ ಶಾಸಕರೂ ಅವರ ಪರವಾಗಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೇಲಧಿಕಾರಿಗಳೂ ಬೆಂಬಲ ನೀಡುತ್ತಾರೆ. ಅಧಿಕಾರಿಗಳಿಗೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ.
ಅವರು ತಮ್ಮದೇ ಕೋಟೆ ಕಟ್ಟಿಕೊಂಡು ಏನು ಮಾಡುತ್ತಿದ್ದಾರೆ ಎಂಬುದು ಅವರಿಗೇ ಗೊತ್ತು. ಹೀಗೆಯೇ ಮುಂದುವರಿದರೆ ಜನರ ಭಾವನೆಗಳೊಂದಿಗೆ ಆಟವಾಡಿದಂತಾಗುತ್ತದೆ. 2016ರಲ್ಲಿ ಬಹಳ ಕಷ್ಟಪಟ್ಟು ಬೆಳ್ಳಿಯ ಅಂಬಾರಿಯನ್ನು ತಯಾರಿಸಲಾಗಿತ್ತು. ಅದನ್ನು ತಯಾರಿಸಿದ ವ್ಯಕ್ತಿಗೆ ಎಷ್ಟು ನೋವಾಗಿರಬಹುದು? ನಾವು ಹಣ ಸಂಗ್ರಹಿಸಿ ಕೊಟ್ಟಿರಬಹುದು, ಸಭೆಯಲ್ಲಿ ತೀರ್ಮಾನ ಕೈಗೊಂಡಿರಬಹುದು. ಆದರೆ ಅದನ್ನು ಕೆತ್ತನೆ ಮಾಡಿ ರೂಪಿಸಿದ ವ್ಯಕ್ತಿಯ ನೋವನ್ನು ಅರ್ಥಮಾಡಿಕೊಳ್ಳಬೇಕು. ಇದೆಲ್ಲಕ್ಕೂ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ನನ್ನ ನೇರ ಆರೋಪ. ಕಾನೂನಿನ ಪ್ರಕಾರ ಅವರಿಗೆ ಆಗಬೇಕಾದ ಶಿಕ್ಷೆಯಾಗಬೇಕು” ಎಂದು ಆಗ್ರಹಿಸಿದರು.
ಆನೆಯನ್ನು ಬದಲಿಸುವ ನಿರ್ಧಾರ ಯಾರದ್ದು?
ಸೋಮಣ್ಣ ಆನೆಯನ್ನು ಅಂಬಾರಿ ಹೊರುವ ಕಾರ್ಯಕ್ಕೆ ಆಯ್ಕೆ ಮಾಡಿದ ನಿರ್ಧಾರದ ಬಗ್ಗೆಯೂ ಪ್ರಶ್ನೆ ಎತ್ತಿದ ಕೆ.ಬಿ. ಪ್ರಸನ್ನಕುಮಾರ್, “ನಿನ್ನೆ ಆನೆ ಹೊರಡುವ ಸಮಯದಲ್ಲಿ ಮಾವುತನಿಗೆ ಯಾರೊಂದಿಗೋ, ಪಾಲಿಕೆ ಅಥವಾ ಪೊಲೀಸರೊಂದಿಗೆ ಜಗಳವಾಗಿತ್ತು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆನೆ ಬದಲಾವಣೆ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ. ಆದರೆ ಅಂಬಾರಿ ಹೊರುವ ಆನೆಯನ್ನು ಬದಲಿಸುವ ಮೊದಲು ತಜ್ಞರೊಂದಿಗೆ ಚರ್ಚೆ ನಡೆಸಲಾಗಿತ್ತೇ?
ಮೂರು-ನಾಲ್ಕು ಅಧಿಕಾರಿಗಳು ತಾವೇ ನಿರ್ಧಾರ ತೆಗೆದುಕೊಂಡಿದ್ದರೆ, ನಾಳೆ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಹೊರುತ್ತಾರೆ? ನಮ್ಮ ಮನೆಯಲ್ಲಿನ ಸಣ್ಣ ಕೆಲಸಕ್ಕೂ ನಾಲ್ಕು ಜನರನ್ನು ಕೇಳಿ ನಿರ್ಧಾರ ಮಾಡುತ್ತೇವೆ. ಇದು ಇಷ್ಟು ದೊಡ್ಡ ಸಾರ್ವಜನಿಕ ಕಾರ್ಯಕ್ರಮ. ಇಂತಹ ನಿರ್ಧಾರವನ್ನು ಅಧಿಕಾರಿಗಳು ತಾವೇ ತೆಗೆದುಕೊಳ್ಳುವುದು ಸರಿಯೇ? ಈ ವಿಚಾರವನ್ನು ಯಾರ ಗಮನಕ್ಕೆ ತಂದಿದ್ದರು ಎಂದು ಜಿಲ್ಲಾಧಿಕಾರಿಗಳನ್ನು ಕೇಳಿದೆ. ಅಧಿಕಾರಿಗಳೇ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಉತ್ತರ ಬಂದಿದೆ.
ಸಾರ್ವಜನಿಕ ಕಾರ್ಯಕ್ರಮಗಳ ವಿಚಾರದಲ್ಲಿ ದೊಡ್ಡ ಮಟ್ಟದ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಶಾಸಕರು ಅಥವಾ ಇತರರು ಯಾರ ಪರವಾಗಿ ಮಾತನಾಡಿದರೂ ನಾವು ಈ ವಿಚಾರವನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಹೇಳಿದರು.
ಧಾರ್ಮಿಕ ರೂಪದಲ್ಲಿ ಪರಿಹಾರಕ್ಕೆ ಈಶ್ವರಪ್ಪ ಆಗ್ರಹ
ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ಸೋಮಣ್ಣ ಆನೆ ನಿಯಂತ್ರಣ ತಪ್ಪಿದ ಘಟನೆ ಕುರಿತು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕೂಡ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆಘಟನೆಯನ್ನ ಇನ್ನೊಬ್ಬರ ಮೇಲೆ ಹೋರಿಸಲು ಇಚ್ಛೆ ಪಡೊಲ್ಲ. ಘಟನೆಯನ್ನ ಧಾರ್ಮಿಕವಾಗಿ ಬಗೆಹರಿಸಿಕೊಳ್ಳೋಣ ಎಂದರು.
ಸೋಮಣ್ಣ ಆನೆಯಿಂದ ಸಂಭವಿಸಿದ ಅವಘಡದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಕಾರ್ಯವೈಖರಿ, ಆನೆಗಳ ತರಬೇತಿ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಆನೆಗಳ ಆಯ್ಕೆ ಮತ್ತು ಅಧಿಕಾರಿಗಳ ಹೊಣೆಗಾರಿಕೆ ಕುರಿತು ಚರ್ಚೆ ತೀವ್ರಗೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲಿ, ಆದರೆ ನಿರಂತರ ನಡೆಯುತ್ತಿರುವ ಮತ್ತು ಚಾಮುಙಡೇಶ್ವರಿ ವಿಗ್ರಹ ಭಗ್ನವಾಗಿರುವುದಕ್ಕೆ ಹೋಮ ಹವನ ಮಾಡಿಸಿ ಇದನ್ನ ಧಾರ್ಮಿಕವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದರು.
