ಶಿವಮೊಗ್ಗ ದಸರಾ ಜಂಬೂಸವಾರಿ ಅವಘಡ: ಅಧಿಕಾರಿಗಳ ಅಮಾನತ್ತಿಗೆ ಸಿಂಹ ಸೇನೆ ಮತ್ತು ಪರಿಸರ ಆಸಕ್ತರ ಆಗ್ರಹ- Shivamogga Dasara Jambu Savari incident: Simha Sena demands suspension of officials

 SUDDILIVE || SHIVAMOGGA

ಶಿವಮೊಗ್ಗ ದಸರಾ ಜಂಬೂಸವಾರಿ ಅವಘಡ: ಅಧಿಕಾರಿಗಳ ಅಮಾನತ್ತಿಗೆ ಸಿಂಹ ಸೇನೆ ಮತ್ತು ಪರಿಸರ ಆಸಕ್ತರ ಆಗ್ರಹ-  Shivamogga Dasara Jambu Savari incident: Simha Sena demands suspension of officials  
Dasara, jambo

ತಾಲೀಮು ನೀಡದ ಆನೆಯ ಮೇಲೆ ಅಂಬಾರಿ ಹೊರಿಸಿದ್ದೇ ಅವಘಡಕ್ಕೆ ಕಾರಣ; ಸಮಿತಿ ಮುಖ್ಯಸ್ಥರ ವಜಾಕ್ಕೂ ಒತ್ತಾಯ



ಶಿವಮೊಗ್ಗ: ನಗರದ ದಸರಾ ಜಂಬೂಸವಾರಿ ಸಂದರ್ಭದಲ್ಲಿ ಸೋಮಣ್ಣ ಆನೆ ಬೆದರಿ ಅಂಬಾರಿ ಕೆಳಗೆ ಬಿದ್ದ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಜವಾಬ್ದಾರಿಯುತ ಅಧಿಕಾರಿಗಳನ್ನು ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಸಂಘಟನೆ ಆಗ್ರಹಿಸಿದೆ.

ಜಂಬೂಸವಾರಿಯಲ್ಲಿ ನಡೆದ ಅವಘಡವನ್ನು ಖಂಡಿಸಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ರವಿಪ್ರಸಾದ್ ಎಂ. ಅವರು, ಆನೆಗೆ ಸಮರ್ಪಕವಾಗಿ ತಾಲೀಮು ನೀಡದೆ, ಜನಸಂದಣಿ ಮತ್ತು ವಾದ್ಯಗಳ ಭಾರೀ ಶಬ್ದಕ್ಕೆ ಒಗ್ಗಿಕೊಳ್ಳದ ಆನೆಯನ್ನು ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿರುವುದು ಗಂಭೀರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ದಸರಾ ಉತ್ಸವದಂತಹ ದೊಡ್ಡ ಸಾರ್ವಜನಿಕ ಕಾರ್ಯಕ್ರಮದಲ್ಲಿ ಆನೆಗಳನ್ನು ಪಾಲ್ಗೊಳ್ಳುವಂತೆ ಮಾಡುವ ಮೊದಲು ಅವುಗಳ ದೈಹಿಕ ಸಾಮರ್ಥ್ಯ, ಮಾನಸಿಕ ಸ್ಥಿತಿ, ತರಬೇತಿ ಹಾಗೂ ಜನಸಂದಣಿಯಲ್ಲಿ ವರ್ತಿಸುವ ಸಾಮರ್ಥ್ಯವನ್ನು ಪರಿಶೀಲಿಸಬೇಕಿತ್ತು. ಆದರೆ, ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳದೆ ಆನೆಯ ಮೇಲೆ ಅಂಬಾರಿ ಹೊರಿಸಿ ಮೆರವಣಿಗೆಯಲ್ಲಿ ಕರೆತಂದ ಪರಿಣಾಮ ಈ ಅವಘಡ ಸಂಭವಿಸಿದೆ ಎಂಬುದು ಸಂಘಟನೆಯ ಆರೋಪವಾಗಿದೆ.

ಜನರ ಜೀವಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇತ್ತು

ಜಂಬೂಸವಾರಿಯ ಸಂದರ್ಭದಲ್ಲಿ ಜನಸಂದಣಿ ಮತ್ತು ವಾದ್ಯಗಳ ಶಬ್ದಕ್ಕೆ ಸೋಮಣ್ಣ ಆನೆ ಬೆದರಿ ನಿಯಂತ್ರಣ ತಪ್ಪಿದ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದೇ ಘಟನೆ ಗಾಂಧಿ ಬಜಾರ್ ಮುಖ್ಯರಸ್ತೆ ಅಥವಾ ಅಲ್ಲಮಪ್ರಭು ಮೈದಾನ, ಫ್ರೀಡಂ ಪಾರ್ಕ್‌ನಂತಹ ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಸಂಭವಿಸಿದ್ದರೆ ಅನೇಕ ಜನರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿತ್ತು ಎಂದು ರವಿಪ್ರಸಾದ್ ಎಂ. ಆತಂಕ ವ್ಯಕ್ತಪಡಿಸಿದರು.

ಪ್ರಾಣಿಗಳ ಸುರಕ್ಷತೆ ಮತ್ತು ಸಾರ್ವಜನಿಕರ ಜೀವ ರಕ್ಷಣೆಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಅರಣ್ಯ ಇಲಾಖೆಯೇ ಅಗತ್ಯ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷಿಸಿರುವುದು ವಿಷಾದನೀಯ ಎಂದು ಅವರು ಟೀಕಿಸಿದರು. ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಬೆಳ್ಳಿ ಅಂಬಾರಿ, ಚಾಮುಂಡೇಶ್ವರಿ ವಿಗ್ರಹಕ್ಕೆ ಹಾನಿ: ಸಂಘಟನೆ ಆಕ್ರೋಶ

ಜಂಬೂಸವಾರಿ ಸಂದರ್ಭದಲ್ಲಿ ಉಂಟಾದ ಅವಘಡದಿಂದ ಮಹಾರಾಜರ ಕಾಲದ ಬೆಳ್ಳಿ ಅಂಬಾರಿ ಮುರಿದಿರುವುದು ಹಾಗೂ ತಾಯಿ ಚಾಮುಂಡೇಶ್ವರಿಯ ವಿಗ್ರಹದ ಬೆರಳುಗಳು ಮುರಿದು ಬಿದ್ದಿರುವುದು ಸಣ್ಣ ವಿಚಾರವೇ ಎಂದು ಸಂಘಟನೆಯು ಜಿಲ್ಲಾಡಳಿತ ಮತ್ತು ಶಾಸಕರನ್ನು ಪ್ರಶ್ನಿಸಿದೆ.

ಘಟನೆಯ ಗಂಭೀರತೆಯನ್ನು ಕಡಿಮೆ ಮಾಡಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ದಸರಾ ಉತ್ಸವವು ಶಿವಮೊಗ್ಗದ ಜನರ ಭಾವನೆ ಮತ್ತು ಸಂಪ್ರದಾಯಕ್ಕೆ ಸಂಬಂಧಿಸಿದ ಮಹತ್ವದ ಆಚರಣೆಯಾಗಿದೆ. ಇಂತಹ ಸಂದರ್ಭದಲ್ಲಿ ಐತಿಹಾಸಿಕ ಮಹತ್ವ ಹೊಂದಿರುವ ಅಂಬಾರಿ ಹಾಗೂ ದೇವಿಯ ವಿಗ್ರಹಕ್ಕೆ ಹಾನಿಯಾಗಿರುವುದು ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಹೇಳಿದರು.

ಅವಘಡದ ಬಳಿಕ ಸಾರ್ವಜನಿಕರಲ್ಲಿ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿರುವುದನ್ನು ಗಮನಿಸಬಹುದು. ಇಂತಹ ಘಟನೆಗೆ ಕೇವಲ ಸಮಜಾಯಿಷಿ ನೀಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಆಡಳಿತವು ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಸಮಿತಿ ಮುಖ್ಯಸ್ಥರನ್ನು ವಜಾಗೊಳಿಸಲು ಆಗ್ರಹ

ದಸರಾ ಜಂಬೂಸವಾರಿಗೆ ಆನೆಗಳನ್ನು ಕರೆತರುವುದು ಮತ್ತು ಅಂಬಾರಿ ಹೊರಿಸುವ ವ್ಯವಸ್ಥೆಗಾಗಿ ಸಮಿತಿಯೊಂದನ್ನು ರಚಿಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಈ ಸಮಿತಿಯ ಮುಖ್ಯಸ್ಥರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಿ, ಆನೆಗಳ ಆಯ್ಕೆ, ತರಬೇತಿ, ಭದ್ರತಾ ವ್ಯವಸ್ಥೆ ಹಾಗೂ ಮೆರವಣಿಗೆಯ ನಿರ್ವಹಣೆಯಲ್ಲಿ ಲೋಪವಾಗಿದೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಆಗ್ರಹಿಸಿದೆ.

ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಪಟ್ಟ ಪ್ರಮುಖ ಅಧಿಕಾರಿಗಳಾದ ಹನುಮಂತಪ್ಪ ಮತ್ತು ಪಟಗಾರ ಅವರನ್ನು ತಕ್ಷಣ ಅಮಾನತುಗೊಳಿಸಿ ತನಿಖೆಗೆ ಆದೇಶಿಸಬೇಕು ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಧುಸೂದನ್ ಎಸ್.ಎಂ. ಒತ್ತಾಯಿಸಿದರು.

ಜಂಬೂಸವಾರಿ ಸಂದರ್ಭದಲ್ಲಿ ನಡೆದ ಘಟನೆಯ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ, ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ದಸರಾ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆನೆಗಳನ್ನು ಬಳಸುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕ್ರಮ ವಹಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆನೆ ಪ್ರಿಯರಾದ ದೀಪಕ್ ನಾಡಿಗ್, ರಾಗಿಗುಡ್ಡದ ರಮೇಶ್ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಜಿತ್ ನವಲೆ, ಜಿಲ್ಲಾ ಉಪಾಧ್ಯಕ್ಷರಾದ ಎಂ. ನಯಾಜ್, ಮಹೇಶ್, ನೂರಾ, ಜಿಲ್ಲಾ ವಕ್ತಾರ ಭರತ್ ಎಸ್. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Shivamogga Dasara Jambu Savari incident: Simha Sena demands suspension of officials  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close