SUDDILIVE || SHIVAMOGGA
ಶಿವಮೊಗ್ಗ: ಬಸ್‌ನಲ್ಲಿ ಬಿಟ್ಟುಹೋದ ₹2.60 ಲಕ್ಷ ಮೌಲ್ಯದ ಚಿನ್ನ, ನಗದು ಇದ್ದ ಬ್ಯಾಗ್ ಪತ್ತೆ- Shivamogga: Bag containing gold, cash worth ₹2.60 lakh left on bus found
ಶಿವಮೊಗ್ಗ: ಖಾಸಗಿ ಬಸ್‌ನಲ್ಲಿ ಮಹಿಳೆಯೊಬ್ಬರು ಮರೆತು ಬಿಟ್ಟುಹೋಗಿದ್ದ ಸುಮಾರು ₹2 ಲಕ್ಷ ಮೌಲ್ಯದ ಚಿನ್ನಾಭರಣ, ₹60 ಸಾವಿರ ನಗದು ಹಾಗೂ ಮೊಬೈಲ್ ಫೋನ್ ಇದ್ದ ಬ್ಯಾಗ್‌ನ್ನು ದೊಡ್ಡಪೇಟೆ ಠಾಣೆ ಪೊಲೀಸರು ಪತ್ತೆಹಚ್ಚಿ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಲಸೂರು ಗೇಟ್ ಮೂಲದ ಮಹಿಳೆಯೊಬ್ಬರು ಅ.6ರಂದು ಶಿವಮೊಗ್ಗದಿಂದ ತರೀಕೆರೆಯತ್ತ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ವೇಳೆ ತಮ್ಮ ಬಳಿಯಿದ್ದ ಬ್ಯಾಗ್‌ನ್ನು ಬಸ್‌ನಲ್ಲಿಯೇ ಬಿಟ್ಟು ತರೀಕೆರೆಯಲ್ಲಿ ಇಳಿದಿದ್ದಾರೆ.
ಬಸ್‌ನಿಂದ ಇಳಿದ ಬಳಿಕ ಬ್ಯಾಗ್ ತಮ್ಮ ಬಳಿ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ಅದರಲ್ಲಿ ಸುಮಾರು ₹2 ಲಕ್ಷ ಮೌಲ್ಯದ ಬಂಗಾರದ ಒಡವೆಗಳು, ₹60 ಸಾವಿರ ನಗದು ಹಾಗೂ ಮೊಬೈಲ್ ಫೋನ್ ಇರುವುದಾಗಿ ತಿಳಿದುಬಂದಿದೆ. ಕೂಡಲೇ ಮಹಿಳೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಮಹಿಳೆ ಪ್ರಯಾಣಿಸಿದ್ದ ಖಾಸಗಿ ಬಸ್‌ನ್ನು ಪತ್ತೆಹಚ್ಚುವ ಪ್ರಯತ್ನ ನಡೆಸಿದ್ದಾರೆ. ಪೊಲೀಸ್ ಸಿಬ್ಬಂದಿ ಮಂಜಪ್ಪ, ಹೆಡ್ ಕಾನ್‌ಸ್ಟೆಬಲ್ ಹಾಗೂ ಚಂದ್ರನಾಯ್ಕ, ಪೊಲೀಸ್ ಕಾನ್‌ಸ್ಟೆಬಲ್ ಅವರು ಕಾರ್ಯಾಚರಣೆ ನಡೆಸಿ ಬಸ್‌ನ್ನು ಪತ್ತೆಹಚ್ಚಿದ್ದಾರೆ.
ಬಸ್‌ನಲ್ಲಿ ಪರಿಶೀಲನೆ ನಡೆಸಿದಾಗ ಮಹಿಳೆ ಬಿಟ್ಟುಹೋಗಿದ್ದ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿದ್ದ ಚಿನ್ನಾಭರಣ, ನಗದು ಹಣ ಹಾಗೂ ಮೊಬೈಲ್ ಸೇರಿದಂತೆ ವಸ್ತುಗಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಮಹಿಳೆಗೆ ಹಿಂದಿರುಗಿಸಿದ್ದಾರೆ.
ತಕ್ಷಣ ಸ್ಪಂದಿಸಿ ಬ್ಯಾಗ್‌ನ್ನು ಪತ್ತೆಹಚ್ಚಿ ಅಮೂಲ್ಯ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ ದೊಡ್ಡಪೇಟೆ ಠಾಣೆ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
