ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಪೊಲೀಸ್ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಸಾಹಸದಿಂದಾಗಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಓರ್ವ ಯುವಕನ ಜೀವ ಉಳಿದಿದೆ. ನಿನ್ನೆ ಸುರಿದ ಭಾರೀ ಮಳೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಅಬ್ಬಲಗೆರೆಯಿಂದ ಮುಂದೆ ಕೊಮ್ಮನಾಳು ಸಮೀಪದ ಖಾಸಗಿ ಶಾಲೆಯೊಂದರ ಬಳಿ ಭಾರೀ ಮಳೆಯಿಂದ ರಸ್ತೆ ಮೇಲೆಯೇ ನೀರು ಹರಿಯುತ್ತಿತ್ತು. ಗುಡ್ಡದ ಮೇಲೆ ಬಿದ್ದ ಮಳೆಯ ನೀರು ರಸ್ತೆ ಕ್ರಾಸ್ ಮಾಡಿ ತಗ್ಗು ಪ್ರದೇಶಗಳಿಗೆ ನುಗ್ಗಿತ್ತು. ಉತ್ತರ ಭಾರತದಲ್ಲಿ ಸುರಿಯುವ ಮೇಘಸ್ಫೋಟದಂತೆ ಮಳೆಯ ನೀರಿನ ಹರಿವಿತ್ತು ಎನ್ನುತ್ತಾರೆ ಸ್ಥಳೀಯರು.
ಈ ವೇಳೆ ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಪ್ರದೀಪ್ ಎಂಬವರು ತಮ್ಮ ಸ್ಪೆಂಡ್ಲರ್ ಬೈಕ್‌ನಲ್ಲಿ ನ್ಯಾಮತಿಯ ದೊಡ್ಡೆತ್ತಿನಳ್ಳಿಯ ಕಡೆಗೆ ಹೊರಟಿದ್ದರು. ರಸ್ತೆಯ ಮೇಲೆ ಹರಿಯುತ್ತಿದ್ದ ನೀರಿನ ರಭಸ ಅರಿಯದ ಅವರು ಅದೇ ರೋಡಿನಲ್ಲಿ ಮುಂದಕ್ಕೆ ಹೋಗಿದ್ದರು.
ಪರಿಣಾಮ ಹರಿಯುವ ನೀರಿನಲ್ಲಿ ಅವರು ಕೊಚ್ಚಿಕೊಂಡು ರಸ್ತೆಯ ಪಕ್ಕದಲ್ಲಿದ್ದ ಪ್ಲಾಂಟ್‌ನೊಳಗೆ ಹೋಗಿದ್ದಾರೆ. ಈ ದೃಶ್ಯವನ್ನು ಗಮನಿಸಿದ ಓರ್ವರು 112 ಪೊಲೀಸರಿಗೆ ಕರೆ ಮಾಡಿದ್ದಾರೆ. ಇಷ್ಟಾಗುವ ಹೊತ್ತಿಗೆ ಗಂಟೆ ರಾತ್ರಿ 11.30 ಆಗಿತ್ತು.
112 ಮೂಲಕ ಕರೆ ಸ್ವೀಕರಿಸಿದ ರೆಸ್ಪಾಂಡೆಂಟ್ ರಂಗನಾಥ್ ಹಾಗೂ ಡ್ರೈವರ್ ಪ್ರಸನ್ನರವರು ಕುವೆಂಪು ನಗರದಲ್ಲಿದ್ದರು. ವಿಷಯ ತಿಳಿಯುತ್ತಲೇ ಅವರು 112 ಗೆ ಕರೆ ಮಾಡಿದ ವ್ಯಕ್ತಿಯನ್ನು ಸಂಪರ್ಕ ಮಾಡಲು ಯತ್ನಿಸಿದ್ದಾರೆ. ಆದರೆ ಮಾಹಿತಿ ನೀಡಿದ್ದ ವ್ಯಕ್ತಿ ಸ್ವಿಚ್ ಮಾಡಿಕೊಂಡಿದ್ದರು. ಮೊದಲು ಫೆಕ್ ಕಾಲ್ ಇರಬಹುದು ಎಂದು ಕೊಂಡ ರಂಗನಾಥ್ ಹಾಗೂ ಪ್ರಸನ್ನ ವಿಷಯ ನಿರ್ಲಕ್ಷಿಸುವುದು ಬೇಡ ಅಂಥಾ ಐದು ನಿಮಿಷದಲ್ಲಿ ಸ್ಪಾಟ್‌ಗೆ ಬಂದಿದ್ದಾರೆ. ಆಗ ಅಲ್ಲೊಬ್ಬರು ವೃದ್ಧರು ನಿಂತುಕೊಂಡು ವ್ಯಕ್ತಿಯೊಬ್ಬನ ರಕ್ಷಣೆಗೆ ಮುಂದಾಗಿದ್ದು ಕಂಡಿದೆ. ತಕ್ಷಣವೇ ವಾಹನದಿಂದ ಇಳಿದ ಸಿಬ್ಬಂದಿ ಖುದ್ದು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದಾರೆ.
ಇತ್ತ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರದೀಪ್, ಮರದ ಪೊಟರೆಯ ಬಳಿ ಆಸರೆ ಪಡೆದು ಸಹಾಯಕ್ಕಾಗಿ ಕೂಗುತ್ತಿದ್ದರು. ಆ ವೇಳೆ ಅಲ್ಲಿಗೆ ಬಂದ 112 ಸಿಬ್ಬಂದಿ ರಂಗನಾಥ್ ಹಾಗೂ ಪ್ರಸನ್ನ ಅವರನ್ನ ಬಚಾವ್ ಮಾಡಿದ್ದಾರೆ. ಆ ಬಳಿಕ ಪ್ರದೀಪ್‌ರ ಯೋಗಕ್ಷೇಮ ವಿಚಾರಿಸಿದ ಅವರು, ಪ್ರಾಥಮಿಕ ಚಿಕಿತ್ಸೆಯ ಅವಶ್ಯಕತೆ ಇದೆಯಾ? ಏನಾಯ್ತು ಎಲ್ಲಿಯವರು? ಎಂದು ವಿಚಾರಿಸಿದ್ದಾರೆ. ಬಳಿಕ ಪ್ರದೀಪ್‌ರವರನ್ನು ಅವರ ಮನೆಗೆ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.
ಈ ನಡುವೆ ಪ್ರದೀಪ್‌ರವರು ನೀರಿನಲ್ಲಿ ಕೊಚ್ಚಿ ಹೋಗುವ ಸಂದರ್ಭದಲ್ಲಿ ಅವರ ಬೈಕ್ ಕೂಡ ನೀರಿನಲ್ಲಿ ಕೊಚ್ಚಿ ಹೋಗಿತ್ತು. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಆದಷ್ಟು ಬೈಕ್‌ನ್ನ ಹಿಡಿದುಕೊಳ್ಳುವ ಪ್ರಯತ್ನ ಮಾಡಿದ್ದ ಪ್ರದೀಪ್ ಆ ಬಳಿಕ ತಮ್ಮ ಪ್ರಯತ್ನ ಕೈ ಚೆಲ್ಲಿದ್ದರು. ಮೂರು ಅಡಿ ನೀರಿದ್ದರಿಂದ ರಾತ್ರಿ ಬೈಕ್ ಪತ್ತೆಯಾಗಿರಲಿಲ್ಲ. ಇವತ್ತು 112 ಸಿಬ್ಬಂದಿ ನೀರು ಹರಿದ ಪ್ರದೇಶದಲ್ಲಿ ಬೈಕ್ ಗಾಗಿ ಹುಡುಕಾಟ ನಡೆಸಿದ್ದಾರೆ. ಘಟನೆ ನಡೆದ ಜಾಗದಿಂದ ಸುಮಾರು ದೂರ ಕೊಚ್ಚಿ ಹೋಗಿದ್ದು ಮರವೊಂದರ ಬುಡದಲ್ಲಿ ಬಿದ್ದಿತ್ತು.
ಪೊಲೀಸ್ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸುವುದು ಅನಿವಾರ್ಯತೆಯ ಹೊಣೆ. ಆದಾಗ್ಯು, ತುರ್ತು ಸಂದರ್ಭದಲ್ಲಿ ಯಾವುದೇ ರಕ್ಷಣಾ ಸಾಮಗ್ರಿಯು ಇಲ್ಲದೆ ತಮ್ಮ ಜೀವದ ಬಗ್ಗೆಯು ಯೋಚಿಸಿದೆ ವ್ಯಕ್ತಿಯೊಬ್ಬನ ಜೀವ ಉಳಿಸಿದ್ದಾರೆ. ತಡರಾತ್ರಿಯ ಸಂದರ್ಭದಲ್ಲಿ ಯಾರೊಬ್ಬರು ಸಹಾಯಕ್ಕೆ ಸಿಗುವ ಭರವಸೆ ಇಲ್ಲದ ಹೊತ್ತಿನಲ್ಲಿ ರಂಗನಾಥ್ ಹಾಗೂ ಪ್ರಸನ್ನ ನಡೆಸಿದ ಈ ಕಾರ್ಯಾಚರಣೆ ನಿಜಕ್ಕೂ ಪೊಲೀಸ್ ಇಲಾಖೆಯೆ ಹೆಮ್ಮೆ ಪಡುವಂತಹ ವಿಚಾರವಾಗಿದೆ.
ಇದನ್ನೂ ಓದಿ-https://suddilive.in/archives/15125