ಸುದ್ದಿಲೈವ್/ಭದ್ರಾವತಿ
ಹೊಳೆಹೊನ್ನೂರು ಚಂದನಕೆರೆ ಸರ್ವೆ ನಂ. 12 ಎಂ.ಪಿ.ಎಂ. ನೆಡುತೋಪು ಮತ್ತು ಯಡೇಹಳ್ಳಿ ಸರ್ವೆ ನಂ. 66 ರಲ್ಲಿನ ಅರಣ್ಯ ಪ್ರದೇಶದಲ್ಲಿ ಮಂಜೂರಾದ ಹಕ್ಕುಪತ್ರಗಳನ್ನು ವಜಾ ಮಾಡಿರುವ ವಿರುದ್ಧ ದಲಿತ ಸಂಘಟನೆಗಳು ಹಾಗೂ ಮಾನವ ಹಕ್ಕು ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ನಿರತ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ನಿರ್ದೇಶಕರು ಅರಣ್ಯ ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ತಂಡವು ಪ್ರತಿಭಟನೆ ಅಂತ್ಯಗೊಳಿಸುವಂತೆ ಮನವಿ ಮಾಡಿದರು.
ಚಂದನಕೆರೆ ಸ.ನಂ.12ರಲ್ಲಿ 1980 ರಿಂದ ಎಂ.ಪಿ.ಎಂ. ರವರ ಸ್ವಾಧೀನದಲ್ಲಿದ್ದು, ನೀಲಗಿರಿ ನೆಡುತೋಪು ಇರುತ್ತದೆ. 2012-13 ರಲ್ಲಿ ಭದ್ರಾವತಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಸ್ವಾಧೀನ ಕೋರಿದ ಪ್ರಕರಣಗಳು ವಜಾ ಆಗಿದ್ದು, ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ಪ್ರತಿಭಟನಾಕಾರರ ಮನವಿಯನ್ನು ವಿಲೇ ಮಾಡಲು ಕಷ್ಟಸಾಧ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆರವರು ಪ್ರತಿಭಟನಾಕಾರರಿಗೆ ತಿಳುವಳಿಕೆ ನೀಡಿದರು.
ಪ್ರತಿಭಟನೆ ಮಾಡುತ್ತಿರುವ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಓಡಾಡುವ ಸ್ಥಳವಾಗಿದ್ದು, ಮಳೆಗಾಲ ಆಗಿದ್ದರಿಂದ ಗುಡುಗು ಮಿಂಚಿಗೆ ಪ್ರಾಣ ಹಾನಿಯಾಗುವ ಸಂಭವವಿರುತ್ತದೆ. ಇದು ಪ್ರತಿಭಟನೆ ಮಾಡಲು ಸೂಕ್ತ ಸ್ಥಳವಲ್ಲದ್ದರಿಂದ ಈ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ದಕ್ಕೆ ಆಗುವ ಸಂಭವವಿರುತ್ತದೆ. ಮತ್ತು ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯುವುದು ಅಪರಾಧವಾಗಿರುತ್ತದೆ ಆದ್ದರಿಂದ ಪ್ರತಿಭಟನೆಯನ್ನು ಬೇರೆಡೆಗೆ ಸ್ಥಳಾಂತರಿಸಿ ಪ್ರತಿಭಟನೆಯನ್ನು ಕೈ ಬಿಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
ಚಂದನಕೆರೆ ಸ. ನಂ. 12 ಎಂ.ಪಿ.ಎಂ. ನೆಡುತೋಪು ಪ್ರದೇಶವಾಗಿದ್ದು, ತೀವ್ರತರವಾದ ಅರಣ್ಯ ಪ್ರದೇಶವನ್ನು ಹೊಂದಿದೆ. ಅರಣ್ಯ ನಾಶವು ಉಪಗ್ರಹ ಆಧಾರಿತವಾಗಿ ಗುರುತಿಸಿ ದಾಖಲಾಗಿರುತ್ತದೆ. ಯಡೇಹಳ್ಳಿ ಸ.ನಂ.66 ಕಿರು ಅರಣ್ಯ ಪ್ರದೇಶವಾಗಿದ್ದು, ಅರಣ್ಯ ಪ್ರದೇಶದಲ್ಲಿ ಮಂಜೂರಾದ ಹಕ್ಕು ಪತ್ರಗಳನ್ನು ಪ್ರಾದೇಶಿಕ ನ್ಯಾಯಾಲಯವು ವಜಾ ಮಾಡಿರುತ್ತದೆ. ಅರಣ್ಯ ಪ್ರದೇಶದಲ್ಲಿ ಮಂಜೂರಾತಿ ಮತ್ತು ಸಾಗುವಳಿ ನೀಡುವುದು ಅರಣ್ಯ ಸಂರಕ್ಷಣಾ ಕಾಯ್ದೆ-1980ರ ಅನ್ವಯ ನಿಷಿದ್ಧವಾಗಿರುತ್ತದೆ. ಹಾಗೂ ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಗಳು ಅರಣ್ಯ ಪ್ರದೇಶಗಳಲ್ಲಿ ಮಂಜೂರಾತಿ ವಿರುದ್ಧ ನೀಡಿದ ತೀರ್ಪುಗಳನ್ನು ಉಲ್ಲೇಖಿಸಿ ಸಾಗುವಳಿ ಮಾಡುವುದು ತಪ್ಪಾದ ಕ್ರಮವಾಗಿದೆ ಎಂದು ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರತಿಭಟನಾ ನಿರತರಿಗೆ ವಿವರಿಸಿದರು.
ಚಂದನಕೆರೆ ಮತ್ತು ಯಡೇಹಳ್ಳಿ ಪ್ರದೇಶವು ಎಂ.ಪಿ.ಎಂ. ನೆಡುತೋಪು ಮತ್ತು ಅರಣ್ಯ ಪ್ರದೇಶವಾಗಿದ್ದು, ಈ ಪ್ರದೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪುಗಳು ಇರುವುದರಿಂದ ಮಂಜೂರಾತಿಗಳನ್ನು ಕಾನೂನುಗಳ ವ್ಯಾಪ್ತಿಯಲ್ಲಿ ಪರಿಶೀಲಿಸಲಾಗುವುದು. ಆದ್ದರಿಂದ ಪ್ರತಿಭಟನೆಯನ್ನು ಕೈಬಿಡುವಂತೆ ಜಿಲ್ಲಾಡಿಳಿತದವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭದ್ರಾವತಿ ತಹಶೀಲ್ದಾರರು ಮತ್ತು ತಾಲೂಕಿನ ಕಂದಾಯ, ಅರಣ್ಯ, ಎಂ.ಪಿ.ಎಂ. ಮತ್ತು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
ಇದನ್ನೂ ಓದಿ-https://www.suddilive.in/2024/07/blog-post_910.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ