ಬುಧವಾರ, ಜುಲೈ 31, 2024

ಎಸ್ಪಿ ನೇತೃತ್ವದಲ್ಲಿ ನೊಂದವರ ಸಭೆ



ಸುದ್ದಿಲೈವ್/ಶಿವಮೊಗ್ಗ


ಇಂದು ಸಂಜೆ ಶಿವಮೊಗ್ಗ ಬಿ ಉಪ ವಿಭಾಗ ಕಛೇರಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ. ಕೆ. ನೇತೃತ್ವದಲ್ಲಿ ನೊಂದವರ ಸಭೆ ನಡೆದಿದೆ.‌ ನೊಂದವರ ಕುಂದು ಕೊರತೆಯನ್ನು ಆಲಿಸಿದ ಅವರು ನೊಂದವರ ಕುರಿತು ಮಾತನಾಡಿ ಈ ಕೆಳಕಂಡ ಸಲಹೆ ಸೂಚನೆಗಳನ್ನ  ನೀಡಿದ್ದಾರೆ. 


ಮೇಕ್ ಫ್ರೀ ಟ್ರಿಪ್


1) Make Free Trip ಎಂಬ ನಕಲಿ ಸಂಸ್ಥೆಯ ಹೆಸರಿನಲ್ಲಿ ಪ್ರವಾಸ ಕರೆದುಕೊಂಡು ಹೋಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ತೆಯಾಗದೆ ಇರುವ ಬಗ್ಗೆ ನೊಂದವರ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.‌ ಇದಕ್ಕೆ ಉತ್ತರಿಸಿದ ಎಸ್ಪಿ ಪ್ರಕರಣ ದಾಖಲಾಗಿದ್ದು,  ಆರೋಪಿತರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ.  ಹಾಗೂ ಈ ರೀತಿಯ ನಕಲಿ ಜಾಲದ ಮೋಸಕ್ಕೆ ಒಳಗಾಗಬೇಡಿ ಎಂದು ಪೊಲೀಸ್ ಇಲಾಖೆಯಿಂದ ಅರಿವು ಕಾರ್ಯಕ್ರಮಗಳ  ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರೂ ಸಹ ಸಾರ್ವಜನಿಕರು ಸುಲಭವಾಗಿ ಮೋಸದ ಜಾಲಕ್ಕೆ ಒಳಗಾಗುತ್ತಿದ್ದಾರೆ. ಆನ್ ಲೈನ್ ಮುಖಾಂತರ ಹಣದ ವ್ಯವಹಾರ ಮಾಡುವಾಗ ಎಚ್ಚರವಹಿಸಬೇಕೆಂದು ಸೂಚಿಸಿದರು. 


ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ ಪತಿ


2)  ವಿಧ್ಯುತ್ ಅವಗಡದಿಂದಾಗಿ ಪತಿ ಮೃತಪಟ್ಟ ಪ್ರಕರಣದಲ್ಲಿ ಗುತ್ತಿಗೆದಾರರಿಂದ ಯಾವುದೇ ಪರಿಹಾರದ ಮೊತ್ತವು ಬಂದಿರುವುದಿಲ್ಲವೆಂದು ತಿಳಿಸಿದ್ದು, ಈಗಾಗಲೇ ಈ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಸೂಕ್ತ ಕಾಲಮಿತಿಯೊಳಗೆ ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಿದೆ. ಪರಿಹಾರಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಇಲಾಖೆಗೆ ಸಂಪರ್ಕಿಸಲು ತಿಳಿಸಲಾಯಿತು.  ಈ ಕುರಿತಂತೆ ಸದರಿಯವರಿಗೆ ಸಹಾಯ ಮಾಡಲು ಪಿಐ ವಿನೋಬನಗರ ಪೊಲೀಸ್ ಠಾಣೆ ರವರಿಗೆ ಎಸ್ಪಿ ಸ್ಥಳದಲ್ಲಿಯೇ ಸೂಚಿಸಿದರು. 


ಕೋರ್ಟ್ ನಲ್ಲಿ ರಾಜಿಗೆ ಸೂಚನೆ


3) ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣ‌ತಮ್ಮಂದಿರ ನಡುವಿನ ಗಲಾಟೆ ಪ್ರಕರಣವೊಂದು  ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದ್ದು,  ದೂರು ದಾಖಲಾದ ನಂತರ  ರಾಜಿ ಮಾಡಿಕೊಳ್ಳಲಾಗಿದ್ದು,  ಆದ್ದರಿಂದ ದೂರು ಹಿಂಪಡೆಯುವ ಬಗ್ಗೆ ಎಸ್ಪಿ ಅವರ ಮುಂದೆ ಪ್ರಸ್ರಾಪಹಮಗೊಂಡಿದೆ. ಇದಕ್ಕೆ ಉತ್ತರಿಸಿದ ಎಸ್ಪಿ ಮಿಥುನ್ ಕುಮಾರ್ ಯಾವುದೇ ಪ್ರಕರಣ ದಾಖಲಾದ ನಂತರ ತನಿಖಾಧಿಕಾರಿಗಳು ಸೂಕ್ತ ಕಾಲ ಮಿತಿಯೊಳಗೆ ಪ್ರಕರಣದ ತನಿಖೆ ಪೂರೈಸಿ, ತನಿಖೆಯಲ್ಲಿ ಕಂಡುಬರುವ ಅಂಶಗಳ ಆಧಾರದ ಮೇಲೆ ಘನ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗಿದೆ ಘನ ನ್ಯಾಯಾಲಯದಲ್ಲಿ ರಾಜಿಯಾಗಲು ಅವಕಾಶವಿರುವುದಾಗಿ ತಿಳಿಸಿದರು


ಸೂಕ್ತ ರಕ್ಷಣೆಯ ಭರವಸೆ


4) ಕೌಟುಂಬಿಕ ದೌರ್ಜನ್ಯ ಪ್ರಕರಣಕ್ಕೆ ಸಂಭಂದಿಸಿದಂತೆ ಮಹಿಳೆಯ ಮೇಲೆ ಆಕೆಯ ಪತಿ ಪದೇ ಪದೆ  ಹಲ್ಲೆ ಮಾಡುತ್ತಿದ್ದ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿಗಳಿಗೆ ಪ್ರಕರಣದ ತನಿಖೆಯನ್ನು ಸೂಕ್ತ ಕಾಲ ಮಿತಿಯಲ್ಲಿ ಪೂರೈಸಿ ಘನ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಮತ್ತು  ನೊಂದ ಮಹಿಳೆಗೆ ಆಕೆಯ ಪತಿ ಪುನಾಃ ಹಲ್ಲೆ ಮಾಡಿ ತೊಂದರೆ ನೀಡಿದ್ದಲ್ಲಿ ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.‌ 


ಹಲ್ಲೆ ಪ್ರಕರಣ-ಸೂಕ್ತ ರಕ್ಷಣೆ


5) ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿ ಆರೋಪಿ ಬಂಧನವೂ ಆಗಿರುತ್ತದೆ.‌ ಈ ಪ್ರಕರಕ್ಕೆ ಸಂಬಂಧಿಸಿದಂತೆ  ಅವರಿಂದ ದೂರುದಾರರಿಗೆ ಯಾವುದೇ ರೀತಿಯ ತೊಂದರೆಯಾದಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ, ಕಾನೂನಿನ ಅಡಿಯಲ್ಲಿ  ಸೂಕ್ತ ರಕ್ಷಣೆ ನೀಡಲಾಗುತ್ತದೆ ಎಂಬ ಭರವಸೆ ನೀಡಲಾಯಿತು. 


ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಸಲಹೆ


6) ಅಪರಾಧಗಳನ್ನು ತಡೆಗಟ್ಟಲು ಮತ್ತು ಅಪರಾಧ ಜರುಗಿದಾಗ ಶೀಘ್ರವಾಗಿ ಪತ್ತೆ ಮಾಡುವ ಸಂಬಂಧ ಮತ್ತು ನಿಮ್ಮ ಸುರಕ್ಷತೆಯ ದೃಷ್ಠಿಯಿಂದ Public Safety Act ನ ಅಡಿಯಲ್ಲಿ ನಿಮ್ಮ ಮನೆ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಲಾಯಿತು.


ತನಿಖಾಧಿಕಾರಿಗಳೊಂದಿಗೆ ಸಹಕರಿಸಿ


7) ಸಾರ್ವಜನಿಕರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ ನಂತರ ನೀವು ನೀಡಿದ ಪ್ರಕರಣದಲ್ಲಿ ಅಂತಿಮ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸುವ ವರೆಗೆ, ಠಾಣೆಗೆ ಬಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಜರ್, ಸಾಕ್ಷಿ ಹೇಳಿಕೆಗಳು, ದಾಖಲಾತಿಗಳು, ತನಿಖಾ ಹಂತ ಹಾಗೂ ಪ್ರಕರಣದ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ತನಿಖಾಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಳ್ಳುವುದು ಮತ್ತು ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ಸ್ಪಂದನೆಯ ಬಗ್ಗೆ ಯಾವುದೇ ಕುಂದುಕೊರತೆಗಳಿದ್ದಲ್ಲಿ ಇಲಾಖಾ ಮೇಲಾಧಿಕಾರಿಗಳ ಗಮಕ್ಕೆ ತರಲು ಸೂಚಿಸಲಾಯಿತು.


ಆಸಕ್ತಿ ಕಳೆದುಕೊಳ್ಳದಿರಿ


8) ದೂರುದಾರರಿಗೆ ದೂರು ನೀಡುವ ಸಮಯದಲ್ಲಿ ಇರುವ ಆಸಕ್ತಿಯು ನಂತರ ಕಡಿಮೆಯಾಗುತ್ತಾ ಹೋಗುತ್ತದೆ, ಈ ರೀತಿಯ ದೋರಣೆಯಿಂದಾಗಿ ಘನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸೂಕ್ತ  ರೀತಿಯಲ್ಲಿ ಸಾಕ್ಷಿ ಹೇಳಿಕೆ ನೀಡದೇ ಪ್ರಕರಣಗಳು ಖುಲಾಸೆಯಾಗುತ್ತಿವೆ. ಆದ್ದರಿಂದ ಸಾರ್ವಜನಿಕರು ದೂರು ನೀಡಿದ ನಂತರವೂ ಸಹಾ ವಿಚಾರಣೆಯ ವೇಳೆ ಘನ ನ್ಯಾಯಾಲಯಕ್ಕೆ ಹಾಜರಾಗಿ ದೂರು ನೀಡಿದ ಸಂದರ್ಭದಲ್ಲಿ ಹೇಳಿದ ಸಾಕ್ಷಿ ಹೇಳಿಕೆಯನ್ನು ಅದೇ ರೀತಿ ನೀಡುವುದರಿಂದ ತಪ್ಪಿಸ್ಥರಿಗೆ ಶಿಕ್ಷೆ ಕೊಡಿಸಲು ಸಾಧ್ಯವಿರುತ್ತದೆ ಎಂಬ ಮಾಹಿತಿ ಹಂಚಿಕೊಳ್ಳಲಾಯಿತು. 


ಆರೋಪಿತರಿಂದ ತೊಂದರೆ ಉಂಟಾದರೆ ಗಮನಕ್ಕೆ ತನ್ನಿ


9) ಘನ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಲು ಆರೋಪಿತರು ದೂರುದಾರರಿಗೆ / ಸಾಕ್ಷಿಗಳಿಗೆ ಯಾವುದೇ ಒತ್ತಡ / ಯಾವುದೇ ರೀತಿಯ ತೊಂದರೆ ನೀಡುವುದು ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಆಗ ಅಂತಹವರ  ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಂಡು ನಿಮಗೆ ರಕ್ಷಣೆ ನೀಡಲಾಗುತ್ತದೆ ಎಂದು ಹೇಳಿದರು.



ಈ ಸಂದರ್ಭದಲ್ಲಿ  ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ,  ಸುರೇಶ್ ಎಂ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ, ಶ್ರೀಮತಿ ಚಂದ್ರಕಲಾ, ಪಿಐ ವಿನೋಬನಗರ ಪೊಲೀಸ್ ಠಾಣೆ,  ಸಿದೇಗೌಡ, ಪಿಐ ಜಯನಗರ ಪೊಲೀಸ್ ಠಾಣೆ, ರವಿ ಪಾಟೀಲ್, ಪಿಐ ದೊಡ್ಡಪೇಟೆ ಪೊಲೀಸ್  ಠಾಣೆ,  ಭರತ್ ಕುಮಾರ್ ಪಿಐ ಶಿವಮೊಗ್ಗ ಮಹಿಳಾ ಪೊಲೀಸ್  ಠಾಣೆ, ಪೊಲೀಸ್ ಉಪ ನಿರೀಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.


ಇದನ್ನೂ ಓದಿ-https://www.suddilive.in/2024/07/blog-post_970.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ