ಶುಕ್ರವಾರ, ಜುಲೈ 19, 2024

ಪೌರಕಾರ್ಮಿನನ್ನ ಮ್ಯಾನ್ ಹೋಲ್ ನಲ್ಲಿ ಇಳಿಸಿ ಕಾಮಗಾರಿ-ದೂರು ದಾಖಲಿಸುವಂತೆ ಆಗ್ರಹ

ಸುದ್ದಿಲೈವ್/ಭದ್ರಾವತಿ

ಇಲ್ಲಿನ ವಿಐಎಸ್‍ಎಲ್ ಟೌನ್ ಶಿಪ್‍ನ ಯು.ಜಿ.ಡಿ. ಮ್ಯಾನ್‍ಹೋಲ್‍ನಲ್ಲಿ ಪೌರಕಾರ್ಮಿಕನನ್ನು ಇಳಿಸಿ ಪೌರಕಾರ್ಮಿಕರನ್ನು ಅಪಮಾನಗೊಳಿಸಿರುವ ಕಾಖಾನೆಯ ವಿಐಎಸ್‍ಎಲ್ ಟೌನ್‍ಶಿಪ್‍ನ ಡಿಜಿಎಂ ಮೋಹನ್ ಶೆಟ್ಟಿ ಹಾಗೂ ಸೂಪರ್ ವೈಸರ್ ಓಂಕಾರಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಭದ್ರಾವತಿ ಹಾಗೂ ಶಿವಮೊಗ್ಗದ ಪೌರ ಕಾರ್ಮಿಕರು ಆಗ್ರಹಿಸಿದ್ದಾರೆ.


ಭದ್ರಾವತಿ ವಾರ್ಡ್ ನಂ. 26ರ ವಿಐಎಸ್‍ಎಲ್ ಟೌನ್‍ಶಿಪ್‍ನಲ್ಲಿ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಬ್ರಮಣಿ ಬಿನ್ ಜಯರಾಮ್, ಕುಮಾರ ಜಿ. ಬಿನ್ ಗೋವಿಂದ, ಆರ್. ಮಹದೇವ ಬಿನ್ ರಾಮಯ್ಯ ಇವರುಗಳು ಮ್ಯಾನ್ ಹೋಲ್‍ನಲ್ಲಿ ಇಳಿದು ಸ್ವಚ್ಛಗೊಳಿಸುವಂತೆ ಡಿಜಿಎಂ ಮೋಹನ್ ಶೆಟ್ಟಿ ಹಾಗೂ ಸೂಪರ್‍ವೈಸರ್ ಓಂಕಾರಪ್ಪ ತಿಳಿಸಿದ್ದರಿಂದ ಈ ಅಮಾನವೀಯ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಮ್ಯಾನ್ ಹೋಲ್ ನಲ್ಲಿ ಯಾವುದೇ ಮಾನವ ಶಕ್ತಿಯನ್ನು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಬಳಸಿಕೊಳ್ಳುವಂತಿಲ್ಲ ಎಂಬ ಆದೇಶವಿದ್ದರೂ ಅದನ್ನು ಧಿಕ್ಕರಿಸಿ ಈ ಇಬ್ಬರು ಅಧಿಕಾರಿಗಳು ದರ್ಪ ಮೆರೆದಿದ್ದಾರೆ. ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದೇ ಪೌರಕಾರ್ಮಿಕರನ್ನು ಯುಜಿಡಿ ಮ್ಯಾನ್ ಹೋಲ್ ನಲ್ಲಿ ಇಳಿಸುವ ಮೂಲಕ ಇಡೀ ಪೌರಕಾರ್ಮಿಕ ಸಮುದಾಯಕ್ಕೇ ಅಪಮಾನವೆಸಗಿದ್ದಾರೆ.

ಕೂಡಲೇ ಪೌರಕಾರ್ಮಿಕ ವಿರೋಧಿಗಳಾದ ಈ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸಿ, ಬಂಧಿಸಬೇಕು. ಅಪಮಾನಕ್ಕೊಳಗಾದ ಪೌರಕಾರ್ಮಿಕರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಭದ್ರಾವತಿ ಪೌರಾಯುಕ್ತರಿಂದ ನ್ಯೂಟೌನ್ ಪೊಲೀಣ್ ಠಾಣೆಗೆ ದೂರು ದಾಖಲಿಸುವಂತೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ-https://www.suddilive.in/2024/07/blog-post_671.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ