ಸುದ್ದಿಲೈವ್/ಶಿವಮೊಗ್ಗ
ಸಹ್ಯಾದ್ರಿ ರಂಗ ತರಂಗ (ರಿ) ಶಿವಮೊಗ್ಗ ಹಾಗೂ ದಕ್ಷಿಣ ಭಾರತ ಸಾಂಸ್ಕೃತಿಕ ಸಂಘ ಶಿವಮೊಗ್ಗದವತಿಯಿಂದ ಆ.18 ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ʼಸೇಮ್ ಸೇಮ್ ಬಟ್ ಡಿಫರೆಂಟ್ʼ (Same Same But Different) ಎಂಬ ನಾಟಕ ಸಂಜೆ 6.30ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಂಘಟನೆಯ ನಾಗಭೂಷಣ್, ಶಿವಮೊಗ್ಗದ ಸಹ್ಯಾದ್ರಿ ರಂಗ ತರಂಗ (ರಿ) ಹಾಗೂ ದಕ್ಷಿಣ ಭಾರತ ಸಾಂಸ್ಕೃತಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಮುಂಬೈನ ಪ್ರಖ್ಯಾತ ರಂಗ ತಂಡ-ತಮಾಷಾ ಥಿಯೇಟರ್ಸ್ ತಂಡದ ಕಲಾವಿದರು ಈ ನಾಟಕ ಪ್ರದರ್ಶನ ನೀಡಲಿದ್ದಾರೆ.
ಒಂದು ವಿಭಿನ್ನ ಅಪರೂಪದ ಸಂಗೀತ ನಾಟಕ ಸೇಮ್ ʼಸೇಮ್ ಬಟ್ ಡಿಫರೆಂಟ್ʼ (Same Same But Different) ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರದರ್ಶನಕಂಡು ಖ್ಯಾತಿಗಳಿಸಿದೆ. ಇದೊಂದು ಅಪರೂಪದ ಸಂಗೀತ ಪಯಣವಾಗಿದ್ದು, ಶ್ರೀಮತಿ ಸಪನ್ ಸರನ್ ಅವರು ಈ ನಾಟಕ ನಿರ್ದೇಶನ ಮಾಡಿದ್ದಾರೆ.
ಅಂತರಾಷ್ಟ್ರೀಯ ಗುಣಮಟ್ಟದ ನಾಟಕ ನೋಡಲು ಶಿವಮೊಗ್ಗದ ಪ್ರೇಕ್ಷಕರು ತೀವ್ರ ಆಸಕ್ತಿ ತೋರುತ್ತಿದ್ದಾರೆ. ಮುಂಬೈ, ಡೆಲ್ಲಿ, ಪೂನಾ, ಕೊಲ್ಕತ್ತಾ, ಬೆಂಗಳೂರಿನಂತ ಮಹಾನಗರಗಳಲ್ಲಿ ಮಾತ್ರ ಪ್ರದರ್ಶನಗೊಳ್ಳುತ್ತಿದ್ದ ಇಂಥ ನಾಟಕಗಳನ್ನು ಶಿವಮೊಗ್ಗ ಜನತೆಗೂ ಸಿಗುವಂತೆ ಮಾಡಲು ಸಹ್ಯಾದ್ರಿ ರಂಗತರಂಗ ಸಂಸ್ಥೆ ವಿಶೇಷ ಶ್ರಮವಹಿಸಿದೆ ಎಂದರು.
ಸೇಮ್ ಸೇಮ್ ಬಟ್ ಡಿಫರೆಂಟ್(Same Same But Different):ಎರೆಡು ವಿಭಿನ್ನ ಹಿನ್ನೆಲೆಯಿಂದ ಬಂದ ಇಬ್ಬರು ಪ್ರತಿಭಾವಂತ ಗಾಯಕರು ಅನೇಕ ಸಾಮಾಜಿಕ ಹಾಗು ಕಲಾತ್ಮಕ ಸವಾಲುಗಳನ್ನು ಎದುರಿಸುತ್ತಾ ಮುಖಾಮುಖಿಯಾಗುವ ಒಂದು ಕುತೂಹಲದ ಸನ್ನಿವೇಷವನ್ನು ನಾಟಕ ಯಶಸ್ವಿಯಾಗಿ ಹಿಡಿದಿಡುತ್ತದೆ.
ತಮ್ಮೆಲ್ಲಾ ಅನುಭವಗಳನ್ನು ಪ್ರಾಮಾಣಿಕವಾಗಿ, ತಮಾಷೆಯಾಗಿ ಹಾಗೂ ಭಾವನಾತ್ಮಕವಾಗಿ ಇಬ್ಬರು ಕಟ್ಟಿಕೊಡುತ್ತಾರೆ. ದೇಶದ ಶಾಸ್ತ್ರೀಯ, ಜಾನಪದ, ಸಿನಿಮಾ ಸಂಗೀತದ ಮೂಲಕ ಸಾಗುವ ಈ ನಾಟಕಕ್ಕೆ ಅಷ್ಡೇ ಪರಿಣಾಮಕಾರಿಯಾಗಿ ಸಂಗೀತವನ್ನು ರೋಹಿತ್‌ದಾಸ್, ತುಶಾರ್ ಕದಮ್ ಮತ್ತು ಸದಾನಂದ ಮಲಿಕ್ ಒದಗಿಸಿದ್ದಾರೆ. ಮಹಾರಾಷ್ಟ್ರದ ಪ್ರಖ್ಯಾತ ರಂಗನಟರಾದ ಜಾಹ್ನವಿ ಶ್ರೀಮಾಣ್ಕರ್ ಹಾಗು ಕೈಲಾಶ್ ವಾಘ್ಮೋರೆ ಇಡೀ ನಾಟಕವನ್ನು ಪ್ರೇಕ್ಷಕನಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ತಮಾಷಾ ಥಿಯೇಟರ್ಸ್:
2012 ರಲ್ಲಿ ಸುನಿಲ್ ಶಾನಭಾಗ್ ಹಾಗು ಸಪನ್ ಸರನ್ ಅವರಿಂದ ಆರಂಭವಾದ ಈ ರಂಗ ತಂಡ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಅಪರೂಪದ ಹಾಗೂ ವಿಭಿನ್ನ ರಂಗಪ್ರಸ್ತುತಿಗಳಿಗೆ ಖ್ಯಾತಿಗಳಿಸಿದೆ. ಸಮಾಜದ ಎಲ್ಲಾ ರಂಗಗಳಲ್ಲೂ ಬದಲಾಗುತ್ತಿರುವ ಸನ್ನಿವೇಷಗಳನ್ನು ನಾಟಕಗಳ ಮೂಲಕ ವಿಶ್ಲೇಷಣೆಗೆ ಒತ್ತುಕೊಡುತ್ತಿದೆ. ಕಲಾಮಾಧ್ಯಮಕ್ಕೆ ಇರುವ ಅಗಾಧವಾದ ಸಾಧ್ಯತೆಗಳ ಅನ್ವೇಷಣೆ ತಂಡದ ಮುಖ್ಯ ಧ್ಯೇಯ. ಹೊಸಪಠ್ಯ, ಹೊಸವಿಚಾರ ಹಾಗೂ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವುದು ತಂಡದ ಉದ್ದೇಶವಾಗಿದೆ ಎಂದರು.
ಸಪನ್ ಸರನ್:
ಮುಂಬೈ ಮೂಲದ ಶ್ರೀಮತಿ ಸಪನ್ ಸರನ್ ಅವರು ಕವಿಗಳು ಹಾಗೂ ಬರಹಗಾರರು. ತಮಾಷಾ ಥಿಯೇಟರ್ಸ್ ಆರಂಭಿಸುವಲ್ಲಿ ಇವರ ಪಾತ್ರ ದೊಡ್ಡದು. ರಂಗ ಸಾಧ್ಯತೆಗಳ ಬಗ್ಗೆ ಸತತವಾಗಿ ಅನ್ವೇಷಣೆ ಮಾಡುತ್ತಿರುವ ಸಪನ್, ಪ್ರದರ್ಶನ ಕಲೆಯ ವಿವಿಧ ಆಯಾಮಗಳನ್ನು ಪ್ರದರ್ಶಿಸಲು `ಸ್ಟುಡಿಯೊ ತಮಾಷಾ’ ಎಂಬ ಸಂಸ್ಥೆ ಆರಂಭಿಸಿದ್ದಾರೆ.
ಖ್ಯಾತ ನೃತ್ಯಪಟು ಅಸ್ತಾದ್‌ದೇಬು ಮೂಲಕ ರಂಗಭೂಮಿ ಪ್ರವೇಶಿಸಿದ ಸಪನ್ ʼಕ್ಲಬ್ ಡಿಸೈರ್ʼ ಎಂಬ ರಂಗ ಕೃತಿಯನ್ನು ರಚಿಸಿದ್ದಾರೆ. ಸುನೀಲ್ ಶಾನಭಾಗ್ ನಿರ್ದೇಶನದ ಈ ನಾಟಕ 2015ರ ಭಾರಂಗಮ್ ಅಂತರಾಷ್ಟ್ರೀಯ ರಂಗೋತ್ಸವಕ್ಕೆ ಆಯ್ಕೆಯಾಗಿತ್ತು. ಅಲ್ಲದೆ, ಇಂಗ್ಲೆಂಡ್ ಸರ್ಕಾರದ ಆಹ್ವಾನದ ಮೇರೆಗೆ ದಕ್ಶಿಣ ಏಷ್ಯಾ ಮಹಿಳೆಯರ ಕುರಿತ ಅಧ್ಯಯನಕ್ಕೆ ಆಯ್ಕೆಯಾದವರು. ತೆಂಡುಲ್ಕರ್-ದುಬೆ ಫೆಲೋಶಿಪ್ ಪಡೆದ ಇವರು ಮಹಿಳಾ ದೌರ್ಜನ್ಯದ ವಿರುದ್ದ ಬೀದಿಗಿಳಿದು ಹೋರಾಟ ಮಾಡಿದವರು. ಇವರ ಕವನಗಳು ಹಲವು ಪತ್ರಿಕೆಗಳಲ್ಲಿ ಹಾಗು ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳಲ್ಲಿ ಪ್ರಕಟವಾಗಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇದ್ದವರು: ಚಂದ್ರಪ್ಪ, ಕಾಂತೇಶ್ ಕದರಮಂಡಲಗಿ, ಡಾ. ನಾಗಭೂಷಣ, ಬಿ.ವಿ.ತಿಪ್ಪಣ್ಣ, ಹೆಚ್.ಎಸ್. ಸುರೇಶ್, ಶ್ರೀಕಂಠ ಪ್ರಸಾದ್, ರವಿಶಂಕರ್, ವಿಶ್ವೇಶ್ವರಯ್ಯ, ಹಾಲಸ್ವಾಮಿ ಆರ್.ಎಸ್. ಉಪಸ್ಥಿತರಿದ್ದರು.
ಇದನ್ನೂ ಓದಿ-https://www.suddilive.in/2024/08/blog-post_83.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ