ಸುದ್ದಿಲೈವ್/ಶಿವಮೊಗ್ಗ
ನಮ್ಮಲ್ಲಿರುವ ಸಾಮಾಜಿಕ ಕಳಕಳಿ ನಾವು ಓದಿದ ವಿದ್ಯಾಸಂಸ್ಥೆಗೆ ಸದಾ ಅರ್ಪಿತವಾಗಿರಲಿ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಹೇಳಿದರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿಗಳ ನೂತನ ಕಟ್ಟಡದ ಶಿಲನ್ಯಾಸ ಕಾರ್ಯಕ್ರಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಹಿರಿಯ ವಿದ್ಯಾರ್ಥಿಗಳ ಕಾರ್ಯ ಪ್ರಸ್ತುತ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿರಲಿ. ಕಾಲೇಜಿನಲ್ಲಿ ಓದಿದ್ದ ಅನೇಕ ವಿದ್ಯಾರ್ಥಿಗಳು ಆಂಧ್ರ, ಕರ್ನಾಟಕದ ರಾಜಕಾರಣಿದಲ್ಲಿ, ವಿವಿಧ ಇಲಾಖೆಗಳ ಅಧಿಕಾರಿಗಳಾಗಿ, ವಿಭಿನ್ನ ಕ್ಷೇತ್ರಗಳ ಸಾಧಕರಾಗಿ ಹೊರಹೊಮ್ಮಿದ್ದಾರೆ. ಇಂದಿಗೂ ಲಾಭ ನಷ್ಟದ ಲೆಕ್ಕಾಚಾರವಿಲ್ಲದೆ ಎನ್ಇಎಸ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಹೊರನಾಡು ಕ್ಷೇತ್ರದ ಧರ್ಮದರ್ಶಿ ಕುಟುಂಬದ ಸದಸ್ಯರು ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ರಾಜಗೋಪಾಲ್ ಜೋಷಿ ಮಾತನಾಡಿ, ವಿದ್ಯಾಸಂಸ್ಥೆ ನಮಗೆ ಜ್ಞಾನದ ಮೂಲಕ ವ್ಯಕ್ತಿತ್ವ ನೀಡಿದೆ. ಅಂತಹ ಸಂಸ್ಥೆಗೆ ಋಣ ತೀರಿಸುವ ಎಂತಹ ಅವಕಾಶ ಸಿಕ್ಕರು ಉಪಯೋಗಿಸಿಕೊಳ್ಳಬೇಕು. ನಮ್ಮ ಹೆಮ್ಮೆಯ ಹಿರಿಯ ವಿದ್ಯಾರ್ಥಿಗಳ ಕಟ್ಟಡವನ್ನು ಗುರು ದಕ್ಷಿಣೆಯ ರೂಪದಲ್ಲಿ ದೊಡ್ಡ ಹೆಮ್ಮರವಾಗಿ ತಲೆಯೆತ್ತಿ ನಿಲ್ಲುವಂತೆ ಮಾಡೋಣ ಎಂದು ಹೇಳಿದರು.
800 ಆಸನಗಳ ಸಭಾಂಗಣ ನಿರ್ಮಾಣ
ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾತನಾಡಿ, ಯೋಜಿತ ಕಟ್ಟಡದಲ್ಲಿ 800 ಆಸನಗಳ ಸುಸಜ್ಜಿತ ಸಭಾಂಗಣ ನಿರ್ಮಾಣವಾಗಲಿದ್ದು, ಅತಿಥಿ ಗೃಹ, ಪಾರ್ಕಿಂಗ್ ಸೌಲಭ್ಯಗಳೊಂದಿಗೆ ಮಲೆನಾಡಿನ ಭಾಗದಲ್ಲಿಯೇ ವಿಶೇಷ ವಿನ್ಯಾಸದ ಕಟ್ಟಡ ನಿರ್ಮಾಣ ಮಾಡುವ ಇಂಗಿತ ನಮ್ಮದಾಗಿದೆ ಎಂದು ವಿವರಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್, ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿದರು. ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶ್ರೇಷ್ಟಿ, ಹೆಚ್.ಸಿ.ಶಿವಕುಮಾರ್, ಹಿರಿಯ ಆಜೀವ ಸದಸ್ಯರಾದ ಎ.ಎಸ್.ವಿಶ್ವನಾಥ, ರುಕ್ಮಿಣಿ ವೇದವ್ಯಾಸ, ರವೀಂದ್ರ, ವಿಖ್ಯಾತ, ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಡಾ.ಕೆ.ಎಂ.ಬಸಪ್ಪಾಜಿ, ಸರ್ಜಾ ಸತ್ಯೋದಯ, ಜಿ.ಸುರೇಶ್, ಶಾಂತಿಕಿರಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ