ಸುದ್ದಿಲೈವ್/ಶಿವಮೊಗ್ಗ
ಯಾವುದೆ ಕ್ಷೇತ್ರದಲ್ಲಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ನಿವೃತ್ತ ಎನ್ನುವ ಪದ ಸರಿ ಹೊಂದುವುದಿಲ್ಲ ಎಂದು ಸಂಸದ ರಾಘವೇಂದ್ರ ಅಭಿಪ್ರಾಯ ಪಟ್ಟರು.
ಅವರು ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿವೃತ್ತ ಶಿಕ್ಷಕರ ಸಂಘಗಳ ಒಕ್ಕೂಟದ ವತಿಯಿಂದ ಹಿರಿಯ ಅಜೀವ ಸದಸ್ಯರಿಗೆ ಸನ್ಮಾನ ಮತ್ತು 3 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗಿಯಾಗಿ ಮಾತನಾಡಿದರು.
ನಿಮ್ಮಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ನಿಮ್ಮ ಬಗ್ಗೆ ಅಭಿಮಾನ ಹೊಂದಿರುತ್ತಾರೆ. ಸಮಾಜವೂ ನಿಮ್ಮ ಬಗ್ಗೆ ಗೌರವ ಹೊಂದಿರುತ್ತದೆ. ನಿಮ್ಮ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಿವೃತ್ತಿ ಜೀವನ ಸುಖಮಯವಾಗಿ ಸಾಗಲಿ ಎಂದು ಆಶಿಸಿದರು.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮ ಹಾಕಲಿದ್ದೇವೆ. ಐದು ವರ್ಷಗಳಲ್ಲಿ ದೇಶದ ಎಲ್ಲೆಡೆ ಜಿಲ್ಲೆಯಿಂದ ರೈಲು ಸೇವೆ ಪ್ರಾರಂಭವಾಗಲಿದೆ. ಮಧ್ಯ ಕರ್ನಾಟಕ ಆರ್ಥಿಕ ಕೇಂದ್ರವಾಗಿ ಶಿವಮೊಗ್ಗ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು. ಈ ವೇಳೆ ಶಾಸಕ ಡಾ.ಧನಂಜಯ ಸರ್ಜಿ ಮೊದಲಾದವರು ಉಪಸ್ಥಿತಿದ್ದರು. ಹಿರಿಯ ಶಿಕ್ಷಕರಿಗೆ ಸನ್ಮಾನಿಸಲಾಯಿತು.