ಸೋಮವಾರ, ಸೆಪ್ಟೆಂಬರ್ 2, 2024

ಮಾನವೀಯತೆ ಮರೆತ ಅಧಿಕಾರಿಗಳ ವಿರುದ್ಧ ಕ್ರಮ: ಮಧು ಬಂಗಾರಪ್ಪ



ಸುದ್ದಿಲೈವ್/ಶಿವಮೊಗ್ಗ


ರೈತ ವಿರೋಧಿಯಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಅನಿವಾರ್ಯ. ಆದ್ದರಿಂದ, ಮಾನವೀಯ ನೆಲೆಯಲ್ಲಿ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕೆಲಸ ಮಾಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಸ್.ಮಧುಬಂಗಾರಪ್ಪ ಎಚ್ಚರಿಸಿದರು.


ಸೊರಬ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಬಗರ್‌ ಹುಕುಂ ಅಕ್ರಮ -ಸಕ್ರಮ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಅರಣ್ಯ ರಕ್ಷಕರು ಹಾಗೂ ವನ ಪಾಲಕರ ಅಮಾನವೀಯ ವರ್ತನೆ ಅಕ್ಷ್ಯಮ್ಯ ಅಪರಾದ. ಅನೇಕ ವರ್ಷದಿಂದ ಕಾನು, ಸೊಪ್ಪಿನ ಬೆಟ್ಟ, ಹುಲ್ಲುಜಾಡು, ಈ ಪ್ರದೇಶಗಳಲ್ಲಿ ಕೃಷಿ ಮಾಡಿಕೊಂಡು ಬಂದಿರುವ ರೈತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುವ ಕಾರ್ಯ ಮಾಡುತ್ತಿದ್ದಾರೆ. ಈ ರೀತಿಯ ವರ್ತನೆ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಅರಣ್ಯ ಭೂಮಿ ವಿಚಾರವಾಗಿ ನ್ಯಾಯಾಲಯ ಹಂತದಲ್ಲಿ ತನಿಖೆ ನಡೆಯುತ್ತಿದೆ. ಆದ್ದರಿಂದ, ಅರಣ್ಯ ಅಧಿಕಾರಿಗಳು ಎಚ್ಚರಿಕೆಯ ಹೆಜ್ಜೆ ಇಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ರೈತರನ್ನು ಏಕಾ ಏಕಿ ಒಕ್ಕಲೆಬ್ಬಿಸುವ ಕ್ರಮದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಅಧಿಕಾರಿಗಳು ತಾಳ್ಮೆಯ ಗುಣ ಬೆಳೆಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.


ಅರಣ್ಯ ಮತ್ತು ಕಂದಾಯ ಭೂಮಿಗೆ ಸಂಬಂಧಪಟ್ಟಂತೆ ಅನೇಕ ವರ್ಷದಿಂದ ಸಮಸ್ಯೆಗಳು ಜೀವಂತವಾಗಿವೆ. ಈ ಎಲ್ಲಾ ತೊಡಕುಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಬಗರ್‌ ಹುಕುಂ ಸಮಿತಿಗೆ ಬಂದ ಸಾಕಷ್ಟು ಅರ್ಜಿಗಳನ್ನು ಈ ಹಿಂದೆ ತಿರಸ್ಕರಿಸಲಾಗಿದೆ. ಇದರಿಂದ, ಪಾರಂಪರಿಕವಾಗಿ ಸಾಗುವಳಿ ಮಾಡಿಕೊಂಡು ಬಂದ ಕುಟುಂಬಗಳಿಗೆ ತೊಂದರೆ ಆಗಲಿದೆ. ರೈತರಿಂದ ಪುನಃ ದೂರುಗಳನ್ನು ಪಡೆದು ಕಾನೂನು ಪ್ರಕಾರ ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.


ಉಪ ವಿಭಾಗಾಧಿಕಾರಿ ಯತೀಶ್, ತಾಲ್ಲೂಕು ಇ.ಒ ಪ್ರದೀಪ್ ಕುಮಾರ್, ತಹಶೀಲ್ದಾರ್  ಮಂಜುಳಾ, ಡಿಎಫ್ಒ ಮೋಹನ್ ಕುಮಾರ್ ಡಿ, ಆಎಫ್ಒ ಶಬುಬ್ತಾ ಶೇಖ್,ಪರುಶುರಾಮ, ಜಾವೀದ್ ಅಹ್ಮದ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ ಶೇಖರ್ ಸೇರಿದಂತೆ ಬಗರ್ ಹುಕುಂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ