ಬಿಜೆಪಿ ಮತ್ತು ಜೆಡಿಎಸ್ ನಾಯಕರ ಕುತಂತ್ರದಿಂದ ಸಿದ್ದರಾಮಯ್ಯರ ತೇಜೋವಧೆ ನಡೆಯುತ್ತಿದೆ. ಇದನ್ನು ಖಂಡಿಸಿ ಇಂದು ಅಹಿಂದ ಯುವ ಘಟಕದ ವತಿಯಿಂದ ಕರೆದಿರುವ ಶಿಕಾರಿಪುರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಶಿಕಾರಿಪುರ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಶಾಲಾ ಕಾಲೇಜುಗಳು ಮಾತ್ರ ನಡೆಯುತ್ತಿದ್ದು, ಬಸ್ ಸಂಚಾರ ಮತ್ತು ಇತರೆ ಎಲ್ಲಾ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದೆ.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜಕಾರಣದಲ್ಲಿ ಬಿಳಿ ಹಾಳೆಯಂತಿರುವ ಸಿದ್ದರಾಮಯ್ಯನವರಿಗೆ ಕಳಂಕ ಅಂಟಿಸಲು ಕುತಂತ್ರ ನಡೆಸಿದ್ದಾರೆ. ಈ ಉದ್ದೇಶಕ್ಕಾಗಿ ಮುಡಾ ಹಗರಣ ಬಳಸಿಕೊಂಡು ಸಿದ್ದರಾಮಯ್ಯನವರ ತೇಜೋವಧೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಕನಕ ಪಾರ್ಕ್ ನಿಂದ ಪ್ರತಿಭಟನಾ ಮೆರವಣಿಗೆ ನಡೆದಿದ್ದು ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮಾಲಾರ್ಪಣೆ ಮಾಡಲಾಗಿದೆ. ನಂತರ ಖಾಸಗಿ ಬಸ್ ನಿಲ್ದಾಣದಲ್ಲಿ ಬೃಹತ್ ಮೆರವಣಿಗೆ ನಡೆದಿದೆ.
ಪ್ರತಿಭಟನೆಯಲ್ಲಿ ಅಹಿಂದ ಯುವ ಘಟಕದ ಅಧ್ಯಕ್ಷ ನಗರದ ಮಾಲ್ತೇಶ್, ಪುರಸಭೆ ಸದಸ್ಯ ಉಳ್ಳಿ ದರ್ಶನ್, ಭಂಡಾರಿ ಮಾಲತೇಶ್, ತಾಲ್ಲೂಕು ಅಹಿಂದ ಸಂಘಟನೆ ಅಧ್ಯಕ್ಷ ಕಾಗಿನಲ್ಲಿ ರಂಗಪ್ಪ, ಕಸಬಾ ಸೊಸೈಟಿ ನಿರ್ದೇಶಕ ನಗರದ ರವಿ ಕಿರಣ್, ಡಿ.ಆರ್.ಗಿರೀಶ್, ಅಹಿಂದ ಮುಖಂಡರಾದ ನಗರದ ರವೀಂದ್ರ ಕಿಟ್ಟಿ, ಬನ್ನೂರು ಸುನಿಲ್ ಇದ್ದರು.