ಸುದ್ದಿಲೈವ್/ಶಿವಮೊಗ್ಗ
ನಗರದ ಹೊನ್ನಾಳಿ ರಸ್ತೆಯ ರೈಲ್ವೆ ಓವರ್ ಬ್ರಿಡ್ಜ್ ನ ಮೇಲೆ ಇಂದು ಬೆಳಿಗ್ಗೆ ವಾಹನ ಸಂಚಾರ ನಡೆಸದಂತೆ ಸ್ಥಳೀಯರೇ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ರಸ್ತೆಗೆ ಕಲ್ಲು ಇಟ್ಟಿಗೆ ಹಾಕಿ ವಾಹನಗಳ ಸಂಚಾರಕ್ಕೆ ಅಡ್ಡಿಉಂಟು ಮಾಡುವ ಪ್ರಯತ್ನ ನಡೆಸಿದ್ದು, ಓವರ್ ಬ್ರಿಡ್ಜ್ ಮೇಲೆ ಟ್ರಾಫಿಕ್ ಜ್ಯಾಮ್ ಆಗಿದೆ.
ಮಳೆ ಬಂದು ನಿಂತ ಪರಿಣಾಮ ಹೊನ್ನಾಳಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ಟಾರ್ ರಸ್ತೆ ಕಿತ್ತು ಹೋಗಿದ್ದು ಹೊಂಡಗಳಾಗಿವೆ. ಹೊಂಡಗಳನ್ನ ಮುಚ್ಚಲು ಪಿಡಬ್ಲೂಡಿ ಮುಂದಾಗಿದೆ. ಪಿಡಬ್ಲೂಡಿ ಅವರ ಕಾಮಗಾರಿಯಿಂದ ಧೂಳು ಹೆಚ್ಚಾಗಿದೆ. ಹಾಕಿದ ಕಲ್ಲುಗಳು ಮನೆಗಳಿಗೆ ಮತ್ತು ವಾಹನಗಳಿಗೆ ಹಾನಿ ಉಂಟು ಮಾಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಧೂಳಿನಿಂದ ಇಲ್ಲಿನ ನಿವಾಸಿಗಳು ರೊಚ್ಚಿಗೆದ್ದಿದ್ದಾರೆ. ಇದರ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ನಿವಾಸಿಗಳು ರಸ್ತೆಗಿಳಿದು ಪ್ರತಿಭಟಿಸಿದ್ದಾರೆ. ಇಂದು ಬೆಳಿಗ್ಗೆ ಸುಮಾರು 8-30 ರಿಂದ 9 ಗಂಟೆಯ ನಡುವೆ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಧಾವಿಸದೆ ಇರುವುದು ಸ್ಥಳೀಯರನ್ನ ಮತ್ತಷ್ಟು ರೊಚ್ಚಿಗೆಬ್ಬಿಸಿದೆ.
ಧೂಳು ಹೆಚ್ಚಾಗಿರುವುದರಿಂದ ಇದನ್ನ ನಿಲ್ಲಿಸಬೇಕು. ರಸ್ತೆಗೆ ಹಾಗಾಗಿ ಟಾರ್ ಹಾಕಬೇಕು ಎಂದು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ನಂತರ ಪೊಲೀಸರ ಮಧ್ಯಸ್ಥಿಕೆಯಿಂದ ಪ್ರತಿಭಟನೆ ಶಾಂತಗೊಂಡಿದೆ.
ಸೋಮವಾರದ ಒಳಗೆ ಧೂಳು ಕಡಿಮೆಗೊಳಿಸಬೇಕು. ರಸ್ತೆಗೆ ಟಾರ್ ಹಾಕದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ. ಈ ಕುರಿತು ಪಿಡಬ್ಲೂಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿಜಯ ಕುಮಾರ್ ಅವರಿಗೆ ಕರೆ ಮಾಡಿದರ ಕರೆ ಸ್ವೀಕರಿಸುವ ವ್ಯವಧಾನವೂ ಇಲ್ಲವಾಗಿದೆ.
ಇತ್ತ ಗುತ್ತಿಗೆದಾರರ ಮೇಲೆ ಅಧಿಕಾರಿಗಳ ದರ್ಪ ಮುಂದುವರೆದಿರುವ ಆರೋಪವೂ ಕೇಳಿ ಬಂದಿದೆ. ಕರೆ ಸ್ವೀಕರಿಸದೆ ಸ್ಥಳೀಯರ ನೋವಿಗೆ ಸ್ಪಂಧಿಸದೆ ಅಧಿಕಾರ ದುರಾಡಳಿತ ಶಿವಮೊಗ್ಗದಲ್ಲಿ ಮುಂದುವರೆದಿದೆ.