ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಎರಡು ಕಡೆ ಕಳ್ಳತನವಾಗಿದೆ. ಒಂದು ಶಾಲೆಯ ಅಕ್ಷರ ದಾಸೋಹದಲ್ಲಿ ಅಡುಗೆ ಬಾಂಡೆ ಸಾಮಾನುಗಳು ಕಳುವಾದರೆ, ಇನ್ನೊಂದು ಮನೆಯಲ್ಲಿರುವ ಅಡುಗೆ ಸಾಮಾನುಗಳನ್ನ ಕಳುವು ಮಾಡಲಾಗಿದೆ.
ನಗರದ ಕರ್ನಾಟಕ ಸಂಘದ ಜಿ ಎಂ ಹೆಚ್ ಪಿಎಸ್ ಶಾಲೆಯಲ್ಲಿನ ಅಕ್ಷರ ದಾಸೋಹದ ಅಡುಗೆ ಮನೆಯಲ್ಲಿಟ್ಟಿದ್ದ ಎರಡು ಕುಕ್ಕರ್, ಒಂದು ಮಿಕ್ಸಿ, ಒಂದು ಬಾಂಡ್ಲೆ ಸಾಮಾನು ಕಳುವಾಗಿದೆ. ಅಡುಗೆ ಮನೆಯ ಬಾಗಿಲ ಚಿಲಕ ಒಡೆದು ಕಳ್ಳತನ ಮಾಡಿರುವುದಾಗಿ ಶಾಲೆಯ ಸಹ ಶಿಕ್ಷಕರು ಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅದರಂತೆ ಬಾಪೂಜಿ ನಗರದ 5 ನೇ ತಿರುವಿನ ನಿವಾಸಿಗಳ ಮನೆಯಲ್ಲಿ ಕಳ್ಳತನವಾಗಿದೆ. ಮೊದಲು ಹೋಟೆಲ್ ನಡೆಸುತ್ತಿದ್ದ ಈ ದಂಪತಿಗಳು ಈಗ ಹೋಟೆಲ್ ಬಂದ್ ಮಾಡಿ ಬೇರೆ ಉದ್ಯೋಗವನ್ನ ಕಂಡುಕೊಂಡಿದ್ದರು. ಪತಿ ಚಾಲಕರಾಗಿದ್ದರೆ ಪತ್ನಿ ಮಣಿಪಾಲ್ ನಲ್ಲಿ ವೃದ್ಧರನ್ನ ನೋಡಿಕೊಳ್ಳುವ ಕೆಲಸ ಮಾಡಿಕೊಂಡಿದ್ದರು.
ಬಂದ್ ಮಾಡಿದ ಹೋಟೆಲ್ ನ ಕಬ್ಬಿಣ ಸ್ಟವ್, 8 ಪ್ಲಾಸ್ಟಿಕ್ ಚೇರ್, ಟೇಬಲ್ ಗಳನ್ನ ಕಳ್ಳತನ ಮಾಡಿರುವುದಾಗಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಒಟ್ಟು 50 ಸಾವಿರ ರೂ. ಹಣ ಮೌಲ್ಯದ ವಸ್ತುಗಳು ಮನೆಯಲ್ಲಿ ಇಲ್ಲದ ವೇಳೆ ಕಳ್ಳತನವಾಗಿದೆ. ಸದಾ ಮನೆಗಳಲ್ಲಿ ಚಿನ್ನಾಭರಣಗಳು ಕಳ್ಳತನಗಳು ಆಗುತ್ತಿದ್ದವು.ಈ ಘಟನೆ ಅಪರೂಪವಾಗಿದೆ.
ಅದರಂತೆ ಶಾಲೆಗಳಲ್ಲಿ ಅಕ್ಷರ ದಾಸೋಹದ ಬೇಳೆಕಾಳುಗಳು ಕಳುವು ಪ್ರಕರಣ ದಾಖಲಾಗುತ್ತಿದ್ದವು ಆದರೆ ಈ ಬಾರಿ ಪಾತ್ರೆಗಳೆ ಕಳುವಾಗಿರುವುದು ಅಚ್ಚರಿಪಡಿಸಿದೆ.