ಸುದ್ದಿಲೈವ್/ಶಿವಮೊಗ್ಗ
ಮಲೆನಾಡಿನ ಸಂಪ್ರದಾಯ ದೀಪಾವಳಿ ಅಂಟಿಕೆ ಪಿಂಟಿಗೆ ಸಂಭ್ರಮ ಮುಗಿಲುಮುಟ್ಟಿದೆ. ಧರ್ಮ , ಜಾತಿ ಹಾಗೂ ಕುಲ ಎನ್ನದೇ ಪ್ರತಿಮನೆಗೂ ಅಂಟಿಕೆ ಪಿಂಟಿಕೆ ದೀಪ ತೆಗೆದುಕೊಂಡು ಹೋಗಲಾಯಿತು.
ಮಲೆನಾಡಿನಲ್ಲಿ ದೊಡ್ಡಹಬ್ಬವೆಂದೇ ಕರೆಸಿಕೊಳ್ಳುವ ದೀಪಾವಳಿಯನ್ನು ಅತ್ಯಂತ ಸಡಗರ, ಸಂಬ್ರಮ ಮತ್ತು ಕೆಲವು ವಿಭಿನ್ನ ಆಚರಣೆಗಳು ತೆರಗೊಂಡಿದೆ. ದೀಪಾವಳಿಯ ಆಚರಣೆಗಳ ಪಟ್ಟಿಗೆ ಸೇರುವ ಇನ್ನೊಂದು ಆಚರಣೆ ಅಥವಾ ಜಾನಪದ ಕಲೆಯೇ ಅಂಟಿಕೆ-ಪಂಟಿಕೆಯಾಗಿದೆ.
ಊರಿನವರು ಸೇರಿ ಒಂದು ಗುಂಪು ಕಟ್ಟಿಕೊಂಡು ಜ್ಯೋತಿಯನ್ನು ಹಚ್ಚಿಸಿ ಅದನ್ನು ತೆಗೆದುಕೊಂಡು ಜಾನಪದ ಹಾಡುಗಳನ್ನು ಹಾಡುತ್ತ ಎಲ್ಲರ ಮನೆಗೆ ಹೋಗಿ ಜ್ಯೋತಿಯನ್ನು ಕೊಟ್ಟು, ಅವರು ನೀಡುವ ದಾನ್ಯ-ದುಡ್ಡನ್ನು ಪಡೆದುಕೊಂಡು ಬರುವ ಆಚರಣೆಯೇ ಅಂಟಿಕೆ-ಪಂಟಿಕೆ.
ಇದಕ್ಕೆ ಅಂಟಿಕೆ-ಪಂಟಿಕೆ ಕಟ್ಟುವುದು ಎಂದೂ ಹೇಳುತ್ತಾರೆ. ಇದರಲ್ಲಿ ಇಬ್ಬರು ಮುಖ್ಯ ಹಾಡುಗಾರರು ಒಬ್ಬರಿಗೊಬ್ಬರು ಅಂಟಿಕೊಂಡು ಹಾಡುಗಳನ್ನು ಹೇಳುತ್ತಾರೆ. ಹಿಮ್ಮೇಳದಲ್ಲಿರುವ ಸಹ ಹಾಡುಗಾರರು ಅವರು ಮುಗಿಸುವ ಮುನ್ನವೇ ಪುನರಾವರ‍್ತಿಸುತ್ತಾರೆ. ಇವರ ಜೊತೆ ಒಬ್ಬರು ಜ್ಯೋತಿ ಹಿಡಿಯುವವರು ಇರುತ್ತಾರೆ, ಇವರು ಹಾಡು ಹೇಳುವುದಿಲ್ಲ.
ಇವರೆಲ್ಲ ಸೇರಿ ದೀಪಾವಳಿಯ ಮೂರು ರಾತ್ರಿ ನಿದ್ದೆ ಬಿಟ್ಟು ಮನೆಮನೆಗೆ ಹೋಗಿ ಹಾಡು ಹೇಳುತ್ತಾರೆ.ನಂತರ ಮನೆಯವರು ದೀಪಕ್ಕೆ ಎಣ್ಣೆ ಹಾಕಿ ಪೂಜೆ ನೆರವೇರಿಸುತ್ತಾರೆ.ಮನೆಯಲ್ಲಿ ಇದ್ದ ತಿಂಡಿ ತಿನಿಸುಗಳನ್ನು ಕೊಟ್ಟು ಉಪಚರಿಸಿ, ಕಾಣಿಕೆ ಕೊಟ್ಟು ಕಳುಹಿಸುತ್ತಾರೆ.