ಸುದ್ದಿಲೈವ್/ಶಿವಮೊಗ್ಗ
ವಿನೋಬ ನಗರದ ಸವಿ ಬೇಕರಿ ಬಳಿ ಹಿಟ್ ಅಂಡ್ ರನ್ ಪ್ರಕರಣ ನಡೆದಿದ್ದು, ತಾಯಿ ಮಗರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಡರಾತ್ರಿ ನಡೆದಿದೆ.
ವಿನೋಬ ನಗರದಲ್ಲಿರುವ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಾಯಿ ಮಗನಿಗೆ ವೇಗವಾಗಿ ಬಂದ ಸ್ಕೋಡಾ ಕಾರು ಗುದ್ದಿದೆ. ತಾಯಿ ಮತ್ತು ಮಗ ಇಬ್ಬರು ಘಟನಾ ಸ್ಥಳದಿಂದ 200 ಮೀಟರ್ ದೂರ ಹಾರಿ ಬಿದ್ದಿದ್ದಾರೆ ಎನ್ನಲಾಗಿದೆ.
ತೀವ್ರ ಗಾಯಗೊಂಡ ತಾಯಿ ಮಗನನ್ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನ ತಾಯಿ ಉಮಾ(40) ಮತ್ತು ಅವರ ಮಗ ಎಂದು ಗುರುತಿಸಲಾಗಿದೆ. ಉಮಾರವರ ಸ್ಥಿತಿ ಗಂಭೀರವಾಗಿದೆ.
ಘಟನೆ ನಡೆದಿದ್ದು ಹೇಗೆ?
ಮಾಹಿತಿ ಪ್ರಕಾರ ಸ್ಕೋಡಾ ಕಾರಿನಲ್ಲಿ ಬರುತ್ತಿದ್ದ ದಂತ ವೈದ್ಯರೊಬ್ಬರ ನಿರ್ಲಕ್ಷತನದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕ್ಲಬ್ ವೊಂದರಿಂದ ಹೊರ ಬಂದ ವೈದ್ಯರು ಸವಿ ಬೇಕರಿ ಎದುರು ಅಪಘಾತ ಪಡಿಸಿ ವಾಹನ ನಿಲ್ಲಿಸದೆ ಚಲಿಸಿದ್ದಾರೆ ಎನ್ನಲಾಗಿದೆ.
ನಿನ್ನೆ ದಂತ ವೈದ್ಯರ ಕ್ರಿಕೆಟ್ ಪಂದ್ಯಾವಳಿ ನಗರದಲ್ಲಿ ನಡೆದಿದ್ದು ಪಂದ್ಯಾವಳಿಯಲ್ಲಿ ರಾಜ್ಯಾದ್ಯಂತ 18 ದಂತವೈದ್ಯರ ತಂಡ ನಗರಕ್ಕೆ ಬಂದಿಳಿದಿತ್ತು. ಈ ಪಂದ್ಯಾವಳಿ ಮುಗಿದು ಕ್ಲಬ್ ವೊಂದರಲ್ಲಿ ನಡೆದ ಪಾರ್ಟಿಯಿಂದ ಹೊರ ಬಂದ ವೈದ್ಯರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ತಾಯಿ ಮಗನನ್ನ ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದವರು ನಗರದ ದಂತ ವೈದ್ಯರೆ ಎನ್ನಲಾಗಿದೆ.
ಈ ಪ್ರಕರಣ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ದಾಖಲಾಗುತ್ತಾ ಅಥವಾ ಮುಚ್ಚಿಹಾಕಲಾಗುತ್ತಾ ಎಂಬ ಕುತೂಹಲ ಹೆಚ್ಚಿಸಿದೆ. ವೈದ್ಯರ ಮೋಜು ಮಸ್ತಿಗೆ ಇಬ್ಬರ ಜೀವಕ್ಕೆ ಕುತ್ತು ತಂದಂತಾಗಿದೆ