ಸುದ್ದಿಲೈವ್/ಶಿವಮೊಗ್ಗ
KPTCL ನೇಮಕಾತಿಯನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿ ಒಕ್ಕೂಟ ಇಂದು ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ಡಿವಿಎಸ್ ವೃತ್ತದಿಂದ ಆಗಮಿಸಿದ ನೂರಾರು ವಿದ್ಯಾರ್ಥಿಗಳು ಮಹಾವೃತ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಉಳಿಕೆ ಮೂಲ ವೃಂದದ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ 2975 ಹುದ್ದೆಗಳನ್ನು SSLC ಮತ್ತು ದೈಹಿಕ ಪರೀಕ್ಷೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ, ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 21 ರಿಂದ ನವೆಂಬರ್ 20 ವರೆಗೆ ದಿನಾಂಕವನ್ನು ನಿಗದಿ ಗೊಳಿಸಲಾಗಿದೆ.
ಪ್ರಸ್ತುತ ಕಾಲಘಟ್ಟದಲ್ಲಿ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಇಂತಹ ಸಂದರ್ಭದಲ್ಲಿ ನ್ಯಾಯ ಸಮ್ಮತವಾದ ಮತ್ತು ಪ್ರಾಮಾಣಿಕವಲ್ಲದ ನೇಮಕಾತಿ ಪ್ರಕ್ರಿಯೆಯು ನಿರುದ್ಯೋಗಿಗಳಲ್ಲಿ ಮತ್ತಷ್ಟು ಆಕ್ರೋಶವನ್ನು ಹೆಚ್ಚಿಸುತ್ತಿದೆ. ಈ ಕಾರಣಗಳಿಂದ SSLC ಅಂಕಗಳ ಆಧಾರದ ಮೇಲಿನ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿಯನ್ನು ನಡೆಸಿಕೊಡುವುದರಿಂದ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
ಅದೆ ಹುದ್ದೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತಾಗುತ್ತದೆ, ನಮ್ಮ ನೆರೆಹೊರೆಯ ರಾಜ್ಯಗಳಲ್ಲೂ ಕೂಡ ಇದೇ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿಯನ್ನು ಮಾಡಲಾಗುತ್ತಿದೆ ಆದ್ದರಿಂದ ನಮ್ಮ ರಾಜ್ಯದಲ್ಲಿಯೂ ಕೂಡ ಇದೇ ನಿಯಮವನ್ನು ಅಳವಡಿಸಬೇಕೆಂದು ಆಗ್ರಹಿಸಲಾಯಿತು.
ಮನವಿ ನೀಡುವ ಸಂದರ್ಭದಲ್ಲಿ ಮಣಿಕಂಠ, ಕೆಂಚಮೂರ್ತಿ, ಶ್ರೀನಾಥ್, ಸುರೇಶ್, ಕೇಶವ ಉಪಸ್ಥಿತರಿದ್ದರು.