BJP state president B. Y. Vijendra announced that everything will be fine after a week.
ಸುದ್ದಿಲೈವ್/ಶಿವಮೊಗ್ಗ
ಒಂದು ವಾರದ ಬಳಿಕ ಎಲ್ಲವೂ ಸರಿಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವದ ವ್ಯವಸ್ಥೆ ಇದೆ. ಯಾವುದೇ ರಾಜಕೀಯ ಪಕ್ಷದಲ್ಲಿ ಈ ವ್ಯವಸ್ಥೆಯಿಲ್ಲ. ವ್ಯವಸ್ಥಿತವಾಗಿ ಸಂಘಟನೆ ಚುನಾವಣೆ ನಡೆಯುತ್ತದೆ ಎಂದರೆ ಅದು ಬಿಜೆಪಿಲಿ ಮಾತ್ರ ಎಂದರು.
ಮಂಡಲ ಮಟ್ಟದಿಂದ ರಾಜ್ಯಮಟ್ಟದವರೆಗೂ ಚುನಾವಣೆ ನಡೆಯುತ್ತದೆ. ರಾಜ್ಯ, ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಪಕ್ಷದ ಕಾರ್ಯಕರ್ತರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಕಳೆದ ಒಂದು ವರ್ಷದಿಂದ ಭ್ರಷ್ಟ, ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದೆ ಎಂದರು.
ನಾನು ಯಾವ ರೀತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆನೆ ಎಂಬುದು ಕಾರ್ಯಕರ್ತರಿಗೆ, ಪಕ್ಷದ ಮುಖಂಡರಿಗೆ ಗೊತ್ತಿದೆ. ನಾನು ರಾಜ್ಯದ ಬಿಜೆಪಿ ಅಧ್ಯಕ್ಷನಾಗುತ್ತೆನೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ಜಿಲ್ಲಾಧ್ಯಕ್ಷ ಚುನಾವಣೆಗೂ ಪೈಪೋಟಿ ಇತ್ತು. ರಾಜ್ಯಾಧ್ಯಕ್ಷ ಸ್ಥಾನಕ್ಕೂ ಅದೇರೀತಿ ಪೈಪೋಟಿ ಇದೆ ಎಂದು ವಿವರಿಸಿದರು.
ಎಲ್ಲದೂ ಕೇಂದ್ರದ ವರಿಷ್ಠರು ಗಮನಿಸುತ್ತಿದ್ದಾರೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದೆ. ಯತ್ನಾಳ್ ಹೇಳಿಕೆ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂಬ ಸದಾನಂದಗೌಡ ಹೇಳಿಕೆ ವಿಚಾರದಲ್ಲೂ ಪ್ರತಿಕ್ರಿಯಿಸಿದ ರಾಜ್ಯಾಧ್ಯಕ್ಷರು, ಈಗಾಗಲೇ ಏನೇನು ಡ್ಯಾಮೇಜ್ ಆಗಬೇಕೋ ಅವೆಲ್ಲವೂ ಆಗಿ ಹೋಗಿದೆ ಎಂದರು.
ಒಂದು ವಾರದಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎಂಬ ಉತ್ತರ ಸಿಗುತ್ತದೆ. ಅದಾದನಂತರ ಎಲ್ಲವೂ ಸರಿಯಾಗಲಿದೆ. ಕಳೆದ ವರ್ಷದಿಂದ ನಾನು ಬಹಿರಂಗ ಹೇಳಿಕೆ ಕೊಟ್ಟಿಲ್ಲ. ಯಾರೇ ಏನೇ ಹೇಳಿದರೂ ಯಾರ ವಿರುದ್ಧವೂ ಬಹಿರಂಗ ಹೇಳಿಕೆ ಕೊಟ್ಟಿಲ್ಲ. ಪಕ್ಷದ ವಿರುದ್ಧವೂ ಹೇಳಿಕೆ ಕೊಟ್ಟಿಲ್ಲ. ರಾಜ್ಯದ ಅಧ್ಯಕ್ಷನಾಗಿ ಕರ್ತವ್ಯದ ಅರಿವು ನನಗಿದೆ ಎಂದರು.
ಬಹಳ ದೊಡ್ಡ ಜವಾಬ್ದಾರಿಯನ್ನು ಕಳೆದೊಂದು ವರ್ಷದಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೆನೆ. 8-10 ದಿನಗಳಲ್ಲಿ ರಾಜ್ಯದ ಅಧ್ಯಕ್ಷ ಯಾರೆಂಬುದಕ್ಕೆ ಉತ್ತರ ಸಿಗಲಿದೆ. ಬಳಿಕ ಎಲ್ಲಾ ಸಮಸ್ಯೆಗಳು ಬಗೆ ಹರಿಯಲಿದೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ ಎಂದು ವಿವರಿಸಿದರು.
ಈ ವೇಳೆ ಶಾಸಕರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಾಜಿ ಸಿಂಡಿಕೇಟ್ ಸದಸ್ಯ ಬಳ್ಳೆಕೆರೆ ಸಂತೋಷ್, ರಾಜೇಶ್ ಕಾಮತ್, ದಿವಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.