![]() |
District In-charge Minister S. said that there is a need for gun training and weapons should be used with awareness. Madhu Bangarappa said. |
ಸುದ್ದಿಲೈವ್/ಸೊರಬ
ಬಂದೂಕು ತರಬೇತಿ ಅವಶ್ಯಕತೆ ಇದ್ದು, ಆಯುಧಗಳನ್ನು ಜಾಗೃತಿಯಿಂದ ಬಳಸಬೇಕೇ ವಿನಃ ಅಜಾಗರೂಕತೆ ಸಲ್ಲದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಹೇಳೀದರು.
ಪಟ್ಟಣದ ರಂಗಮಂದಿರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ನಾಗರೀಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಹಿಂದುಳಿದ ಪ್ರದೇಶದಲ್ಲಿಯೂ ನಾಗರೀಕ ಬಂದೂಕು ತರಬೇತಿ ಶಿಬಿರ ಆಯೋಜನೆ ಮಾಡಿರುವುದು ಶ್ಲಾಘನೀಯವಾಗಿದೆ. ಶಿಬಿರದಲ್ಲಿ ತರಬೇತಿ ಪಡೆದವರಿಗೆ ಸಮಾಜದಲ್ಲಿ ಜವಾಬ್ದಾರಿಗಳು ಹೆಚ್ಚಾಗಿದ್ದು, ಪೊಲೀಸ್ ಇಲಾಖೆಯ ರೀತಿಯೇ ಶಿಸ್ತು ಮತ್ತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಿರುತ್ತದೆ. ಕಾಡಂಚಿನ ಪ್ರದೇಶಗಳಲ್ಲಿ ಹಾಗೂ ಒಂಟಿ ಮನೆಗಳಲ್ಲಿ ವಾಸಿಸುವವರಿಗೆ ಸುರಕ್ಷತೆಯ ದೃಷ್ಟಿಯಿಂದ ಅನುಕೂಲವಾಗಲಿದೆ ಎಂದರು.
ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಮಾತನಾಡಿ, ಬದುಕಿನಲ್ಲಿ ಎದುರಾಗುವ ಕ್ಲಿಷ್ಟಕರ ಸನ್ನಿವೇಷಗಳನ್ನು ಎದುರಿಸಲು ಆತ್ಮಸ್ಥೆರ್ಯ ಅಗತ್ಯ. ಬಂದೂಕು ತರಬೇತಿ ಪಡೆದವರು ಜವಾಬ್ದಾರಿಯಿಂದ ವರ್ತಿಸಬೇಕು. ಪರವಾನಗಿ ಪಡೆದು ಬಂದೂಕು ಹೊಂದಿರುವವರು ಭಾವೋಧ್ವೇಗಕ್ಕೆ ಒಳಗಾಗಿ ಆಯುಧಗಳ ಬಳಕೆ ಸಲ್ಲದು. ತಾಳ್ಮೆಯಿಂದ ವರ್ತಿಸುವುದನ್ನು ಅರಿಯಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡಿ, ಆಯುಧಗಳನ್ನು ಕುಟುಂಬ, ಆಸ್ತಿಯ ರಕ್ಷಣೆಗಾಗಿ ಮಾತ್ರ ಬಳಸಬೇಕು. ಯಾವುದೇ ಕಾನೂನು ಬಾಹಿರ ಚಟುವಟಿಕೆಗೆ ಬಳಸಿದ್ದು ಕಂಡುಬಂದಲ್ಲಿ, ಪರವಾನಗಿ ರದ್ದುಗೊಳಿಸುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಸಮಾಜದಲ್ಲಿನ ಅಪರಾಧ ಕೃತ್ಯಗಳನ್ನು ಮಟ್ಟಹಾಕಲು ಪೊಲೀಸ್ ಇಲಾಖೆಯೊಂದಿಗೆ ಪ್ರತಿಯೊಬ್ಬ ನಾಗರೀಕರು ಕೈ ಜೋಡಿಸಬೇಕು ಎಂದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಫೆ.1ರಿಂದ 10ರವರೆಗೆ ನಾಗರೀಕ ಬಂದೂಕು ತರಬೇತಿ ಶಿಬಿರ ನಡೆಸಲಾಯಿತು. ಶಿಬಿರದಲ್ಲಿ 200 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ನಾಲ್ಕು ತಂಡಗಳನ್ನಾಗಿ ವಿಂಗಡಿಸಿ ತರಬೇತಿ ನೀಡಲಾಯಿತು. ಉತ್ತಮವಾಗಿ ಶೂಟಿಂಗ್ ಮಾಡಿದ ಎಚ್. ಸುನೀಲ್ ಕುಮಾರ್, ಕೆ.ಬಿ. ಭಾನುಪ್ರಕಾಶ್, ಶ್ರೀಕೃಷ್ಣ, ಜೆ. ಮಿಥುನ್ ಪ್ರಥಮ ಸ್ಥಾನ, ಎಂ.ಬಿ. ಲೋಕೇಶ್, ಎಸ್.ಎಂ. ಸಾಗರ್, ಡಿ.ಕೆ. ಕಿಶೋರ್, ಎಚ್.ಕೆ. ಅವಿನಾಶ್ ದ್ವಿತೀಯ ಸ್ಥಾನ ಹಾಗೂ ವಿ. ವಿಶಾಲ್, ಎಂ.ಆರ್. ರದೀಶ್, ಡಿ.ಬಿ. ಕಿರಣ್‌ಕುಮಾರ್, ವೈಷ್ಣವಿ ಎಂ. ವೈದ್ಯ ತೃತೀಯ ಸ್ಥಾನ ಪಡೆದರು.
ತರಬೇತುದಾರರಾದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಉಪನಿರೀಕ್ಷಕ ಮಂಜುನಾಥ್ ಬಿದ್ರಿಕೊಪ್ಪ, ಹೆಡ್ ಕಾನ್ಸ್‌ಟೇಬಲ್‌ಗಳಾದ ಎಂ. ಲಕ್ಷ್ಮೀಕಾಂತ, ಕೆ.ಬಿ. ರಾಘವೇಂದ್ರ ಮತ್ತು ಬಿ.ಎನ್. ಪ್ರವೀಣ್ ಕುಮಾರ ಹೆಲ್ಪಿಂಗ್ ಹ್ಯಾಂಡ್ ಸೊರಬ ವತಿಯಿಂದ "ಶಸ್ತ್ರಾಸ್ತ್ರ ತರಬೇತಿ ಚತುರ" ಎಂಬ ಬಿರುದು ನೀಡಿ ಶ್ರೀಪಾದ ಬಿಚ್ಚುಗತ್ತಿ ಅವರು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯ ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಹಾಗೂ ಪದಾಧಿಕಾರಿಗಳಾದ ರಾಜೇಂದ್ರ ಜೈನ್, ಯುವರಾಜ್ ಜೈನ್, ಎಸ್.ಆರ್. ಮಧುಕೇಶ್ವರ, ಅನಿಲ್ ಅವರನ್ನು ಸನ್ಮಾನಿಸಿ ಅಭಿನಂದನಾ ಪತ್ರ ನೀಡಲಾಯಿತು. ತರಬೇತಿ ಪಡೆದ 200 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ಟಿ.ಪಿ. ಕೃಷ್ಣಮೂರ್ತಿ, ಶಿಕಾರಿಪುರ ಡಿವೈಎಸ್‌ಪಿ ಕೇಶವ್, ಸಿಎಪಿಐ ಎಲ್. ರಾಜಶೇಖರ್, ಪಿಎಸ್‌ಐ ನಾಗರಾಜ್ ಸೇರಿದಂತೆ ಇತರರಿದ್ದರು.