Suddilive || Soraba
A man attempt to suicide after loosing the money in Gambling
ಕ್ಲಬ್ ನಲ್ಲಿ ಹಣ ಪಣಕ್ಕಿಟ್ಟು ಕಳೆದುಕೊಂಡ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಸೋಮವಾರ ನಡೆದಿದೆ.
ಮಾಲತಃ ಉಳವಿ ಗ್ರಾಮದವರಾದ ಪಟ್ಟಣದ ರಾಜೀವ ನಗರ ನಿವಾಸಿ ಕೆ. ಗುರುಮೂರ್ತಿ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದವರು. ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಮನೋರಂಜನೆಗಾಗಿ ಕ್ಲಬ್ ವೊಂದನ್ನ ಆರಂಭಿಸಲಾಗಿದೆ. ಆದರೆ, ಇಲ್ಲಿ ನಿತ್ಯ ಜೂಜು ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ.
ಮೋಸದಾಟಕ್ಕೆ ಬಲಿಯಾದ ಗುರುಮೂರ್ತಿ ಲಕ್ಷಾಂತರ ರೂ.ಗಳನ್ನ ಕಳೆದುಕೊಂಡಿದ್ದಾರೆ ಎನ್ನಲಾಗಿದ್ದು, ಇದರಿಂದ ಮನನೊಂದು ಗುರುಮೂರ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಹೇಗೆ ನಡೆಯುತ್ತೆ ಜೂಜು?
ಕ್ಲಬ್ ನಲ್ಲಿ ಸದಸ್ಯತ್ವ ಹೊಂದಿದವರು ಮಾತ್ರವೇ ಮನೋರಂಜನೆಗಾಗಿ ಆಟವಾಡಲು ಅವಕಾಶವಿರುತ್ತದೆ. ಆದರೆ, ಇಲ್ಲಿ ಎಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದ್ದು, ಪ್ರವೇಶ ಪಡೆಯುವ ಮೊದಲು ಹಣವನ್ನು ನೀಡಿ ಟೋಕನ್ ಕಾಯಿನ್ ಪಡೆಯಲಾಗುತ್ತದೆ. ಕ್ಲಬ್ ಒಳಗಡೆ ಆ ಕಾಯಿನ್ ಗಳೇ ಹಣವಾಗಿತ್ತದೆ. ಇದನ್ನು ಇಟ್ಟು ಇಸ್ಪೀಟ್ ಆಟವನ್ನು ಆಡಿಸಲಾಗುತ್ತದೆ.
ನಂತರ ಗೆದ್ದವರು ಕ್ಲಬ್ ನಿಂದ ಆಚೆ ಬರುವಾಗ ಕಾಯಿನ್ ನೀಡಿ ನಗದು ಪಡೆಯಬೇಕು. 100, 200, 500, ಹೀಗೆ ವಿವಿಧ ಹಂತದ ಕಾಯಿನ್ ಗಳು ಇರುತ್ತದೆ. ಕ್ಲಬ್ ನ ಒಳಗಡೆ ಅವರದ್ದೆ ಆದ ಕಾಯಿನ್ ಹಣವಾಗಿರುತ್ತದೆ. ಕೆಲ ಸರ್ಕಾರಿ ನೌಕರರು ತಮ್ಮ ಕಾಯಕವನ್ನೇ ಮರೆತು ನಿತ್ಯ ಬೆಳಗ್ಗೆಯಿಂದ ಸಂಜೆ ವರೆಗೆ ಇಲ್ಲಿಯೇ ಕಾಲ ಕಳೆಯುತ್ತಾ, ಉಚಿತವಾಗಿ ವೇತನ ಪಡೆಯುತ್ತಿದ್ದಾರೆ ಎನ್ನುವ ಆರೋಪವೂ ಇದೆ.
ಕ್ಲಬ್ ಗಳ ಹೆಸರಿನಲ್ಲಿ ಜೂಜಾಟದ ಜಾಲವೇ ತಾಲೂಕಿನಲ್ಲಿ ಹರಡಿದ್ದು, ಕೆಲ ಮಾಧ್ಯಮದವರು ಸೇರಿದಂತೆ ಸಂಬಂಧಪಟ್ಟ ಇಲಾಖೆಯವರಿಗೆ ಮಾಸಿಕ ವಂತಿಕೆ ಇದೆ ಎನ್ನುವ ಆರೋಪಗಳು ಸಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಜೂಜಾಟಗಳಿಗೆ ಕಡಿವಾಣ ಹಾಕಬೇಕು ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.