Suddilive || Shivamogga
Refrigerator service failure: Order to provide appropriate compensation. ಎರಡು ವರ್ಷ ವಾರೆಂಟಿ ಇರುವಾಗಲೇ ರೆಪ್ರಿಜರೇಟರ್ ಕೂಲಿಂಗ್ ವಿಚಾರದಲ್ಲಿ ರಿಲಿಯನ್ಸ್ ಡಿಜಿಟಲ್ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ಶಿವಮೊಗ್ಗದ ಗ್ರಾಹಕರು ದಾಖಲಿಸಿ ಜಯಗಳಿಸಿದ್ದಾರೆ.
ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ ರಿಲಯನ್ಸ್ ರಿಟೇಲ್ ಲಿ., ರಿಲಯನ್ಸ್ ಡಿಜಿಟಲ್ ಶಿವಮೊಗ್ಗ ಇವರ ವಿರುದ್ದ ರೆಫ್ರಿಜರೇಟರ್‌ಗೆ ಸಂಬಂಧಿಸಿದಂತೆ ಸೇವಾನ್ಯೂನತೆ ಕುರಿತು ಸಲ್ಲಿಸಿದ್ದ ದೂರನ್ನು ಪುರಸ್ಕರಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.
ಅರ್ಜಿದಾರರಾದ ಎಸ್ ವಿ ಲೋಹಿತಾಶ್ವ ಇವರು ರಿಲಯನ್ಸ್ ಡಿಜಿಟಲ್ ಶಿವಮೊಗ್ಗ ಇಲ್ಲಿ ರೆಫ್ರಿಜರೇಟರ್‌ನ್ನು ಕೊಂಡಿದ್ದು 02 ವರ್ಷಗಳ ವಾರಂಟಿ ನೀಡಿರುತ್ತಾರೆ. ಸದರಿ ರೆಫ್ರಿಜರೇಟರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಹಾಗೂ ಕೂಲ್ ಆಗುತ್ತಿಲ್ಲವೆಂದು ಎದುರುದಾರರಿಗೆ ಹಲವಾರು ಬಾರಿ ದೂರಿತ್ತರೂ ಹಾಗೂ ರೆಫ್ರಿಜರೇಟರ್ ವಾರಂಟಿ ಅವಧಿಯೊಳಗಿದ್ದರೂ ಎದುರುದಾರರು ರೆಫ್ರಿಜರೇಟರ್‌ನ್ನು ರಿಪೇರಿ ಮಾಡದೇ ಸೇವಾ ನ್ಯೂನತೆ ಎಸಗಿದ್ದಾರೆಂದು ಆಯೋಗದ ಮುಂದೆ ದೂರನ್ನು ಸಲ್ಲಿಸಿರುತ್ತಾರೆ.
ಆಯೋಗದ ನೋಟಿಸ್‌ಗೂ ಹಾಜರಾಗದ ಕಾರಣ ಎದುರುದಾರರನ್ನು ಏಕ ಪಕ್ಷೀಯವೆಂದು ಮಾಡಿ, ದೂರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ದೂರುದಾರ ವಕೀಲರ ವಾದವನ್ನು ಆಲಿಸಿದ ಆಯೋಗವು, ದೂರುದಾರರು ಹಲವಾರು ಬಾರಿ ರೆಫ್ರಿಜರೇಟರನ್ನು ರಿಪೇರಿ ಮಾಡಿಕೊಡಲು ವಿನಂತಿಸಿರುವುದು ದಾಖಲೆಗಳಿಂದ ಸಾಬೀತಾಗಿರುವುದಾಗಿ ಮತ್ತು ದೂರುದಾರರು ಸಲ್ಲಿಸಿರುವ ದಾಖಲೆಗಳನ್ನಾಗಲಿ ಅಥವಾ ದೂರುದಾರರು ಮಾಡಿರುವ ಆರೋಪವನ್ನಾಗಲಿ ಅಲ್ಲಗಳೆಯಲು ಎದುರುದಾರರು ಈ ಆಯೋಗದ ಮುಂದೆ ಹಾಜರಾಗಿ ಯಾವುದೇ ದಾಖಲೆಗಳನ್ನು ಸಲ್ಲಿಸಿರುವುದಿಲ್ಲವಾದ್ದರಿಂದ ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಲಾಗಿದೆ.
ಎದುರುದಾರರು ಈ ಆದೇಶವಾದ 45 ದಿನಗಳ ಒಳಗಾಗಿ ರೆಫ್ರಿಜರೇಟರ್‌ನ್ನು ರಿಪೇರಿ ಮಾಡಿ ನೀಡಬೇಕು ಹಾಗೂ ಒಂದು ವೇಳೆ ರಿಪೇರಿ ಮಾಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ, ದೂರುದಾರರು ರೆಫ್ರಿಜರೇಟರ್‌ನ್ನು ಒಂದೂವರೆ ವರ್ಷಗಳ ಕಾಲ ಉಪಯೋಗಿಸುವುದರಿಂದ ಖರೀದಿ ಬೆಲೆಗೆ ಶೇ.10 ಸವಕಳಿಯನ್ನು ಹಾಗೂ ಜಿಎಸ್‌ಟಿಯನ್ನು ಕಳೆದು ರೂ.27,312 ನ್ನು ದೂರುದಾರರಿಂದ ರೆಫ್ರಿಜರೇಟರ್ ಹಿಂಪಡೆದು ನೀಡಲು ಹಾಗೂ ರೂ.5,000/- ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ, ಸದಸ್ಯರಾದ ಬಿ.ಡಿಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಮಾ.11 ರಂದು ಆದೇಶಿಸಿದೆ.
Refrigerator service failure: Order to provide appropriate compensation.