ದೇಸಿ ಉಡುಗೆಯಲ್ಲಿ ವಿದ್ಯಾರ್ಥಿಗಳ ಸ್ನೇಹ ಸಂಭ್ರಮ-Students celebrate friendship

Suddilive || Shivamogga

ದೇಸಿ ಉಡುಗೆಯಲ್ಲಿ ವಿದ್ಯಾರ್ಥಿಗಳ ಸ್ನೇಹ ಸಂಭ್ರಮ-Students celebrate friendship in desi attire

Student, friendship


ಸರಸ್ವತಿ ಪೂಜೆಯ ಘಂಟಾ ನಾದ ಮೊಳಗುತ್ತಿದ್ದಂತೆ, ದೇಸಿ ಉಡುಗೆಯಲ್ಲಿ ಒಂದೆಡೆ ಸೇರಿದ ವಿದ್ಯಾರ್ಥಿಗಳು, ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿದ್ದ ಶೈಕ್ಷಣಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸುವ ಶಕ್ತಿ ನೀಡುವಂತೆ ಭಕ್ತಿ ಭಾವದಿ ಪ್ರಾರ್ಥಿಸಿದರು. ಪೂಜೆಯ ಹಿಂದೆಯೇ ಶುರುವಾದ ಡೊಳ್ಳಿನ ಶಬ್ದಕ್ಕೆ ಸಂಭ್ರಮದಿ ಹೆಜ್ಜೆ ಹಾಕಿದರು.

ಇಂತಹ ವಿದ್ಯಾರ್ಥಿಗಳ ಸ್ನೇಹ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ಆವರಣ. ಭಾನುವಾರ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ದಿನದಲ್ಲಿ ವಿದ್ಯಾರ್ಥಿಗಳು ದೇಸಿಯ ಉಡುಗೆಯಲ್ಲಿ ಮಿಂಚಿದರು.


ಪುಸ್ತಕಗಳನ್ನು ಜೊಡಿಸಿಟ್ಟು, ಸರಸ್ವತಿ ಮಾತೆಯ ಫೋಟೊವನ್ನು ಹಣ್ಣು ಹಂಪಲು, ಹೂವುಗಳಿಂದ ಅಲಂಕರಿಸಿದ್ದ ವಿದ್ಯಾರ್ಥಿಗಳು, ತಳಿರು, ತೋರಣ, ರಂಗೋಲಿಗಳಿಂದ ಇಡೀ ಕಾಲೇಜನ್ನು ಸಾಂಪ್ರದಾಯಿಕವಾಗಿ ಸಿಂಗರಿಸಿದ್ದರು. ಸೀರೆ, ಪಂಚೆ, ಶಲ್ಯದಲ್ಲಿ ಆಗಮಿಸಿದ್ದ ಬಿಕಾಂ, ಬಿಬಿಎ, ಬಿಸಿಎ ವಿದ್ಯಾರ್ಥಿಗಳು ಪೂಜೆಯ ನಂತರ ಕಾಲೇಜು ಆವರಣದಲ್ಲಿಯೇ ಡೊಳ್ಳಿನ ಶಬ್ದಕ್ಕೆ ಕುಣಿಯುತ್ತ, ತಾವು ತಂದಿದ್ದ ಜೀಪು, ಬೈಕುಗಳಲ್ಲಿ ರೋಡ್ ಷೋ ನಡೆಸಿದರು.

ಬಿಸಿಲ ಧಗೆಯನ್ನು ಲೆಕ್ಕಿಸದ ವಿದ್ಯಾರ್ಥಿಗಳು ಪರಸ್ಪರ ಅಭಿನಂದಿಸಿಕೊಳ್ಳುತ್ತ, ಸೆಲ್ಫಿ ತೆಗೆದುಕೊಳ್ಳುತ್ತ ಉತ್ಸುಕತೆಯಿಂದ ಹೆಜ್ಜೆ ಹಾಕುತ್ತಿದ್ದದ್ದು ಸಾಮಾನ್ಯವಾಗಿತ್ತು. ಬಣ್ಣದ ಹೊಗೆ ಬಿಡುತ್ತಿದ್ದ ಸನ್ನೆಗೋಲುಗಳು, ಆಗಾಗ ಸಿಡಿಯುತ್ತಿದ್ದ ಬಣ್ಣದ ಪೇಪರ್ ಚೂರುಗಳ ಪಟಾಕಿಗಳು ಸ್ಟೇಜ್ ಮೇಲಿನ ರ‍್ಯಾಂಪ್ ನಡಿಗೆಗೆ ಮತ್ತಷ್ಟು ಮೆರುಗು ನೀಡಿತ್ತು. ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸುತ್ತಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಕಣ್ಣುಗಳಲ್ಲಿ ಪರೀಕ್ಷೆ ಮುಗಿದ ನಂತರ ಕಾಲೇಜು ದಿನಗಳು ಮುಗಿಯಿತೆಂಬ ಬೇಸರ ಛಾಯೆಯೊಂದು ಮೂಡಿದ್ದು ಮಾತ್ರ ಸುಳ್ಳಲ್ಲ.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್ ಶಿವಪ್ರಸಾದ್, ಉಪನ್ಯಾಸಕರಾದ ವಿನುತ ಶೆಣೈ, ಗುರುರಾಜ್, ಸುಜಾತ, ಅರುಣ್ ಕುಮಾರ್, ಈಶ್ವರ್, ಚಂದನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Students celebrate friendship

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close