Suddilive || Shivamogga
Youth power is the reason Congress came to power: Madhu Bangarappa
ಕಾಂಗ್ರೆಸ್ ಅಧಿಕಾರಕ್ಕೆ ಬರಲು ಯುವ ಶಕ್ತಿಯೇ ಕಾರಣ. ದೇಶದಲ್ಲಿ ಮಾತು ಕೊಟ್ಟ ಹಾಗೆ ನಡೆದ ಯಾವುದಾದರೊಂದು ಪಕ್ಷ ಇದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ಶಾಲಾ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಅವರು ಇಂದು ನಗರದ ಬಂಜಾರ ಕನ್ವೆನ್ಷನ್ ಸಭಾಭವನದಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಯುವ ನಾಯಕತ್ವ ಸಮಾವೇಶ, ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ರಾಜ್ಯದ ಜನರಿಗೆ ಭೂ ಹಕ್ಕು ಕೊಟ್ಟಿದ್ದು, ಉಚಿತ ವಿದ್ಯುತ್ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ದೇಶದ ಅಭಿವೃದ್ಧಿಗೆ, ಕೃಷಿ ಬೆಳವಣಿಗೆಗೆ, ಜಿಡಿಪಿ ಬೆಳವಣಿಗೆಗೆ ಕಾಂಗ್ರೆಸ್ ಅನೇಕ ಕೊಡುಗೆಗಳನ್ನು ಕಾಂಗ್ರೆಸ್ ನೀಡಿದೆ. ರಾಜ್ಯ ಸರ್ಕಾರ ಕೊಡುತ್ತಿರುವ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯ ಗಂಟೆ ಬಾರಿಸುತ್ತಿದೆ. ಆದರೆ ದೇವಾಲಯಗಳಲ್ಲಿ ಗಂಟೆ ಹೊಡೆಯುತ್ತಾರೋ ಗೊತ್ತಿಲ್ಲ. ಉಚಿತ ಮೊಟ್ಟೆ, ಹಾಲು, ಬೂಟು, ಶಿಕ್ಷಣ ಎಲ್ಲವನ್ನೂ ನೀಡಿ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಇದನ್ನು ಪಕ್ಷದ ಯುವಕರು ಭೂತ್ ಮಟ್ಟದಲ್ಲಿ ಮನೆ ಮನೆಗೆ ತಲುಪಿಸಿ ಜನಪರ ಧ್ವನಿಯಾಗಬೇಕು. ನಿಮಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.
ವಿಧಾನ ಪರಿಷತ್ ಸದಸ್ಯರೂ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಇಂದಿನ ಕಾರ್ಯಕ್ರಮ ಅದೆಷ್ಟೋ ಯುವಕರಿಗೆ ದಾರಿದೀಪವಾಗಬೇಕು. ಹಿಂದೆ ಕಾಂಗ್ರೆಸ್‌ನಲ್ಲಿ ಪಕ್ಷದ ನಾಯಕರೇ ಪದಾಧಿಕಾರಿಗಳನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಈಗ ಚುನಾವಣೆಗಳ ಮೂಲಕ ನೀವು ಗೆದ್ದು ಯುವ ನಾಯಕರಾಗಿದ್ದೀರಿ. ಈಗ ನಿಮ್ಮ ಸಾಮರ್ಥ್ಯವನ್ನು ತೋರಿಸಿ ಪಕ್ಷ ಬಲಪಡಿಸಿ. ಕೇವಲ ಲೆಟರ್‌ಹೆಡ್ ಮತ್ತು ವಿಸಿಟಿಂಗ್ ಕಾರ್ಡ್ಗೆ ಅಧಿಕಾರವನ್ನು ಸೀಮಿತಗೊಳಿಸಬೇಡಿ ಎಂದರು.
ಮೊದಲು ವಿದ್ಯಾರ್ಥಿ ಕಾಂಗ್ರೆಸ್ ಮೂಲಕ ಪಕ್ಷಕ್ಕೆ ಸೇವೆ ಸಲ್ಲಿಸಿ ಹಂತ ಹಂತವಾಗಿ ಸ್ಥಾನ ಮಾನ ತಲುಪಿದವರು ಇದ್ದಾರೆ. ಪಕ್ಷವನ್ನು ಕಟ್ಟಬೇಕಾದರೆ ಮೊದಲು ಯುವಕರ ತಂಡ ಕಟ್ಟಬೇಕು. ಯುವಕರನ್ನು ಗುರುತಿಸಬೇಕು. ನಿಮ್ಮ ಜೊತೆಗೆ 4 ಜನ ಹಿಂದೆ ಬರುತ್ತಾರೆ ಎಂದರೆ ಮಾತ್ರ ಮತ್ತು ನೀವು ಯಾವುದಾದರೂ ಚುನಾವಣೆಯಲ್ಲಿ ಗೆದ್ದಿದ್ದೀರಿ ಎಂದಾಗ ಮಾತ್ರ ನಾಯಕರಾಗಲು ಸಾಧ್ಯ. ಬೂತ್ ಮಟ್ಟದಲ್ಲಿ ಯುವ ಕಾಂಗ್ರೆಸ್ ಅನ್ನು ಕಟ್ಟಬೇಕು. ರಾಷ್ಟಿçÃಯ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ನಿಮಗೆಲ್ಲ ಮಾದರಿಯಾಗಲಿ ಎಂದರು.
ಬಿ.ವಿ. ಶ್ರೀನಿವಾಸ್ ಮಾತನಾಡಿ, ಸಂವಿಧಾನ ಉಳಿಸಲು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು 151 ದಿನ 4500 ಕಿಮೀ ದೇಶದಲ್ಲಿ ಪಾದಯಾತ್ರೆ ಮಾಡಿದರು. ದೇಶದ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿದ ಪಕ್ಷ ಕಾಂಗ್ರೆಸ್ ಆಗಿದೆ. ಬಿಜೆಪಿಯವರು ಸುಳ್ಳಿನ ಮೇಲೆ ಪಕ್ಷ ಕಟ್ಟುತ್ತಾರೆ. ಶವದ ಮೇಲೆ ರಾಜಕೀಯ ಮಾಡುತ್ತಾರೆ. ಅವರು ಮೊದಲು ಸುಳ್ಳನ್ನೇ ಹೇಳುತ್ತಾ ಬಂದ ಅಮಿತ್ ಶಾ ಮತ್ತು ಮೋದಿ ಅವರ ವಿರುದ್ಧ ಜನಾಕ್ರೋಶ ಯಾತ್ರೆ ಮಾಡಲಿ ಎಂದು ಸವಾಲು ಹಾಕಿದರು.
ರಾಜ್ಯ ಕಾಂಗ್ರೆಸ್ ನಲ್ಲಿ ಗೆದ್ದ 136 ಶಾಸಕರಲ್ಲಿ ಶೇ. 70ರಷ್ಟು ಅಧಿಕ ನಾಯಕರು ಯುವ ಕಾಂಗ್ರೆಸ್ ನಿಂದಲೇ ಬಂದವರಾಗಿದ್ದಾರೆ. ಪ್ರತಿ ಬೂತ್‌ನಿಂದ ಓರ್ವ ಮೇಧಾವಿ ಡಿಜಿಟಲ್ ಯುವಕನನ್ನು ಗುರುತಿಸಿ ಆತನ ಮೂಲಕ ಪಕ್ಷದ ಎಲ್ಲಾ ಜನಪರ ಸಾಧನೆಗಳನ್ನು ತಿಳಿಸುವ ಕಾರ್ಯ ಮಾಡಬೇಕು. ಬಿಜೆಪಿಯವರು ಸುಳ್ಳು ಹೇಳಲೆಂದೇ ಯುವಕರ ವಾಟ್ಸಾಪ್ ಯುನಿವರ್ಸಿಟಿಯನ್ನೇ ತೆರೆದಿದ್ದಾರೆ. ನಾವು ನಮ್ಮ ಕೆಲಸವನ್ನು ಹೇಳಿ ಸತ್ಯವನ್ನೇ ಜನರಿಗೆ ತಲುಪಿಸುವ ಕಾರ್ಯ ಮಾಡೋಣ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಅಚ್ಛೇದಿನ್ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಬೆಲೆ ಏರಿಕೆ ಮಾಡುತ್ತಾ ಬಂದಿದೆ. ನಿರುದ್ಯೋಗ, ಸುಳ್ಳು, ಭ್ರಷ್ಟಾಚಾರ ಮೂಲಕವೇ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಬಡವರಿಗೆ ಸೂರು ಇಲ್ಲ. ನಿರುದ್ಯೋಗ ತಾಂಡವವಾಡುತ್ತಿದೆ. ಇದೇ ಬಿಜೆಪಿಯ ಸಾಧನೆ ಎಂದು ಲೇವಡಿ ಮಾಡಿದರು. ಗ್ಯಾರಂಟಿ ನಿಲ್ಲಿಸಲು ಬಿಜೆಪಿ ಸತತ ಪ್ರಯತ್ನ ಮಾಡುತ್ತಾ ಬಂದಿದೆ. ಆದರೂ ಅದು ಯಶಸ್ವಿಯಾಗಿಲ್ಲ. ಕಪ್ಪು ಹಣ ತರಲಿಲ್ಲ. ಪಿಎಂ ಕೇರ್ ಫಂಡ್ ಲೆಕ್ಕ ನೀಡಿಲ್ಲ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಶಾಸಕರಾದ ಬಲ್ಕೀಶ್ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ಪ್ರಮುಖರಾದ ಹೆಚ್.ಎಸ್. ಸುಂದರೇಶ್, ರವಿಕುಮಾರ್, ಪಲ್ಲವಿ, ಆಯನೂರು ಮಂಜುನಾಥ್, ಶ್ರೀನಿವಾಸ ಕರಿಯಣ್ಣ, ಹೆಚ್.ಸಿ. ಯೋಗೀಶ್, ಎನ್. ರಮೇಶ್, ಎಂ. ಶ್ರೀಕಾಂತ್, ಗೋಣಿ ಮಾಲತೇಶ್, ಮಧುಸೂದನ್, ವಿಜಯಕುಮಾರ್(ದನಿ), ವೇದಾ ವಿಜಯಕುಮಾರ್, ಚೇತನ್, ಯಮುನಾ ರಂಗೇಗೌಡ ಮೊದಲಾದವರಿದ್ದರು.
Youth power