SUDDILIVE || SHIVAMOGGA
ದಡ ಸೇರಿದ ಲಾಂಚ್, ಸೇವೆ ಸ್ಥಗಿತಗೊಳಿಸಿದ ಜೀಪುಗಳು-Beached lounges, jeeps out of service
ಸೇತುವೆ ಕ್ರೆಡಿಟ್ ವಾರ್ ಗಳಲ್ಲೇ ಮತ್ತು ಪ್ರೋಟೋಕಾಲ್ ಗಳ ಜಟಾಪಟಿಯಲ್ಲಿ ಮುಳುಗಿರುವ ಸ್ಥಳೀಯ ನಾಯಕರಲ್ಲಿ ಕೆಲ ಜನಪ್ರತಿನಿಧಿಗಳು ಹೊರತುಪಡಿಸಿ ಸೇತುವೆಯ ನಿರ್ಮಾಣದಿಂದ ಕೆಲಸ ಕಳೆದುಕೊಳ್ಳುತ್ತಿರುವವರ ಬಗ್ಗೆ ಒಂದಿಷ್ಟು ಮಾತನಾಡಿದ್ದಾರೆ. ಸಿಗಂದೂರು ಸೇತುವೆ ಉದ್ಘಾಟನೆಯಾದ ನಂತರ ಲಾಂಜ್, ಜೀಪುಗಳ ಸೇವೆ ಸ್ಥಗಿತಗೊಂಡಿದೆ. ಮತ್ತು ಹೋಟೆಲ್ ಉದ್ಯಮವೂ ಅಪಾಯದ ಅಂಚಿನಲ್ಲಿದೆ. ಜೀವನ ನಿರ್ವಹಣೆಗೆ ಬೇರೆ ಜೀವನವನ್ನ ಅರಿಸಿಹೋಗುವಂತಾಗಿದೆ.
ಇಳಿಯ ವಯಸ್ಸಿನಲ್ಲಿ ಹೊಸ ಮನ್ವಂತರಕ್ಕೆ ಈ ಜನ ಬದಲಾಗುವ ಅನಿವಾರ್ಯತೆ ಎದುರಿಸಿದ್ದಾರೆ. ಲಾಂಜ್ ನಿಂದ 16 ಜನ ಕೆಲಸ ಕಳೆದುಕೊಳ್ಳಲಿದ್ದಾರೆ. ಇದರಲ್ಲಿ ಕೆಲವರು ಸರ್ಕಾರಿ ಸಿಬ್ಬಂದಿಗಳಿದ್ದಾರೆ. ಇವರುಗಳು ಕಾರವಾರಕ್ಕೆ ತೆರಳಲಿದ್ದಾರೆ. ಇನ್ನು ಗುತ್ತಿಗೆ ಆಧಾರದ ಮೇರೆಗೆ ಕೆಲಸ ಮಾಡುವಂತಹವರು ಕೆಲಸಕಳೆದುಕೊಂಡಿದ್ದಾರೆ. ನಾಲ್ಕು ಲಾಂಜ್ ಗಳು ಕಳೆದ 60 ಗಂಟೆಯಿಂದ ಅಂಬರಗೋಡ್ಲು ದಡ ಸೇರಿವೆ. ಇನ್ನೂ ಜೀಪು ಚಾಲಕರು ಮತ್ತು ಹೋಟೆಲ್ ನಡೆಸಿಕೊಂಡು ಬರುತ್ತಿರುವವರು ಹೊಸ ಕೆಲಸಕ್ಕೆ ಹೊಂದಿಕೊಳ್ಳಬೇಕಿದೆ.
45 ಜೀಪುಗಳು ಲಾಂಜ್ ನಿಂದ ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದವು. ಈ ಕುಟುಂಬಗಳು ಮುಂದೇನು ಎಂಬ ಪ್ರಶ್ನೆಗೆ ಉತ್ತರಕಂಡುಕೊಳ್ಳಬೇಕಿದೆ. 45 ಜೀಪು ಚಾಲಕರ ಸುಮಾರು 200 ರಿಂದ 300 ಕುಟುಂಬ ಸದಸ್ಯರಿಗೆ ಜೀವನಾಧಾರವಾಗಿದ್ದ ಜೀಪುಗಳು ಸೇವೆಯನ್ನ ಸ್ಥಗಿತಗೊಳಿಸಿವೆ. ಲಾಂಜ್ ಸ್ಥಗಿತಗೊಂಡ ಪರಿಣಾಮ ಈ ಜೀಪು ನಂಬಿಕೊಂಡು ಬದುಕುತ್ತಿದ್ದ ಚಾಲಕರ ಬದುಕು ಅತಂತ್ರವಾಗಿದೆ. ತಿಮ್ಮಪ್ಪ ಎಂಬ ಚಾಲಕರು ಲಾಂಜ್ ನಿಂದ ಸಿಗಂದೂರು ದೇವಸ್ಥಾನಕ್ಕೆ ರಸ್ತೆಯಿಲ್ಲದ ವೇಳೆಯಿಂದ ಸೇವೆ ಸಲ್ಲಿಸಿದ್ದಾರೆ. ಸುಮಾರು 15 ವರ್ಷದ ನಂತರ ರಸ್ತೆಯಾದ ಕಾರಣ ಹೊಸ ಟ್ಯಾಕ್ಸಿಗಳನ್ನ ಖರೀದಿಸಿ ಜೀವನ ನಿರ್ವಾಹಣೆ ಮಾಡಿಕೊಂಡಿದ್ದಾರೆ.
ದಿನ ಕನಿಷ್ಠ 5-6 ಟ್ರಿಪ್ ಗಳು ಫಿಕ್ಸ್ ಇರುತ್ತಿತ್ತು. ಸ್ವಂತವಾಹನ ಇಲ್ಲದ ಪ್ರವಾಸಿಗರಿಗೆ ಈ ಟ್ರಾಕ್ಸಿಗಳೇ ದೇವಸ್ಥಾನಕ್ಕೆ ತೆರಳಲು ಆಧಾರವಾಗಿತ್ತು. ಒಂದು ಟ್ರಿಪ್ ಗೆ ಕನಿಷ್ಠ ಅಂದರೆ ಒಂದು ಸಾವಿರ. ರೂ. ದುಡಿಯುತ್ತಿದ್ದ ಜೀಪು ಚಾಲಕರು ಬೀದಿಗೆ ಬಿದ್ದಿದ್ದಾರೆ. ಹಬ್ಬ ಬಂದರೆ, ಭಾನುವಾರ ಮತ್ತು ಶುಕ್ರವಾರ ಈ ಚಾಲಕರ ದುಡಿಮೆ ಹೆಚ್ಚಾಗುತ್ತಿತ್ತು ಕೆಲ ಪ್ರವಾಸಿಗರ ಗಲಾಟೆಯನ್ನ ಈ ಚಾಲಕರು ಇಲ್ಲಿ ತಪ್ಪಿಸಿದ್ದು ಇದೆ. ಈ ಕುರಿತು ಮಾತನಾಡುವ ತಿಮ್ಮಪ್ಪ ಜು.14 ರಿಂದಲೇ ಟ್ಯಾಕ್ಸಿ ಚಾಲನೆ ಬಂದ್ ಆಗಿದೆ. ಮುಂದೇನು ಎಂಬುದಕ್ಕೆ ಕುಟುಂಬದವರೊಡನೆ ಇನ್ನೂ ಚರ್ಚಿಸಿಲ್ಲ. ಪರ್ಯಾಯ ವ್ಯವಸ್ಥೆ ಬೇಕಿದೆ. ಹಣಕೊಟ್ಟರೂ ಅನುಕೂಲವಾಗುತ್ತದೆ. ಅಥವಾ ಸೇತುವೆ ಜೊತೆಗೆ ಲಾಂಜ್ ನ್ನ ಪುನರ್ ಆರಂಭಿಸಿದರೂ ಒಂದಿಷ್ಟು ಆರ್ಥಿಕವಾಗಿ ಚೇತರಿಸಿಕೊಳ್ಳಬಹುದು. ಸಿಗಂದೂರು ಪ್ರವಾಸಿಗರಿಗೆ ಲಾಂಜ್ ನ ಪ್ರಯಾಣವೇ ಆಕರ್ಷಣೆ ಎಂದು ಹೇಳಿದ್ದಾರೆ.
ಸುರಕ್ಷಿತವಾಗಿ ದೇವಿಯ ದರ್ಶನ ಮಾಡಿಸಿ ಪ್ರಯಾಣಿಕರನ್ನ ಲಾಂಚ್ ಹತ್ತಿಸುತ್ತಿದ್ದೆವು. 45 ಜನ ಚಾಲಕರು ಕುಟುಂಬದ ಸ್ನೇಹಿತರಂತೆ ಇದ್ದೆವು. ಶಾಲಾ ಮಕ್ಕಳಿಗೆ ತೊಂದರೆ ಇತ್ತು ಸೇತುವೆ ಆಗಿದ್ದು ಅನುಕೂಲವಾಗಿದೆ. ಮೊನ್ನೆಯಿಂದ ಜೀಪುಗಳ ಸೇವೆ ಸ್ಥಗಿತವಾಗಿದೆ. ಬೇರೆ ಕೆಲಸ ನೋಡಿಕೊಳ್ಳಬೇಕಿದೆ 25-30 ವರ್ಷದ ನಿರಂತರ ಚಾಲಕ ವೃತ್ತಿಯಿಂದ ಇಷ್ಟು ಬೇಗ ನಿವೃತ್ತಿಯಾಗುತ್ತೇವೆ ಎಂಬ ಯೋಚನೆ ನಮಗೆ ಇರಲಿಲ್ಲ. ಬದುಕು ಬರಿದಾಗಿದೆ ಎಂದು ಮತ್ತೋರ್ವ ಚಾಲಕ ಜಯಂತ್ ಹೇಳುತ್ತಾರೆ. ಇವರೆಲ್ಲ 50 ವರ್ಷದಾಟಿದವರಾಗಿದ್ದು, 20-30 ವರ್ಷ ಇಲ್ಲೇ ಜೀಪು ಚಾಲಕರಾಗಿ ಬದುಕುಕಟ್ಟಿಕೊಂಡವರು.
ಲಾಂಜ್ ಗಳ ಸೇವೆ ಮೇಲೆ ಬದುಕು ಅವಲಂಬಿತವಾಗಿತ್ತು. ಸರ್ಕಾರ ಪರಿಹಾರ ನೀಡಬೇಕು. ಪರಿಹಾರವೆಂದರೆ ಕೇವಲ ಹಣ ಮಾತ್ರವಲ್ಲ ಪರ್ಯಾಯವಾಗಿ ಕೆಲಸ ಕೊಟ್ಟರೆ ನಮ್ಮಜೀವನ ಮುಂದುವರೆಯುತ್ತದೆ.
ಇಲಾಖೆಯಲ್ಲಿ ಚೀಪು ಚಾಲಕರ ವೃತ್ತಿಯಿದೆ. ಅದನ್ನ ಪರ್ಯಾಯವಾಗಿ ಕೊಟ್ಟರೂ ಸಾಕು. ಅಥವಾ ಲಾಂಜ್ ಓಪನ್ ಮಾಡುದ್ರೆ ನಮಗೆ ಅನುಕೂಲವಾಗಲಿದೆ. ಸೇತುವೆ ಆಗಿರುವ ಬಗ್ಗೆ ಖುಷಿಯಿದೆ ಎಂದು ಮಗದೊಬ್ಬ ಯುವ ಚಾಲಕ ಅರುಣ ತಿಳಿಸುತ್ತಾರೆ.
ಒಟ್ಟಿನಲ್ಲಿ ಸೇತುವೆ ನಿರ್ಮಾಣ ಒಂದಿಷ್ಟು ಜನರ ಬದುಕನ್ನ ಕಟ್ಟಿಕೊಟ್ಟರೆ ಮತ್ತೊಂದಿಷ್ಟು ಜನರ ಬದುಕನ್ನಕಸಿದುಕೊಂಡಿದೆ. ಆದರೆ ಸೇತುವೆ ಉದ್ಘಾಟನೆಗೆ ಯಾರಿಗೂ ಬೇಸರವಿಲ್ಲ. ಆದರೆ 50 ಆಸುಪಾಸಿನ ಚಾಲಕರಿಗೆ ಮತ್ತೊಂದು ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ಒದಗಿದೆ. ಇವೆಲ್ಲದರ ಬಗ್ಗೆ ಯೋಚಿಸಬೇಕಿದ್ದ ಜನಪ್ರತಿನಿಧಿಗಳು ಕ್ರೆಡಿಟ್ ವಾರ್ ನಲ್ಲಿ ಮುಳುಗಿದ್ದಾರೆ.
ಸಿಗಂದೂರಿನಲ್ಲೂ ದರ್ಶನದ ಅವಧಿ ಎರಡು ಗಂಟೆ ಹೆಚ್ಚಳ
ಸಂಜೆಯ ನಂತರ ತಾಲೂಕಿನ ಸಂಪರ್ಕ ಕಳೆದುಕೊಳ್ಳುತ್ತಿದ್ದ ಕರೂರು ಬಾರಂಗಿ ಭಾಗದ ಜನರಿಗೆ ಸಿಗಂದೂರು ಸೇತುವೆ ಜಿವನಾಡಿಯಾಗಿದೆ. ಈ ಸಂಪರ್ಕ ಸೇತುವೆಯಿಂದ ದೇವಸ್ಥಾನದ ದರ್ಶನದ ಅವಧಿಯನ್ನೂ ವಿಸ್ತರಿಸಲಾಗಿದೆ. ಲಾಂಜ್ ಸೇವೆಯಿದ್ದಾಗ ಸಂಜೆ 7 ಗಂಟೆಗೆ ದೇವರ ಪೂಜೆಯೊಂದಿಗೆ ದೇವಸ್ಥಾನದ ಬಾಗಿಲು ಹಾಕಲಾಗುತ್ತಿತ್ತು. ಈಗ ಎರಡು ಗಂಟೆಯ ಅವಧಿ ವಿಸ್ತರಿಸಲಾಗಿದೆ. ರಾತ್ರಿ 9 ಗಂಟೆಯ ವರೆಗೆ ದೇವಿಯ ದರ್ಶನ ಮುಂದುವರೆಯಲಿದೆ. ಈ ಕುರಿತು ಧರ್ಮದರ್ಶಿ ರಾಮಪ್ಪನವರ ಪುತ್ರ ರವಿಕುಮಾರ್ ಸುದ್ದಿಲೈವ್ ಗೆ ಸ್ಪಷ್ಟಪಡಿಸಿದ್ದಾರೆ.
Beached lounges, jeeps out of service