SUDDILIVE || SHIVAMOGGA
ಧರ್ಮಸ್ಥಳಕ್ಕೆ ಧಕ್ಕೆ ತರುವವರನ್ನ ಬಂಧಿಸಿ-Arrest those who threaten Dharmasthala
ಶ್ರೀ ಕ್ಷೇತ್ರ ಧರ್ಮಸ್ಥಳದ ಘನತೆಗೆ ಧಕ್ಕೆ ತರುತ್ತಿರುವವರನ್ನು ತಕ್ಷಣವೇ ಬಂಧಿಸಿ ಕೂಡಲೇ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಯುವಾ ಬ್ರಿಗೇಡ್ ವತಿಯಿಂದ ಬುಧವಾರ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನೇತೃತ್ವ ವಹಿಸಿದ್ದ ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕ ಮಹೇಶ್ ಖಾರ್ವಿ ಮಾತನಾಡಿ, ದೇಶದ ಕೋಟ್ಯಂತರ ಭಕ್ತರ ಪಾಲಿನ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಇತ್ತೀಚಿನ ದಿನಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಹಿಂದೂ ವಿರೋಧಿ ಶಕ್ತಿಗಳು ಸಂಘಟಿತವಾಗಿ ಅಪಪ್ರಚಾರ ನಡೆಸುತ್ತಿವೆ. ಧರ್ಮಸ್ಥಳದ ಗೌರವ ಹಾಗೂ ಘನತೆಗೆ ಧಕ್ಕೆ ತರುವಂತ ಕೆಲಸಗಳಲ್ಲಿ ತೊಡಗಿಕೊಂಡಿವೆ. ಹಿಂದೂ ಭಕ್ತರ ಭಾವನೆ, ಶಾಂತಿ-ಸೌಹಾರ್ದತೆಗೆ ಧಕ್ಕೆ ತರುತ್ತಿದೆ. ಶ್ರೀ ಕ್ಷೇತ್ರದಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಾಮಾಜಿಕ ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಲೋಕಕಲ್ಯಾಣ ಕಾರ್ಯ ಮಾಡಲಾಗುತ್ತಿದೆ. ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವುದನ್ನು ಸಂಘಟನೆಯಿಂದ ಬಲವಾಗಿ ಖಂಡಿಸುತ್ತೇವೆ ಎಂದರು.
ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಸ್‌ಐಟಿ ಮೂಲಕ ತನಿಖೆ ನಡೆಸುತ್ತಿದೆ. ಇದೇ ವೇಳೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಹಾಗೂ ಸಮೀರ್ ರನ್ನು ಕೂಡಲೇ ಬಂಧಿಸಬೇಕು. ಅವರನ್ನು ವಿಚಾರಣೆಗೊಳಪಡಿಸಿ ಈ ಷಡ್ಯಂತ್ರದ ಪಿತೂರಿ ಮಾಡಿರುವ ಸಮಾಜ ಘಾತುಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಯುವಾ ಬ್ರಿಗೇಡ್ ತಾಲೂಕು ಸಂಚಾಲಕ ರಂಗನಾಥ ಮೊಗವೀರ್, ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹ ಸಂಚಾಲಕ ಲೋಕೇಶ್ ಕಕ್ಕರಸಿ, ತಾಲೂಕು ಸಂಚಾಲಕ ನಾಗರಾಜ ಆಚಾರ್, ಪ್ರಮುಖರಾದ ಪ್ರಶಾಂತ್ ಶ್ಯಾಡಲಕೊಪ್ಪ, ಪುಟ್ಟರಾಜ ಮಾವಲಿ, ವೀರೇಶ್ ಚಿಟ್ಟೂರು ಸೇರಿದಂತೆ ಇತರರಿದ್ದರು.
Arrest those who threaten Dharmasthala