ad

ಸಂಭ್ರಮದ ಹರೋಹರ-Cheers of Harogara

 SUDDILIVE || SHIVAMOGGA

ಸಂಭ್ರಮದ ಹರೋಹರ-Cheers of Harogara

Harogara, Cheers

ತಮಿಳು ಸಮುದಾಯದವರ ಆರಾಧ್ಯ ದೈವ ಗುಡ್ಡೇಕಲ್‌ನ ಶ್ರೀ ಬಾಲಸುಬ್ರಮಣ್ಯ ಸ್ವಾಮಿಯ ಜಾತ್ರಾ ಮಹೋತ್ಸವ ಸಂಭ್ರಮಕ್ಕೆ ಚಾಲನೆ ದೊರೆತಿದೆ. ಇವತ್ತು ಮತ್ತು ನಾಳೆ ನಡೆಯುವ ಜಾತ್ರೆ ಸಡಗರದಿಂದ ಶುರುವಾಗಿದೆ.

ಆಷಾಢ ಮಾಸದ ಭರಣಿ ಹಾಗೂ ಕೃತ್ತಿಕ ನಕ್ಷತ್ರದಂದು ನಡುವೆ ಆಡಿ ಕೃತ್ತಿಕಾ ಜಾತ್ರೆ ಹಿನ್ನೆಲೆಯಲ್ಲಿ ಸಾವಿರಾರು ಜನರು ಗುಡ್ಡೇಕಲ್‌ಗೆ ತೆರಳಿ ದೇವರ ದರ್ಶನ ಪಡೆದರು. ಜಾತ್ರೆ ಅಂಗವಾಗಿ ಬೆಳಗ್ಗೆ 4 ಗಂಟೆಯಿಂದಲೇ  ನೂರಾರು ಭಕ್ತರು ಕುಟುಂಬ ಸಮೇತರಾಗಿ ನಗರದ ನಾನಾ ಭಾಗದಿಂದ  ಪಾದಯಾತ್ರೆ ಮೂಲಕ ಹೊರಟು ದೇವಸ್ಥಾನ ತಲುಪಿ ಹರಕೆ ತೀರಿಸುತ್ತಿದ್ದಾರೆ.

ಅರಿಶಿನದ ಮಡಿ ವಸ್ತ್ರ ಧರಿಸಿದ ಮಹಿಳೆಯರು, ಮಕ್ಕಳು, ಹಿರಿಯರು ಮತ್ತು ಯುವಕರು ನಾನಾ ರೀತಿಯಿಂದ ಅಲಂಕೃತಗೊಂಡಿದ್ದ ಕಾವಡಿಯನ್ನು ಹೊತ್ತು, ಬಾಯಿಗೆ ವೇಲಾಯುಧ ಚುಚ್ಚಿಕೊಂಡು, ಕಬ್ಬಿಣದ ಮುಳ್ಳಿನ ಪಾದುಕೆ ಧರಿಸಿ ದೇವರ ನಾಮವಾದ ಹರೋ ಹರೋ ಎಂದು ಹೇಳುತ್ತಾ ಮಂಗಳವಾದ್ಯದೊಂದಿಗೆ ದೇವಸ್ಥಾನಕ್ಕೆ ತೆರಳಿ ಹರಕೆ ಒಪ್ಪಿಸಲಾಗುತ್ತಿದೆ.  ಹರಕೆ ತೀರಿಸುವ ಸಂಬಂಧ ಭಕ್ತರು ಹೊತ್ತು ಬರುತ್ತಿದ್ದ ಕಾವಡಿ ಒಂದಕ್ಕಿಂದು ಮನಮೋಹಕವಾಗಿವೆ.

ಪ್ರತಿ ವರ್ಷದ ಜಾತ್ರೆ ಸಂದರ್ಭದಲ್ಲಿ ಸಾಮಾನ್ಯವಾಗಿ ಮಳೆ ಸುರಿಯುವುದು ವಾಡಿಕೆ. ಆದರೆ ಕಳೆದ ಬಾರಿ ಮಳೆಯಿರಲಿಲ್ಲ. ಈ ಬಾರಿ ಮಳೆ ವಿಶ್ರಾಂತಿ ನೀಡಿದೆ. ಹಾಗಾಗಿ ಭಕ್ತರು ಕುಟುಂಬ ಸಮೇತ ನಡೆದುಕೊಂಡು ಬಂದು ಹರಕೆ ತೀರಿಸಲು ಒಂದು ರೀತಿ ಅನುಕೂಲಕರವಾದ ವಾತಾವರಣ ನಿರ್ಮಾಣವಾಗಿದೆ.

ಹರಕೆ ತೀರಿಸಲು ಬರುವ ಭಕ್ತರು ಹಾಗೂ ದೇವರ ದರ್ಶನ ಮತ್ತು ಜಾತ್ರೆಗೆ ಬರುವ ಸಾರ್ವಜನಿಕರಿಗೆ ದೇವಸ್ಥಾನ ಸಮಿತಿಯಿಂದ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ಏರ್ಪಡಿಸಿದೆ. ಅಲ್ಲಲ್ಲಿ ಕುಡಿಯುವ ನೀರು ಪೂರೈಸಲಾಯಿತು. ದೇವಸ್ಥಾನ ಸಮಿತಿ ಅಲ್ಲದೆ ತಮಿಳು ಸಮುದಾಯ ನಾನಾ ಸಂಘ, ಸಂಸ್ಥೆಗಳಿಂದ ಬಂದ 450 ಕ್ಕೂ ಹಚ್ಚು ವಾಲಂಟೈರ್ ಗಳು ಪ್ರಸಾದ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಜಾತ್ರೆ ಅಂಗವಾಗಿ ಶ್ರೀ ಬಾಲಸುಬ್ರಮಣ್ಯ ದೇವರಿಗೆ ವಿಶೇಷ ಪೂಜೆ, ಪುನಸ್ಕಾರ ಏರ್ಪಡಿಸಲಾಗಿತ್ತು. ಬೆಳಗ್ಗೆ 4 ಗಂಟೆಯಿಂದಲೇ ಶಿವಮೊಗ್ಗ, ಚಿತ್ರದುರ್ಗ, ಅರಸೀಕೆರೆ, ಚಿಕ್ಕಮಗಳೂರು ಮತ್ತಿತರ ಕಡೆಗಳಿಂದ ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಜಾತ್ರೆ ಅಂಗವಾಗಿ ವಾಹನಗಳಿಗೆ ಬದಲೀ ವ್ಯವಸ್ಥೆ ಮಾಡಲಾಗಿದೆ. ಕವಡಿ ಹೊತ್ತು, ಅರಸಿನ ವಸ್ತ್ರ ಉಟ್ಟುಕೊಂಡು ವೇಲಾಯುಧ ಚುಚ್ಚಿಕೊಂಡು ಬರುವ ಭಕ್ತರಿಗೆ ಮತ್ತು ಜೊತೆಯಲ್ಲಿ ಬರುವ ಸಂಬಂಧಿಕರಿಗೆ ವಿದ್ಯಾನಗರದ ರೈಲ್ವೆ ಓವರ್ ಬ್ರಿಡ್ಜ್ ನಿಂದ ಬರಲು ಅವಕಾಶ ಕಲ್ಪಿಸಲಾಗಿದೆ.

ದೇವಸ್ಥಾನದಲ್ಲಿ ಹರಕೆ ತೀರಿಸಿ  ವಾಪಾಸಾಗುವ ಭಕ್ತರಿಗೆ ರೈಲ್ವೆ ಓವರ್ ಬ್ರಿಡ್ಜ್ ಕೆಳಗಿನ ರಸ್ತೆಯ ಮೂಲಕ ಹೊರ ಹೋಗಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿ ಬದಲೀ ರಸ್ತೆ ಮಾರ್ಗಕ್ಕೆ ಸ್ಥಳೀಯರು ಆಕ್ಷೇಪಿಸಿದ್ದರು. ಈ ಬಾರಿ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣವಾಗಿರುವುದರಿಂದ ಯಾವ ಗೊಂದಲ ನಿರ್ಮಾಣವಾಗಿಲ್ಲ‌.  

ಕಳೆದ ಬಾರಿ  ಎರಡೂ ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ನಾಳೆ ಜಾತ್ರೆಯು ಇನ್ನೂ ವಿಜೃಂಭಣೆಯಿಂದ ನಡೆಯುವ ನಿರೀಕ್ಷೆ ಇದೆ. ಆ ವೇಳೆ ಸಂಚಾರ ಏನಾಗಲಿದೆ ಕಾದು ನೋಡಬಹುದಾಗಿದೆ. ಓವರ್ ಬ್ರಿಡ್ಜ್ ಮತ್ತು ದೇವಸ್ಥಾನದ ಪ್ರವೇಶ ದ್ವಾರಗಳಲ್ಲಿ ಅಂಗಡಿಗಳನ್ನ ನಿರ್ಮಿಸಲಾಗಿದೆ. ದೇವಸ್ಥಾನದ ಅಂಗಳದಲ್ಲಿ ಜಾಯಿಂಟ್ ವೀಲ್ ಗಳನ್ನ ನಿರ್ಮಿಸಲಾಗಿದೆ. ಮನರಂಜನೆಗೆ ಅವಕಾಶ ಮಾಡಿಕೊಡಲಾಗಿದೆ. 

ವಿಗ್ರಹಕ್ಕೆ ಇನ್ನೂ ಅನುಮತಿ ದೊರೆತಿಲ್ಲ

151 ಅಡಿ ಬಾಲಸುಬ್ರಹ್ಮಣ್ಯ ದೇವರ ವಿಗ್ರಹ ನಿರ್ಮಾಣಕ್ಕೆ ಕಳೆದ ವರ್ಷವೇ ಚಾಲನೆ ದೊರೆತಿತ್ತು.‌ ಆದರೆ ಕಾಮಗಾರಿನೇ ಶುರುವಾಗಿರಲಿಲ್ಲ. ಏರ್ ಪೋರ್ಟ್ ಅಥಾರಿಟಿಯ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ದೇವಸ್ಥಾನದ ಟ್ರಸ್ಟ್ ಈ ಹಿಂದೆ ತಿಳಿಸಿತ್ತು. ಏರ್ ಪೋರ್ಟ್ ನಿಂದ ದೇವಸ್ಥಾನ ರಸ್ತೆ ಮಾರ್ಗವಾಗಿ 17 ಕಿಮಿ ದೂರದಲ್ಲಿದೆ. ಅನುಮತಿಯ ನಿರೀಕ್ಷೆಯಲ್ಲಿ ಟ್ರಸ್ಟ್ ಮುಂದುವರೆದಿದೆ.

Cheers of Harogara

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close