SUDDILIVE || HOSANAGARA
ನೀರಿನ ಹೊಂಡಕ್ಕೆ ಬಿದ್ದು ಮಗನ ಸಾವು ಆಕಸ್ಮಿಕವಲ್ಲ, ಕೊಲೆ ಎಂದು ಪೋಷಕರ ಕಣ್ಣೀರು-Parents cry as son's death after falling into a water hole is not an accident, but murder
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕರಿನಗೊಳ್ಳಿ ಗ್ರಾಮದಲ್ಲಿ 14 ವರ್ಷದ ಬಾಲಕನ ಸಾವು ಆಘಾತ ಮೂಡಿಸಿದೆ. ಮೇ 26 ರಂದು ಸುರೇಶ್ ಎಂಬುವರ ಪುತ್ರ ಸುಬ್ರಹ್ಮಣ್ಯ(14) ಮನೆಯ ಸಮೀಪದ ಶುಂಠಿ ತೋಟದಲ್ಲಿದ್ದ ಕೃತಕ ನೀರಿನ ಹೊಂಡದಲ್ಲಿ ನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ದುರಂತದ ಕರಿ ನೆರಳನ್ನು ಬೀರಿದೆ. ಪೊಲೀಸರು ಇದನ್ನು “ಆಕಸ್ಮಿಕ ಸಾವು” ಎಂದು ದಾಖಲಿಸಿ ಪ್ರಕರಣ ದಾಖಲಿಸಿಕೊಂಡರೂ , ಮಗನನ್ನು ಕಳೆದುಕೊಂಡ ಪೋಷಕರು ಮತ್ತು ಕುಟುಂಬಸ್ಥರು ಕಣ್ಣೀರಿನಿಂದ ಹೇಳುತ್ತಿರುವುದು – “ಇದು ಆಕಸ್ಮಿಕವಲ್ಲ, ಪೂರ್ವ ನಿಯೋಜಿತ ಕೊಲೆ.”
ಘಟನೆ ಹಿನ್ನಲೆ
ಮೇ 26 ರ ಮಧ್ಯಾಹ್ನ ಮಳೆ ಸುರಿಯುತ್ತಿತ್ತು. ಆ ಸಮಯದಲ್ಲಿ ಸುರೇಶ್ ಅವರ ಪುತ್ರನು ಅಜ್ಜಿಯ ಮನೆಗೆ ನಾಗದೇವರ ಪ್ರಸಾದ ಕೊಡುವುದಾಗಿ ಹೇಳಿ ಹೊರಟಿದ್ದ. ಗಂಟೆಗಳಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ಆರಂಭಿಸಿದರು. ಸಂಜೆ ವೇಳೆಗೆ ಮನೆ ಹಿಂಭಾಗದಲ್ಲಿದ್ದ ಶುಂಠಿ ತೋಟದ ಬಳಿ ಟಾರ್ಪಲ್ ಹಾಕಿ ನಿರ್ಮಿಸಿದ್ದ ನೀರಿನ ಹೊಂಡದಲ್ಲಿ ಬಾಲಕನ ಶವ ಪತ್ತೆಯಾಗಿತ್ತು ಆದರೆ ಇದು ಆಕಸ್ಮಿಕ ಸಾವಲ್ಲ ಕೊಲೆ ಎಂದು ಪೋಷಕರು ಆರೋಪಿಸುತಿದ್ದಾರೆ.
ಪೋಷಕರ ಆಕ್ರೋಶ
ಮೃತ ಬಾಲಕನ ತಂದೆ ಸುರೇಶ್ ಅವರು ಹೇಳುವಂತೆ “ಮಳೆ ಬರುವ ಸಮಯದಲ್ಲಿ ಮಕ್ಕಳು ಆಟವಾಡಲು ಕೆರೆಗೆ ಇಳಿಯುವುದು ಅಸಾಧ್ಯ. ನಮ್ಮ ಮಗ ಮನೆಯಲ್ಲಿದ್ದಾಗಲೂ ಎಂದಿಗೂ ನಗ್ನವಾಗಿ ಸ್ನಾನ ಮಾಡಿರಲಿಲ್ಲ. ಆದರೆ ಶವ ಪತ್ತೆಯಾದಾಗ ಅವನು ಬಟ್ಟೆಯಿಲ್ಲದೇ ಕಂಡುಬಂದಿದ್ದಾನೆ. ಇಷ್ಟೇ ಅಲ್ಲ, ಅವನ ಸೊಂಟದಲ್ಲಿ ಸದಾ ಇರುತ್ತಿದ್ದ ರೇಷ್ಮೆಯ ಉಡುದಾರ ಕಾಣಿಸದೆ ಹೋಯಿತು. ಇವೆಲ್ಲವೂ ಅವನನ್ನು ಯಾರೋ ಚಿತ್ರಹಿಂಸೆ ನೀಡಿ ಕೊಲೆಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಆರೋಪಿಸುತ್ತಾರೆ.
“ಮಗನನ್ನು ಕಳೆದುಕೊಂಡ ನೋವಿಗೆ ಮೀರಿದ ನೋವು, ನಮಗೆ ಸಹಾಯ ಮಾಡುವ ಬದಲು ನಮ್ಮ ಮೇಲೆಯೇ ಬೆದರಿಕೆ ಹಾಕುತ್ತಿರುವುದು. ನಮ್ಮ ದೂರು ಸ್ವೀಕರಿಸದೇ, ನಿಜವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ನಮ್ಮ ಅಳಳು ಯಾರಿಗೂ ಅರ್ಥವಾಗುತ್ತಿಲ್ಲ.” ಎಂದು ಮೃತ ಬಾಲಕನ ತಾಯಿ ಕಣ್ಣೀರಿನಿಂದ ತನ್ನ ನೋವನ್ನು ಹಂಚಿಕೊಳ್ಳುತ್ತಾರೆ.
ಕುಟುಂಬ ಸದಸ್ಯರ ಪ್ರಕಾರ, ಶವ ಪತ್ತೆಯಾದ ಸ್ಥಳದಲ್ಲೇ ಪಂಚನಾಮೆ ಮಾಡಬೇಕಾಗಿದ್ದರೂ, ಪೊಲೀಸರು ಬೇರೆ ಕೆರೆಯ ಬಳಿ ದಾಖಲಾತಿ ಮಾಡಿದ್ದಾರೆ. ಇಂತಹ ನಿರ್ಲಕ್ಷ್ಯದಿಂದ ಪೊಲೀಸರು ಯಾರನ್ನಾದರೂ ಉಳಿಸಲು ಯತ್ನಿಸುತ್ತಿದ್ದಾರೆಯೇ ಎಂಬುದು ಪೋಷಕರಲ್ಲಿ ಗಂಭೀರ ಅನುಮಾನ ಮೂಡಿಸಿದೆ.
“ಆ ದಿನ ಮಳೆ ಸುರಿಯುತ್ತಿತ್ತು. ಮಳೆಗಾಲದಲ್ಲಿ ಮಕ್ಕಳು ಬಟ್ಟೆ ಬಿಚ್ಚಿ ಸ್ನಾನಕ್ಕೆ ಇಳಿಯುತ್ತಾರೆ ಎನ್ನುವುದೇ ಅನುಮಾನಾಸ್ಪದ. ಅಲ್ಲದೆ, ಶವ ಪತ್ತೆಯಾದ ಸಮಯದಲ್ಲಿ ಬಾಲಕ ಸಂಪೂರ್ಣ ನಗ್ನ ಸ್ಥಿತಿಯಲ್ಲಿ ಕಂಡುಬಂದಿರುವುದು ಗಂಭೀರ ಪ್ರಶ್ನೆ ಎಬ್ಬಿಸಿದೆ. ಪೋಷಕರ ಹೇಳಿಕೆಗಳಲ್ಲಿ ಸತ್ಯವಿದೆ. ಆದ್ದರಿಂದಲೇ ಈ ಪ್ರಕರಣವನ್ನು ಆಳವಾಗಿ ತನಿಖೆ ಮಾಡಬೇಕು.” ಎಂದು ಸ್ಥಳೀಯರು ಆಗ್ರಹಿಸುತಿದ್ದಾರೆ.
ಮಗನನ್ನು ಕಳೆದುಕೊಂಡ ದುಃಖದಲ್ಲಿ ಸುರೇಶ್ ಕುಟುಂಬ ದಿಕ್ಕೆಟ್ಟಂತಾಗಿದೆ. ಆದರೆ ತಮ್ಮ ಮಗನ ಸಾವಿನ ನೈಜ ಸತ್ಯ ಬಹಿರಂಗವಾಗಬೇಕು ಎಂಬ ದೃಢಸಂಕಲ್ಪ ಅವರಲ್ಲಿ ಗೋಚರಿಸುತ್ತಿದೆ.“ನಮ್ಮ ಮಗನ ಆತ್ಮಕ್ಕೆ ನ್ಯಾಯ ಸಿಗುವವರೆಗೆ ನಾವು ಹೋರಾಟ ನಿಲ್ಲಿಸುವುದಿಲ್ಲ. ಅಧಿಕಾರಿಗಳು ಎಷ್ಟು ನಿರ್ಲಕ್ಷ್ಯ ತೋರಿದರೂ, ಸತ್ಯವನ್ನು ಹೊರತರುವುದಕ್ಕಾಗಿ ಎಲ್ಲರ ಬಾಗಿಲು ತಟ್ಟುತ್ತೇವೆ” ಎಂದು ಪೋಷಕರು ತೀವ್ರ ಮನವಿ ಮಾಡಿದ್ದಾರೆ.
ಒಂಬತ್ತು ವರ್ಷಗಳ ನಿರೀಕ್ಷೆಯ ಬಳಿಕ ದೇವರ ದಯೆಯಿಂದ ಸುಬ್ರಹ್ಮಣ್ಯ ಅವರ ಬದುಕಿನ ಬೆಳಕಾಗಿ ಬಂದಿದ್ದ. ಆದರೆ ಇಂದೀಗ ಅದೇ ದೇವರು ಆ ಸಂತೋಷವನ್ನು ಕಿತ್ತುಕೊಂಡಂತಾಗಿದ್ದು, ಸುರೇಶ್ ದಂಪತಿಗಳ ಕಣ್ಣೀರು ನಿಲ್ಲುವುದೇ ಇಲ್ಲ. ಅವರ ಅಳಲು, ನೋವು ಎಂತಹ ಕಲ್ಲು ಹೃದಯವನ್ನೂ ಕರಗುವಂತೆ ಮಾಡುತ್ತದೆ.
Parents cry as son's death after falling into a water hole is not an accident, but murder
