SUDDILIVE || SHIVAMOGGA
ಪಂಪ್ಡ್ ಸ್ಟೋರೇಜ್ ಕೈಬಿಡಲು ಇತಿಹಾಸತಜ್ಞರ ಮನವಿ-Historians appeal to abandon pumped storage 
ರಾಜ್ಯ ಸರ್ಕಾರದ ಮಹತ್ವಾಂಕಾಕ್ಷಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನೇಕ ಐತಿಹಾಸಿಕ ಸ್ಮಾರಕಗಳಿಗೆ ಕುತ್ತು ಬರುವುದರಿಂದ ಪ್ರಸ್ತಾವಿತ ಯೋಜನೆಯನ್ನು ಕೈಬಿಡಬೇಕು ಎಂದು ಇತಿಹಾಸತಜ್ಞರು ಆಗ್ರಹಿಸಿದ್ದಾರೆ.
ಇತಿಹಾಸ ತಜ್ಞ ಡಾ.ಬಾಲಕೃಷ್ಣ ಹೆಗಡೆ ಮತ್ತು ಅಜಯಕುಮಾರ ಶರ್ಮಾ ಜಂಟಿ ಪತ್ರಿಕಾ ಹೇಳಿಕೆಯಲ್ಲಿ, ಪ್ರಸ್ತಾವಿತ ಯೋಜನೆ ಕೇವಲ ಪರಿಸರಕ್ಕಷ್ಷಟೇ ಅಲ್ಲ ಯೋಜನಾ ಪ್ರದೇಶದಲ್ಲಿನ ಅನೇಕ ಇತಿಹಾಸ, ಪರಂಪರೆ, ಸಂಸ್ಕೃತಿ ಸಾರುವ ಸ್ಮಾರಕಗಳಿಗೆ ಧಕ್ಕೆ ತರುವ ಯೋಜನೆಯಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಪಟ್ಟಿಯಲ್ಲಿರುವ ಈ ಸ್ಮಾರಕಗಳ ಬಗ್ಗೆ ಕೆಪಿಸಿಎಲ್ ಆಗಲೀ ಸರ್ಕಾರವಾಗಲೀ ಗಮನ ನೀಡಿಲ್ಲ. ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆ, ಕರ್ನಾಟಕ ಪುರಾತ್ವ ಸ್ಮಾರಕ ಸಂರಕ್ಷಣಾ ಕಾಯ್ದೆಗಳ ಸಂಪೂರ್ಣ ಉಲ್ಲಂಘನೆ ಸದರಿ ಯೋಜನೆಯಿಂದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಾತನ ಚತುರ್ಮುಖ ಬಸದಿ, ವರ್ಧಮಾನ ಸ್ವಾಮಿ ದೇವಾಲಯ, ವೀರಭದ್ರ ದೇವಸ್ಥಾನ, ಅನೇಕ ಶಾಸನಗಳು ಈ ಯೋಜನಾ ಪ್ರದೇಶದಲ್ಲಿವೆ. ಇವೆಲ್ಲವೂ ಭಾರತೀಯ ಪುರಾತತ್ವ ಇಲಾಖೆಯ ಪಟ್ಟಿಯಲ್ಲಿವೆ.
ಸಾ.ಶ. 16ನೇ ಶತಮಾನದಲ್ಲಿ ಆಲಕ್ವಿಕೆ ನಡೆಸಿದ ಕೆಚ್ಚೆದೆಯ ರಾಣಿ ಚೆನ್ನಭೈರಾದೇವಿ ಆಳ್ವಿಕೆ ನಡೆಸಿದ ಪ್ರದೇಶ ಇದಾಗಿದೆ. ಸಾ.ಶ.1552ರಿಂದ 1606ರ ವರೆಗೆ ಗೇರುಸೊಪ್ಪೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಲಾಗಿದೆ. ಅಲ್ಲದೆ ರಾಣಿ ಚೆನ್ನಭೈರಾದೇವಿಯವರ ಸ್ಮರಣಾರ್ಥ ಭಾರತ ಸರ್ಕಾರ ಸ್ಮಾರಕ ಅಮನಚೆ ಚೀಟಿಯನ್ನೂ ಹೊರ ತಂದಿದೆ. ಒಂದು ವೇಳೆ ಪ್ರಸ್ತಾವಿತ ಯೋಜನೆಯನ್ನು ಜಾರಿಗೊಳಿಸಲೇಬೇಕು ಎಂದಾದಲ್ಕಿ ಸದರಿ ಅಂಚೆ ಚೀಟಿಯನ್ನು ಸರ್ಕಾರ ವಾಪಸ್ ಪಡೆಯಲಿ ಎಂದು ಅವರು ಒತ್ತಾಯಿಸಿದ್ದಾರೆ.
ಯೋಜನೆಯ ವಿರೋಧದ ಬಗ್ಗೆ ಇವರು ಪ್ರಾಧಾನಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯ, ಕೇಂದ್ರ ಸರ್ಕಾರದ ಎಲ್ಲ ಸಚಿವರಿಗೆ, ಪರಿಸರ ಮಂತ್ರಾಲಯ, ಕೆಪಿಸಿಎಲ್ ಇಲಾಖೆಗಳಿಗೆ ಇಮೇಲ್ ಮೂಲಕ ಪತ್ರ ಬರೆದು ತಮ್ಮ ವಿರೋಧ ವ್ಯಕ್ತ ಪಡಿಸಿದ್ದಾರೆ.
Historians appeal to abandon pumped storage