ಒಳ್ಳೆಯ ವ್ಯಕ್ತಿತ್ವವೇ ಮನುಷ್ಯನ ನಿಜವಾದ ಆಸ್ತಿ-ಸತ್ಯನಾರಾಯಣ-A good personality is a man's true asset

SUDDILIVE || SHIVAMOGGA

ಒಳ್ಳೆಯ ವ್ಯಕ್ತಿತ್ವವೇ ಮನುಷ್ಯನ ನಿಜವಾದ ಆಸ್ತಿ-ಸತ್ಯನಾರಾಯಣ-A good personality is a man's true asset    

Good, personality


ಮಾಯವಾಗುವ ಕೀರ್ತಿ, ಹಣ, ಅಂಧಕ್ಕಿಂತ, ಒಳ್ಳೆಯ ವ್ಯಕ್ತಿತ್ವವೇ ಮನುಷ್ಯನ ನಿಜವಾದ ಆಸ್ತಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.

ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಗುರುವಾರ ಕಾಲೇಜಿನ ಆವರಣದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ 'ಕೌಶಲ್ಯ - 2025' ರಾಜ್ಯಮಟ್ಟದ ಸಾಂಸ್ಕೃತಿಕ ಮತ್ತು ನಿರ್ವಹಣಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಲ್ಕು ಗೋಡೆಯ ಹೊರತಾಗಿ ಕಲಿತ ಶಿಕ್ಷಣ ಬದುಕನ್ನು ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಜ್ಞಾನದ ಸಂಪಾದನೆಯ ಜೊತೆಗೆ ಸಮಾಜಕ್ಕೆ ಸದ್ಬಳಕೆಯಾಗಬೇಕು. ಅದಕ್ಕಾಗಿ ಕೌಶಲ್ಯತೆ ಎಂಬುದು ಅತ್ಯವಶ್ಯಕ. ವ್ಯಕ್ತಿತ್ವ ವಿಕಸನಕ್ಕೆ ಇಂತಹ ವೇದಿಕೆಗಳು ಪೂರಕವಾಗಿ ಬಳಸಿಕೊಳ್ಳಿ.

ಬುದ್ದಿವಂತಿಕೆಯ ಜೊತೆಗೆ ಹೃದಯವಂತಿಕೆ ರೂಪಿಸಿಕೊಳ್ಳಿ. ಜೀವನದ ಅತ್ಯಂತ ದೊಡ್ಡ ಶತ್ರುವಾಗಿ ಮೊಬೈಲ್ ಮುಂಚೂಣಿಗೆ ಬಂದಿದೆ. ಹಿರಿಯರು ಬದುಕಿದ ಸಮಾಜದ ನೆಲೆಗಟ್ಟುಗಳನ್ನು, ಆಧುನಿಕತೆಯ ಭ್ರಮೆ ಎಂಬುದು ಮರೆಸುತ್ತಿದೆ. ನಮ್ಮ ಪುರಾತನ ಸಂಸ್ಕೃತಿ ಸಂಸ್ಕಾರಗಳು ಹಿರಿಯರಿಂದ ಸಿಕ್ಕ ಬಳುವಳಿಯಾಗಿದ್ದು, ಕಾಳಜಿಯಿಂದ ಪೋಷಿಸಿ. 

ಅಂತಃಶಕ್ತಿಯನ್ನು ಬೆಳೆಸಿಕೊಳ್ಳಿ. ಸಮರ್ಥವಾದ ಆತ್ಮಸ್ಥೈರ್ಯ ರೂಡಿಸಿಕೊಳ್ಳಿ. ಎತ್ತರದ ಸ್ಥಾನಕ್ಕೆ ಏರುವುದು ಸುಲಭವಾದರೂ, ಅದನ್ನು ಉಳಿಸಿಕೊಳ್ಳುವುದು ಒಂದು ಸವಾಲು. ಅಂತಹ ಸವಾಲುಗಳಿಗೆ ಉತ್ತರ ನೀಡುವಲ್ಲಿ ನಮ್ಮ ಆತ್ಮಸ್ಥೈರ್ಯ ಸಹಕಾರಿ. 

ತುಳಿದು ಬದುಕುವುದಕ್ಕಿಂತ ತಿಳಿದು ಬದುಕಬೇಕು. ಹಾಗೆ ತಿಳಿದು ಬದುಕಿದವರು ಇತಿಹಾಸವಾಗಿ ಉಳಿಯುತ್ತಾರೆ. ಹಣಕ್ಕೆ ಹೆಚ್ಚು ಆಸ್ಪದ ನೀಡಬೇಡಿ. ಅದೃಷ್ಟದಿಂದ ಬಂದಿದ್ದು ಅಹಂಕಾರ ನೀಡಿದರೆ, ಕಷ್ಟಪಟ್ಟು ಸಂಪಾದಿಸಿದ್ದು ಸಂತೃಪ್ತಿಯನ್ನು ನೀಡುತ್ತದೆ. ಸಂಸ್ಕಾರದಿಂದ ಜಗತ್ತನ್ನು ಗೆಲ್ಲಬಹುದು. ಒಳ್ಳೆಯ ಸಂಸಾರ ಇದ್ದಲ್ಲಿ ಉತ್ತಮ ಸಂಸ್ಕಾರ ಪಡೆಯಬಹುದು. ಸಮಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಎಂದು ಹೇಳಿದರು.

ಎನ್ಇಎಸ್ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶ್ರೇಷ್ಟಿ ಮಾತನಾಡಿ, ಚಿಕ್ಕ ಮಕ್ಕಳ ಊಟ ತಿಂಡಿ ಎಂಬುದು ಮೊಬೈಲ್ ಮೇಲೆ ಅವಲಂಬಿತವಾಗಿದೆ. ದೈಹಿಕ ಆಟದಲ್ಲಿ ಪಾಲ್ಗೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ. ಭಾರತದ ಸದೃಢ ಭವಿಷ್ಯ ಕಟ್ಟುವಲ್ಲಿ ಯುವ ಸಮೂಹದ ಪಾತ್ರ ಮಹತ್ವದಾಗಿದೆ. ದಿನಪತ್ರಿಕೆಗಳನ್ನು ಅಧ್ಯಯನ ಮಾಡಿ, ವಾಸ್ತವತೆಯನ್ನು ಅರಿಯಲು ಪ್ರಯತ್ನಿಸಿ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಯು ಚಂದ್ರಪ್ಪ.ಎಸ್.ದುಂಡಪಲ್ಲಿ, ಎನ್ಇಎಸ್ ನಿರ್ದೇಶಕರಾದ ಎಚ್.ಸಿ.ಶಿವಕುಮಾರ್, ಆಜೀವ ಸದಸ್ಯರಾದ ಟಿ.ಎ.ರಾಮಪ್ರಸಾದ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಸ್ಪಂದನ್ ಹೊಳ್ಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

A good personality is a man's true asset

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close