ಅಕ್ರಮ ಮರಳು ಸಾಗಣೆ ದೂರು ನೀಡಿದ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ - ಕೊಲೆ ಯತ್ನ ಪ್ರಕರಣದಲ್ಲಿ ನಾಲ್ವರ ಬಂಧನ- Four arrested in attempted murder case

SUDDILIVE || RIPPONPETE

ಅಕ್ರಮ ಮರಳು ಸಾಗಣೆ ದೂರು ನೀಡಿದ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ - ಕೊಲೆ ಯತ್ನ ಪ್ರಕರಣದಲ್ಲಿ ನಾಲ್ವರ ಬಂಧನ-Four arrested in attempted murder case after lawyer files complaint against illegal sand transportation

Attempt, case

 ರಿಪ್ಪನ್‌ಪೇಟೆ - ಆನಂದಪುರ ಭಾಗದಲ್ಲಿ ಅಕ್ರಮ ಮರಳು ಸಾಗಣೆ ವಿರುದ್ಧ ಧೈರ್ಯವಾಗಿ ದೂರು ನೀಡಿದ್ದ ಯುವ ವಕೀಲನ ಮೇಲೆ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆ ಯತ್ನ ನಡೆಸಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. 

ಈ ಘಟನೆ ಸಾಗರ ತಾಲ್ಲೂಕಿನ ಕೊರ್ಲಿಕೊಪ್ಪ ಗ್ರಾಮದಲ್ಲಿ ನಡೆದಿದ್ದು, ಆನಂದಪುರ ಪೊಲೀಸ್ ಠಾಣೆಯಲ್ಲಿ ಗಂಭೀರ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಪಿಎಸೈ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.


ಘಟನೆಯ ವಿವರ


ದಿನಾಂಕ 16 ಜನವರಿ 2026 ರಂದು ರಾತ್ರಿ ಸುಮಾರು 12.30 ಗಂಟೆ ವೇಳೆಗೆ, ಸಾಗರ ತಾಲ್ಲೂಕಿನ ಕೊರ್ಲಿಕೊಪ್ಪ ಗ್ರಾಮದ ಈಶ್ವರ ದೇವಾಲಯದ ಸಮೀಪ ಈ ಘಟನೆ ಸಂಭವಿಸಿದ್ದು

ಪೊಲೀಸ್ ದೂರಿನ ಪ್ರಕಾರ, ಅಕ್ರಮ ಮರಳು ಸಾಗಣೆ ಕುರಿತು ಹೊಸನಗರ ತಾಲ್ಲೂಕಿನ ಚಂದಳ್ಳಿ ಗ್ರಾಮದ ನಿವಾಸಿ ಶರತ್ ಅವರು 112 ಸಹಾಯವಾಣಿಗೆ ದೂರು ನೀಡಿದ್ದ ಹಿನ್ನೆಲೆ, ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದ ಸಮಾನ ಉದ್ದೇಶದೊಂದಿಗೆ 8 ಜನರ ಗುಂಪು ಕಟ್ಟಿಕೊಂಡಿದ್ದಾರೆ. ಸ್ಕಾರ್ಪಿಯೋ, ಸ್ವಿಫ್ಟ್ ಕಾರುಗಳು ಹಾಗೂ ಎರಡು ಬೈಕ್‌ಗಳಲ್ಲಿ ಶರತ್ ಅವರನ್ನು ಹಿಂಬಾಲಿಸಿ, ಅವರ ಕಾರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು, ಕಲ್ಲುಗಳಿಂದ ಕಾರನ್ನು ಸಂಪೂರ್ಣವಾಗಿ ಜಖಂಗೊಳಿಸಿದ್ದಾರೆ.


ಮಾರಣಾಂತಿಕ ಹಲ್ಲೆ ಮತ್ತು ಅಪಹರಣ ಯತ್ನ


ಕಾರಿನಿಂದ ಇಳಿದ ತಕ್ಷಣ ಶರತ್ ಮೇಲೆ ಕೈಗಳಿಂದ ಹಾಗೂ ತಲೆಗೆ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಲಾಗಿದೆ. ಅಲ್ಲದೆ, ಜಂಬಿಟ್ಟಿಗೆ ಕಲ್ಲು ಎತ್ತಿ ಕೊಲ್ಲಲು ಯತ್ನಿಸಲಾಗಿದ್ದು, ತಪ್ಪಿಸಿಕೊಳ್ಳುವ ವೇಳೆ ಕಲ್ಲು ಅವರ ಬಲ ಭುಜ ಮತ್ತು ಬಲ ರಟ್ಟೆಗೆ ತಾಗಿ ಗಾಯಗಳಾಗಿವೆ.

ಇದಕ್ಕಿಂತಲೂ ಹೆಚ್ಚು ಆತಂಕಕಾರಿ ಬೆಳವಣಿಗೆಯಾಗಿ, ಆರೋಪಿಗಳು ಶರತ್ ಅವರನ್ನು ಬಲವಂತವಾಗಿ ತಮ್ಮ ಸ್ಕಾರ್ಪಿಯೋ ಕಾರಿಗೆ ಹತ್ತಿಸಿಕೊಂಡು ಅಪಹರಣ ಯತ್ನ ನಡೆಸಿದ್ದಾರೆ. ಈ ವೇಳೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಪೊಲೀಸ್ ಠಾಣೆಗೆ ದೂರು ನೀಡಿದರೆ ಎಸ್‌ಸಿ/ಎಸ್‌ಟಿ ಹುಡುಗರಿಂದ ಸುಳ್ಳು ಪ್ರಕರಣ ದಾಖಲಿಸಿ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಆರೋಪಿಗಳು ಯಾರು?


ಈ ಪ್ರಕರಣದಲ್ಲಿ ದರ್ಶನ್, ಪ್ರವೀಣ್ , ಶಿವರಾಮ, ದಿವಾಕರ ಸೇರಿದಂತೆ ಇನ್ನಿತರ ನಾಲ್ವರು ಆರೋಪಿಗಳಾಗಿದ್ದಾರೆ.

ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಎಸ್.ಪಿ. ಅವರು ಪ್ರಕರಣ ದಾಖಲಿಸಿಕೊಂಡಿದ್ದು, ವಿವಿಧ ಗಂಭೀರ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.


ಪೊಲೀಸ್ ತನಿಖೆ ಮುಂದುವರಿದಿದೆ..


ಘಟನೆಯ ಗಂಭೀರತೆಯನ್ನು ಗಮನಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಅಕ್ರಮ ಮರಳು ಸಾಗಣೆ ಮಾಫಿಯಾದೊಂದಿಗೆ ಸಂಬಂಧಗಳಿದ್ದೆಯೇ ಎಂಬುದರ ಕುರಿತು ಕೂಡ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತನಿಖೆಯ ನಂತರ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Four arrested in attempted murder case 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close