ಶಿವಮೊಗ್ಗದಲ್ಲಿ ಎಂಎಲ್‌ಸಿ ಬಲ್ಲೀಸ್ ಬಾನು ಅಧ್ಯಕ್ಷತೆಯಲ್ಲಿ ಅಲ್ಪಸಂಖ್ಯಾತರ ಸಭೆ, ಬಜೆಟ್‌ನಲ್ಲಿ ಅಗತ್ಯ ಸೌಲಭ್ಯಗಳ ಕುರಿತು ಚರ್ಚೆ-Minority meeting chaired by MLC Ballys Banu in Shivamogga, discussion on essential facilities in the budget

SUDDILIVE || SHIVAMOGGA

ಶಿವಮೊಗ್ಗದಲ್ಲಿ ಎಂಎಲ್‌ಸಿ ಬಲ್ಲೀಸ್ ಬಾನು ಅಧ್ಯಕ್ಷತೆಯಲ್ಲಿ ಅಲ್ಪಸಂಖ್ಯಾತರ ಸಭೆ, ಬಜೆಟ್‌ನಲ್ಲಿ ಅಗತ್ಯ ಸೌಲಭ್ಯಗಳ ಕುರಿತು ಚರ್ಚೆ-Minority meeting chaired by MLC Balkis Banu in Shivamogga, discussion on essential facilities in the budget   

Minority, Meeting



ಶಿವಮೊಗ್ಗ ತಾಲ್ಲೂಕಿನಲ್ಲಿ ಅಲ್ಪಸಂಖ್ಯಾತ ಪ್ರತಿನಿಧಿಗಳ ಸಭೆ ಏರ್ಪಡಿಸಲಾಗಿದ್ದು, ಕರ್ನಾಟಕ ವಿಧಾನ ಪರಿಷತ್ ಸದಸ್ಯೆ ಎಂಎಲ್‌ಸಿ ಬಲ್ಲೀಸ್ ಬಾನು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ನಾಯಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತರು ಭಾಗವಹಿಸಿ ಅಲ್ಪಸಂಖ್ಯಾತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿದರು.

ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಅನ್ಸರ್ ಅಹ್ಮದ್ ಅವರು ಆಟೋ ಚಾಲಕರಿಗೆ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡಬೇಕು ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಮೂಲಕ ಆಟೋ ರಿಕ್ಷಾಗಳಿಗೆ ಸಾಲ ಮತ್ತು ಸಹಾಯಧನವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಆಮ್ ಆದ್ಮಿ ಪಕ್ಷದ ನಾಯಕ ನಜೀರ್ ಅಹ್ಮದ್ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಯುವಕ–ಯುವತಿಯರಿಗಾಗಿ ಐಟಿಐ ಸ್ಥಾಪನೆ ಮಾಡುವ ಅಗತ್ಯವಿದೆ ಎಂದು ತಿಳಿಸಿದರು. ಅಲ್ಪಸಂಖ್ಯಾತ ವಾರ್ಡುಗಳಲ್ಲಿ ವಾಸಿಸುವ ಕುಟುಂಬಗಳಿಗೆ ಸ್ಥಳೀಯ ಸರ್ಕಾರಿ ಅಧಿಕಾರಿಗಳಿಂದ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದರು.

ಸೌತ್ ಬ್ಲಾಕ್ ಕಾಂಗ್ರೆಸ್ ನಾಯಕ ಕಲೀಂ ಪಾಷ ಅವರು ಹಣ್ಣು ಮಾರಾಟಗಾರರಿಗೆ ನಿಗದಿತ ಸ್ಥಳ ಗುರುತಿಸಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಹಾಗೂ ವಾಸದ ಮನೆ ಇಲ್ಲದವರಿಗೆ ಮನೆ ಒದಗಿಸಬೇಕು ಎಂದು ಆಗ್ರಹಿಸಿದರು. 2011ರಿಂದ ಗುಜರಿ ವ್ಯಾಪಾರಿಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಅವರಿಗೆ ಆರ್ಥಿಕ ಸಹಾಯ ಹಾಗೂ ವಸತಿ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು. ಅಲ್ಲದೆ ನ್ಯೂ ಮಂಡಳಿ ಸರ್ಕಲ್, ಸೂಳೆಬೈಲು ಸೇರಿದಂತೆ ವಿವಿಧೆಡೆ ಪೊಲೀಸ್ ಚೌಕಿ ನಿರ್ಮಾಣ, ಅಮೀರ್ ಅಹ್ಮದ್ ಸರ್ಕಲ್‌ನ ಮಧ್ಯಭಾಗದಲ್ಲಿರುವ ಅಡಚಣೆ ತೆರವುಗೊಳಿಸಿ ಸಿಗ್ನಲ್ ಅಳವಡಿಕೆ ಹಾಗೂ ಸೂಳೆಬೈಲಿನಲ್ಲಿ ಟ್ರಾಫಿಕ್ ಸಿಗ್ನಲ್ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಇಮ್ರಾನ್ ಖಾನ್ ಅವರು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಹೇಳಿದರು. ಮಾದರಿ ಪಾಳ್ಯ ಮತ್ತು ವಾದಿ–ಹುದಾ ಪ್ರದೇಶಗಳಲ್ಲಿರುವ ಸಣ್ಣ ಅಂಗನವಾಡಿ ಕೇಂದ್ರಗಳಿಗೆ ಸಿಎ ಸೈಟ್‌ನಲ್ಲಿ ಹೊಸ ಕಟ್ಟಡ ನಿರ್ಮಿಸುವ ಅಗತ್ಯವಿದೆ ಎಂದು ಮನವಿ ಮಾಡಲಾಯಿತು. 

ಎಂಐಎಂ ಪಕ್ಷದ ಸದಸ್ಯ ಮೊಹಮ್ಮದ್ ವಸೀಕ್ ಅವರು ಅಲ್ಪಸಂಖ್ಯಾತ ಬಡಾವಣೆಗಳಲ್ಲಿ ಕುಡಿಯುವ ನೀರು, ಚರಂಡಿ ಮತ್ತು ರಸ್ತೆ ಅಭಿವೃದ್ಧಿ, ವಾರ್ಡ್ ಸಂಖ್ಯೆ 13ರ ಅಭಿವೃದ್ಧಿ, ಉರ್ದು ಶಾಲೆಗಳ ಸಬಲೀಕರಣ ಹಾಗೂ ಸವಾರಿಪಾಳ್ಯದಿಂದ ಅರಕೆರೆಯವರೆಗೆ ತಡೆಗೋಡೆ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದರು. 

ಜೆಡಿಎಸ್ ನಾಯಕ ಮೊಹಮ್ಮದ್ ನಿಹಾಲ್ ಅವರು ಅಬ್ದುಲ್ ಕಲಾಂ ಆಜಾದ್ ಶಾಲೆಯನ್ನು ಎಸ್‌ಎಸ್‌ಎಲ್‌ಸಿ ಮಟ್ಟದಿಂದ ಪಿಯುಸಿ ತನಕ ವಿಸ್ತರಿಸಬೇಕು ಹಾಗೂ ಸರ್ಕಾರದಿಂದ 10 ಎಕರೆ ಭೂಮಿ ಪಡೆದು ಅಲ್ಪಸಂಖ್ಯಾತರ ಶಿಕ್ಷಣ ಕೇಂದ್ರ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು. ಸಾಮಾಜಿಕ ಕಾರ್ಯಕರ್ತೆಯಾದ ರೇಷ್ಮಾ ಅವರು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. 

ಪತ್ರಕರ್ತ ಮುದಷೀರ್ ಅವರು ಕೆಎಂಡಿಸಿ ಮೂಲಕ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಹಾಗೂ ಲೀಡ್ ಬ್ಯಾಂಕ್‌ನಿಂದ ಸಾಲ ವಿತರಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ಗಮನ ಸೆಳೆದರು. ಇದನ್ನು ಕೆಎಂಡಿಸಿಗೆ ವಿಲೀನಗೊಳಿಸಬೇಕು ಎಂದು ಸಲಹೆ ನೀಡಿದರು. ಜೊತೆಗೆ ವಕ್ಫ್ ಬೋರ್ಡ್ ಅಧ್ಯಕ್ಷರ ಆಯ್ಕೆಯಲ್ಲಿ ವಿದ್ಯಾವಂತರು, ಚಾಣಾಕ್ಷರು ಹಾಗೂ ಸಾರ್ವಜನಿಕ ಮನೋಭಾವ ಹೊಂದಿದವರನ್ನು ಆಯ್ಕೆ ಮಾಡಬೇಕೆಂದು ಹೇಳಿದರು.

ಸಭೆಯಲ್ಲಿ ಮೊದಲ ಬಾರಿಗೆ ವಿವಿಧ ಪಕ್ಷಗಳ ಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಂಬಂಧಿಸಿದ ಸಕಾರಾತ್ಮಕ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಎಂಎಲ್‌ಸಿ ಬಲ್ಲೀಸ್ ಬಾನು ಅವರು ಚುನಾವಣಾ ಆಯೋಗದ ಎಸ್‌ಐಆರ್ (ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಅಂತಿಮವಾಗಿ, ಸಭೆಯಲ್ಲಿ ಪ್ರಸ್ತಾಪವಾದ ಎಲ್ಲಾ ವಿಚಾರಗಳನ್ನು ಸಂಬಂಧಪಟ್ಟ ಇಲಾಖೆಗಳಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು, ಧನ್ಯವಾದಗಳೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಿದರು. ಸಭೆಯ ಆರಂಭದಲ್ಲಿ ಲಷ್ಕರ್ ಮೊಹಲ್ಲಾ ಮೂಲದ ಸಾಮಾಜಿಕ ಕಾರ್ಯಕರ್ತ ನೀಲು ಅವರು ಸ್ವಾಗತ ಭಾಷಣ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close